ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಗುತ್ತಿಗೆ ಬರುವೆ; ದಿನ, ಸಮಯ ನಿಗದಿಗೊಳಿಸಿ

ರೇಣುಕಾಂಬೆ ಎದುರು ಪ್ರಮಾಣ: ಬಿವೈಆರ್ ಪಂಥಾಹ್ವಾನ ಸ್ವೀಕರಿಸಿದ ಈಶ್ವರಪ್ಪ
Published 30 ಮಾರ್ಚ್ 2024, 14:31 IST
Last Updated 30 ಮಾರ್ಚ್ 2024, 14:31 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನನಗೆ ಆಶೀರ್ವಾದ ಮಾಡಿದ ಮಠಾಧೀಶರು, ಸಾಧು–ಸಂತರಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೆಂಬಲಿಗರು ಬೆದರಿಕೆ ಹಾಕಿ ನೋಯಿಸಿರುವುದಾಗಿ ನಾನು ಮಾಡಿರುವ ಆರೋಪ ಸತ್ಯ ಎಂದು ಚಂದ್ರಗುತ್ತಿಯ ರೇಣುಕಾಂಬೆ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಈಶ್ವರಪ್ಪ ಅವರು ಮಾಡಿರುವ ಆರೋಪ ನಿಜವಾಗಿದ್ದಲ್ಲಿ ರೇಣುಕಾಂಬೆಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸಂಸದ ಬಿ.ವೈ.ರಾಘವೇಂದ್ರ ಶುಕ್ರವಾರ ಚಂದ್ರಗುತ್ತಿಯಲ್ಲಿ ಪಂಥಾಹ್ವಾನ ನೀಡಿದ್ದರು.

ಇದಕ್ಕೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ‘ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬರಲು ದಿನಾಂಕ ಹಾಗೂ ಸಮಯ ನಿಗದಿ ಮಾಡಿ’ ಎಂದು ಸಂಸದರಿಗೆ ಸವಾಲು ಹಾಕಿದರು.

‘ತಾವಾಗಲಿ, ಬೆಂಬಲಿಗರಾಗಲಿ ಕೆ.ಎಸ್‌. ಈಶ್ವರಪ್ಪ ಅವರನ್ನು ಆಶೀರ್ವದಿಸಿದ ಸಾಧು–ಸಂತರು ಹಾಗೂ ಬೆಂಬಲಿಸಿದ ಮಹಿಳೆಯರಿಗೆ ನೋವು ಆಗುವಂತಹ ಮಾತು ಆಡಿಲ್ಲ. ಕಣ್ಣೀರು ಹಾಕಿಸಿಲ್ಲ’ ಎಂದು ಬಿ.ವೈ.ರಾಘವೇಂದ್ರ ಅವರು ರೇಣುಕಾಂಬೆಯ ಎದುರು ಬಂದು ಪ್ರಮಾಣ ಮಾಡಲಿ’ ಎಂದು ಒತ್ತಾಯಿಸಿದರು.

‘ದೇವರ ಹತ್ತಿರ ಹೋಗಿ ಆಣೆ–ಪ್ರಮಾಣ ಎಂದು ಗಂಟೆ ಬಾರಿಸುವುದು, ದೀಪ ಹಚ್ಚುವ ಕಾರ್ಯವನ್ನು ನಾನು ಯಾವತ್ತೂ ಮಾಡಿಲ್ಲ. ಅದರಲ್ಲಿ ನಂಬಿಕೆಯೂ ಇಲ್ಲ. ಹಾಗೆಂದು ಸಂಸದರ ಪಂಥಾಹ್ವಾನದಿಂದ ನಾನು ಹಿಂದೆ ಸರಿಯುತ್ತಿರುವೆ ಅನ್ನಿಸಬಾರದು. ಹೀಗಾಗಿ ಸವಾಲು ಸ್ವೀಕರಿಸಿದ್ದೇನೆ‘ ಎಂದರು.

‘ರಾಘವೇಂದ್ರ ಹಾಗೂ ಅವರ ಅಪ್ಪನಿಗೆ ಸುಳ್ಳು ಹೇಳಿ ಹೇಳಿ ಅಭ್ಯಾಸ. ನನ್ನ ಪುತ್ರ ಕಾಂತೇಶನಿಗೆ ಹಾವೇರಿಯಿಂದ ಟಿಕೆಟ್ ಕೊಡಿಸುತ್ತೇವೆ. ಎಂಪಿ ಮಾಡಿಯೇ ಮಾಡುತ್ತೇವೆ. ಪ್ರವಾಸ ಮಾಡಿ ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದ್ದರು. ಅದು ಸುಳ್ಳು ಎಂದು ಯಡಿಯೂರಪ್ಪ ಕೂಡ ಚಂದ್ರಗುತ್ತಿಗೆ ಬಂದು ಗಂಟೆ ಬಾರಿಸಿ ಪ್ರಮಾಣ ಮಾಡಲಿ’ ಎಂದು ಈಶ್ವರಪ್ಪ ಆಗ್ರಹಿಸಿದರು.

‘ನನ್ನ ಬೆಂಬಲಿಗರಲ್ಲಿ ಭಯ ಹುಟ್ಟಿಸುವುದು. ನೋವು ಮಾಡುವುದು ಸತತವಾಗಿ ನಡೆಯುತ್ತಿದೆ. ಯಾವ ಸ್ವಾಮೀಜಿ, ಹೆಣ್ಣುಮಕ್ಕಳಿಗೆ ನೋವು ಪಡಿಸಿದ್ದಾರೆ ಎಂಬುದನ್ನೂ ಚಂದ್ರಗುತ್ತಿ ಮಾತ್ರವಲ್ಲ ಅಯೋಧ್ಯೆಗೆ ಕರೆದರೂ ಹೋಗಿ ಗಂಟೆ ಹೊಡೆದು ಹೇಳುವೆ’ ಎಂದರು.

‘ಈ ವಿಚಾರವನ್ನು ಇಲ್ಲಿಯೇ ಬಿಡುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರೆ ನಾನೂ ಬಿಡುವೆ. ಇಲ್ಲದಿದ್ದರೆ ಮುಂದುವರಿಸಿಕೊಂಡು ಹೋಗಲು ಅಪೇಕ್ಷೆ ಪಡುವೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ನಾನು ಸ್ಪರ್ಧೆ ಮಾಡುವುದು ಇಷ್ಟವಿದ್ದ ಹಾಗೆ ಕಾಣುತ್ತದೆ. ನಾನು ಗೆದ್ದು ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಕೊನೆಗಾಣಿಸುವೆ ಎಂಬ ಆಶಯವೂ ಇದರ ಹಿಂದೆ ಇರಬಹುದು’ ಎಂದರು.

‘ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನನಗೆ ಫೋನ್ ಮಾಡಿದ್ದರು. ನಾನು ಸ್ವೀಕರಿಸಲಿಲ್ಲ. ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಗನ್ನಿ ಶಂಕರ್, ಬಾಲು, ಶ್ರೀಕಾಂತ್, ಗಂಗಾಧರ್, ಗುರುಶೇಠ್, ರವಿ ಎಂ, ಜಾಧವ್, ಮೋಹನ್, ತೇಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT