ಸೋಮವಾರ, ಸೆಪ್ಟೆಂಬರ್ 27, 2021
21 °C
ಬಿಜೆಪಿ ನಗರ ಕಾರ್ಯಕಾರಿಣಿಯಲ್ಲಿ‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಬಿಜೆಪಿ ಕಾರ್ಯಕರ್ತರನ್ನ ಮುಟ್ಟಿದರೆ ಒಂದಕ್ಕೆ ಎರಡು ಬಿಡುತ್ತೇವೆ: ಈಶ್ವರಪ್ಪ ಅವಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಹಿಂದೆ ನಮ್ಮ ಕಾರ್ಯಕರ್ತರಿಗೆ ಯಾರಾದರೂ ಹೊಡೆದರೆ ವಾಪಸ್ ಹೊಡೆಯೋದಕ್ಕೆ ನಮಗೆ ಶಕ್ತಿ ಇರಲಿಲ್ಲ. ಈಗ ಯಾರಾದರೂ ಮೈ ಮುಟ್ಟಿದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು, ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಬೆಳೆದಿದೆ’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ ನಗರದಲ್ಲಿ‌ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ನಗರ ಕಾರ್ಯಕಾರಿಣಿಯಲ್ಲಿ‌ ಮಾತನಾಡಿ ಅವರು, ‘ಲಕ್ಷ ಲಕ್ಷ ಜನರು ಬಿಜೆಪಿ ಪರವಾಗಿ ಇದ್ದಾರೆ. ಹಿಂದುತ್ವದ ಮೆರವಣಿಗೆ ಎಂದರೆ ಕಲ್ಪನೆ ಮಾಡದಷ್ಟು ಜನರು ಸೇರುತ್ತಿದ್ದಾರೆ’ ಎಂದರು.

‘ಆಗ ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡಿದರೆ ನಮ್ಮ ಹಿರಿಯರು ಬಿ ಕಾಮ್‌ ಅಟ್‌ ಆಲ್‌ ಕಾಸ್ಟ್‌ ಎಂದು ಹೇಳುತ್ತಿದ್ದರು. ಎಂತಹ ಸಂದರ್ಭ ಬಂದರೂ ಶಾಂತವಾಗಿರಿ ಎನ್ನುತ್ತಿದ್ದರು. ಏಕೆಂದರೆ ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಇವತ್ತು ಇಡೀ ಪ್ರಪಂಚದಲ್ಲಿ ಬಿಜೆಪಿ ಹೇಗೆ ಬೆಳೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ನಮ್ಮ ಕಾರ್ಯಕರ್ತನ ಮೈ ಮುಟ್ಟಿದರೆ ಫೇಸ್‌ ವಿತ್‌ ದಿ ಸೇಮ್‌ ಸ್ಟಿಕ್‌ ಅಂದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುತ್ತಿದ್ದಾರೆ. ಹೀಗಾಗಿ, ಈಗ ನಮ್ಮ ಸುದ್ದಿಗೆ ಯಾರೂ ಬರೋದಿಲ್ಲ’ ಎಂದು ಹೇಳಿದರು.

ಖಾತೆ ಬಗ್ಗೆ ಗೊಂದಲ ಇಲ್ಲ: ಆನಂದ್ ಸಿಂಗ್ ಮತ್ತು ಎಂಟಿಬಿ ಅವರಿಗೆ ಬೇರೆ ಖಾತೆ ಬೇಕು ಎಂದು ಕೇಳುತ್ತಿದ್ದಾರೆ. ಅವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅದು ಗೊಂದಲವಲ್ಲ ಎಂದು ಸ್ಪಷ್ಟಪಡಿಸಿದರು.

‘ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣ ಅವರು ಮಾಡುತ್ತಿದ್ದಾರೆ. ಆದರೆ, ನಾವು ಸುಪ್ರೀಂ ಕೋರ್ಟ್ ನಿರ್ಧಾರದ ಹಾಗೆ ಮೇಕೆದಾಟು ಯೋಜನೆ ಮಾಡುತ್ತೇವೆ.

‘ಹಾಸನ ಜಿಲ್ಲೆಯಲ್ಲಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿಯಂತಹ ನಾಯಕರ ನಡುವೆ ಪ್ರೀತಂ ಗೌಡ ಗೆದ್ದು ಬಂದಿದ್ದಾರೆ‌. ಸತತವಾಗಿ ಪಕ್ಷವನ್ನು ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೇವೇಗೌಡ ಅವರನ್ನು ಭೇಟಿ ಮಾಡಿರುವುದು ಪ್ರೀತಂ ಗೌಡರಿಗೆ ಸಮಾಧಾನ ತಂದಿಲ್ಲ. ಆದರೆ, ಬೊಮ್ಮಾಯಿ ಅವರು ಜನತಾದಳದ ನಾಯಕ ದೇವೇಗೌಡರು ಎಂದು ಹೋಗಿಲ್ಲ. ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ರೈತ ನಾಯಕರು ಎಂದು ಹೋಗಿದ್ದಾರೆ. ಇದರಿಂದ ನಮ್ಮ ಸಂಘಟನೆಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು