ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾಳಕೊಪ್ಪ | ಮತ್ಯ್ಸ ಕ್ಷಾಮ: ಸಂಕಷ್ಟದಲ್ಲಿ ಮೀನುಗಾರರು

ಎಂ.ನವೀನ ಕುಮಾರ್
Published 22 ಡಿಸೆಂಬರ್ 2023, 5:57 IST
Last Updated 22 ಡಿಸೆಂಬರ್ 2023, 5:57 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಭೀಕರ ಬರದಿಂದಾಗಿ ತಾಲ್ಲೂಕಿನ ಕೆರೆ– ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಮೀನುಗಾರಿಕೆ ಚಟುವಟಿಕೆ ಕುಂಟಿತಗೊಂಡಿದೆ. ವಾಡಿಕೆಗಿಂತ ಶೇ 55ರಷ್ಟು ಮೀನು ಇಳುವರಿ ಕುಸಿದಿದೆ. ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ತಾಳಗುಂದ, ಉಡುಗಣಿ ಹೋಬಳಿಯ ಬಹುತೇಕ ಕೆರೆಗಳು ಏತ ನೀರಾವರಿಗೆ ಒಳಪಟ್ಟಿದ್ದು, ಈ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸುವ ಬಗ್ಗೆ ಸರ್ಕಾರ ಇದುವರೆಗೂ ಸ್ಪಷ್ಟ ನಿರ್ದೇಶನ ನೀಡಿಲ್ಲ. ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,134 ಕೆರೆಗಳಿದ್ದು, ಅಂಜನಾಪುರ ಜಲಾಶಯ 1,340 ಹೆಕ್ಟೇರ್ ಜಲವಿಸ್ತೀರ್ಣ ಮತ್ತು ಅಂಬ್ಲಿಗೊಳ ಜಲಾಶಯ 640 ಹೆಕ್ಟೇರ್ ಜಲವಿಸ್ತೀರ್ಣ ಹೊಂದಿವೆ. ಇಲ್ಲಿ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತವೆ. ಈ ಜಲಾಶಯಗಳಲ್ಲಿ ಮೀನುಗಾರರು ಪರವಾನಗಿ ಪಡೆಯುವುದು ಕಡ್ಡಾಯ.

ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಹರಾಜಿನ ಮೂಲಕ ಮತ್ತು ಇಲಾಖೆ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಸಹಕಾರ ಸಂಘಗಳಿಗೆ ನೇರ ಗುತ್ತಿಗೆ ಮತ್ತು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ 800-900 ನೋಂದಾಯಿತ ಮೀನುಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ನೋಂದಣಿ ಮಾಡಿಕೊಳ್ಳದೆ ಮೀನು ಹಿಡಿಯುವ ಕಾಯಕದಲ್ಲಿ ತೊಡಗುವ ಬಡ ಬೆಸ್ತರ ಸಂಖ್ಯೆ ಸಹ ದೊಡ್ಡ ಪ್ರಮಾಣದಲ್ಲಿದೆ. ಅರೆಕಾಲಿಕ ಮೀನುಗಾರಿಕೆಯ ಕುಟುಂಬಗಳು ಉಪಕಸುಬಾಗಿ ಕೆರೆಗಳನ್ನು ಗುತ್ತಿಗೆಗೆ ಪಡೆದು ಮೀನು ಕೃಷಿ ನಡೆಸುತ್ತವೆ. ಈ ಕುಟುಂಬಗಳು ಈಗ ಕೆರೆಗಳು ಖಝಾಲಿ ಇರುವುದರಿಂದ ತೀವ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.

‘ಪ್ರಸಕ್ತ ವರ್ಷ ಭಾರಿ ಬರಗಾಲದ ಕಾರಣ ಹರಾಜಾಗಿರುವ ಕೆರೆಗಳಲ್ಲಿ ನೀರು ಇಲ್ಲ. ಮೀನು ಮರಿಗಳನ್ನು ಕೆರೆಗೆ ಬಿಡಲು ಖರ್ಚು ಮಾಡಿದ ಹಣ ಕೂಡ ವಾಪಸಾಗುವ ಲಕ್ಷಣಗಳಿಲ್ಲ. ನಮಗೆ ನೀಡಿರುವ ಕೆರೆಗಳ ಗುತ್ತಿಗೆ ಅವಧಿಯನ್ನು ಹೆಚ್ಚುವರಿಯಾಗಿ ಒಂದು ವರ್ಷ ನೀಡಬೇಕು. ಈ ವರ್ಷದ ಪರವಾನಗಿ ಪಡೆಯಲು ನೀಡಬೇಕಾದ ಹಣವನ್ನು ಮನ್ನಾ ಮಾಡಬೇಕು’ ಎಂದು ಮೀನುಗಾರರಾದ ಇಲಿಯಾಜ್ ಪಾಷಾ ಮನವಿ ಮಾಡಿದರು.

ಮಳೆಯ ಅಭಾವದಿಂದ ಮೀನು ಮರಿ ಬಿಡುವಲ್ಲಿ ಶೇ 36ರಷ್ಟು ಕುಸಿತವಾಗಿದೆ. ನೀರಿನ ಅಭಾವದಿಂದ ಮೀನು ಇಳುವರಿ ಸಹ ಕುಂಠಿತಗೊಂಡಿದೆ. ಕೆರೆ ಹಿಡುವಳಿದಾರರ ಮನವಿಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಿರಾಳಕೊಪ್ಪದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ವಿನಯ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT