ಶನಿವಾರ, ಜೂನ್ 25, 2022
25 °C
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನಾಗಿಲ್ಲ, ಮಕ್ಕಳ ಗೊಳು ಕೇಳೋರೆ ಇಲ್ಲ

ಸೊರುತ್ತಿವೆ ಸರ್ಕಾರಿ ಶಾಲೆ ಕೊಠಡಿಗಳು

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಸಾವಿರಾರು ಬಡ ಮಕ್ಕಳು ಓದುವ ಶಾಲೆಯ ಬಾಗಿಲನ್ನು ಸರ್ಕಾರ ಮುಚ್ಚುತ್ತಲೇ ಬಂದಿದೆ. ಆದರೆ, ಹಲವು ಶಾಲೆಗಳಲ್ಲಿ ತುಂಬ ಮಕ್ಕಳಿದ್ದರೂ ಮೂಲಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರಲಾಗಿದೆ.

ಜಿಲ್ಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. ನಗರದ ವ್ಯಾಪ್ತಿಯಲ್ಲೇ ಇರುವ ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳೆಲ್ಲ ಸೋರುತ್ತಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು ಕುಳಿತುಕೊಂಡು ಆತಂಕದಲ್ಲೇ 175 ಮಕ್ಕಳು ಪಾಠ ಕೇಳುತ್ತಿದ್ದಾರೆ.

ಮಕ್ಕಳು, ಶಿಕ್ಷಕರಿಗೆ ಜೀವ ಭಯ: ಕಿತ್ತು ಹೋದ ಚಾವಣಿ, ಮಳೆ ಬಂದರೆ ಸಾಕು ಸೋರುವ ಮಾಳಿಗೆ, ಯಾವಾಗ ಕಟ್ಟಡ ಕುಸಿಯಬಹುದೋ ಎಂಬ ಆತಂಕದಲ್ಲೇ 1ನೇ ತರಗತಿಯಿಂದ 7ನೇ ತರಗತಿಯ 175 ಮಕ್ಕಳು ವ್ಯಾಸಂಗ ಮಾಡುವ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ಶಾಲೆಯಲ್ಲಿ 7 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 7 ಕೋಣೆಗಳಿದ್ದು, 2 ಕೋಣೆಗಳು ಮಾತ್ರ ಚನ್ನಾಗಿವೆ. ಉಳಿದ 5 ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಶಾಲೆಗೆ ಸುರಕ್ಷಿತ ಕಟ್ಟಡ ಇಲ್ಲ. ಪಾಲಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಪಡುವಂತಾಗಿದೆ. ಇದೇ ವ್ಯವಸ್ಥೆಯಲ್ಲೇ ಪಾಠಗಳು ನಡೆಯುತ್ತಿವೆ. ಎಲ್ಲಿ ಪಾಠ ಮಾಡುವಾಗ ಕಟ್ಟಡದ ಅವಶೇಷಗಳು ಕುಸಿಯುತ್ತವೆಯೋ ಎಂಬ ಆತಂಕ ಮಕ್ಕಳದು ಹಾಗೂ ಶಿಕ್ಷಕರದು. 

ಶಾಲೆ ದುರಸ್ತಿಗೆ ಪೋಷಕರ ಆಗ್ರಹ: ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುರಸ್ತಿಪಡಿಸಬೇಕು ಎಂದು ಪೋಷಕರು ಶಾಲೆ ಆರಂಭವಾದ ಮೊದಲ ದಿನವೇ ಬೀದಿಗಳಿದು ಪ್ರತಿಭಟನೆ ನಡೆಸಿದ್ದರು.

ಸ್ಪಂದಿಸದ ಅಧಿಕಾರಿಗಳು: ಕಟ್ಟಡದ ದುಃಸ್ಥಿತಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಂಡೂ ಕಾಣದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಮುಖ್ಯ ಗುರುಗಳು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವಂತೆ ಹಲವು ಬಾರಿ ಲಿಖಿತ ರೂಪದಲ್ಲಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಶ್ರೀಮಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಾರೆ. ಆದರೆ, ಬಡವರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಅನಿವಾರ್ಯ. ಸರ್ಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆಯಿಂದ ಮಕ್ಕಳು ಪರದಾಡುತ್ತಿದ್ದಾರೆ. ಶಾಲೆಯ ಕಟ್ಟಡದ ಚಾವಣಿ ಕಡಿದು ಬೀಳುತ್ತಿದೆ. ಇದರಿಂದ ನಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಲು ಹೆದರಿಕೆ ಆಗುತ್ತಿದೆ. ಸಂಬಂಧಿತ ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಬೇಕು’ ಎಂಬುದು ಪೋಷಕರ ಆಗ್ರಹ.

ಕೊಠಡಿ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವ: 168 ಸರ್ಕಾರಿ ಶಾಲೆಯಲ್ಲಿ 356 ಹೊಸ ಕೊಠಡಿಗಳ ಪುನರ್‌ ನಿರ್ಮಾಣಕ್ಕಾಗಿ ಅನುದಾನ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕೊಠಡಿ ಸಮಸ್ಯೆಯನ್ನು ಬಗೆಹರಿಸಲು ದುರಸ್ತಿಗಾಗಿ ಖಾಲಿ ಬಿಟ್ಟಿದ್ದ ಕೊಠಡಿಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಲವು ಶಾಲೆಯಲ್ಲಿ ಬಳಕೆಯಾಗದೇ ಇದ್ದ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಆದರೆ, ಕೆಲ ಕೊಠಡಿಗಳು ಪೂರ್ಣಪ್ರಮಾಣದಲ್ಲಿ ದುಃಸ್ಥಿತಿಯಲ್ಲಿವೆ. ಮಳೆ ಬಂದರೆ ಸೋರುತ್ತವೆ. ಇಂತಹ ಕಟ್ಟಡಗಳನ್ನು ಪುನರ್‌ ನಿರ್ಮಾಣ ಮಾಡಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು, ‍ಪಕ್ಕದ ಪ್ರೌಢಶಾಲೆಯ ಹೆಚ್ಚುವರಿ ಇದ್ದ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಶಾಲೆ ಆರಂಭಿಸಲು ದೊಡ್ಡ ಸಮಸ್ಯೆ

ನ್ಯೂ ಮಂಡ್ಲಿ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳು ಸುರಕ್ಷಿತವಾಗಿದೆ. ತಕ್ಷಣ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು. ಈ ಬಗ್ಗೆ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೆ, ಅನುದಾನ ಕೊರತೆ ಕಾರಣ ಈವರೆಗೆ ದುರಸ್ತಿಯಾಗಿಲ್ಲ. ಮಳೆ ಬಂದರೆ 3 ಅಡಿ ನೀರು ನಿಲ್ಲುತ್ತದೆ. ಮೋಟರ್‌ ಇಟ್ಟು ನೀರನ್ನು ಹೊರಹಾಕಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವುದು ಅಸಾಧ್ಯವಾಗಿದೆ. ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ, ತಾತ್ಕಲಿಕವಾಗಿ ಬಾಡಿಗೆ ಕಟ್ಟಡದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಯೂ ಕೊಠಡಿ ಸಮಸ್ಯೆ ಇದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ವೈ. ಜಯಮ್ಮ.

ಬಾರದ ಅನುದಾನ, ದುರಸ್ತಿ ನಿಧಾನ

ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದ ಮಳೆಗೆ ಒಟ್ಟು 169 ಶಾಲೆಗಳು ಹಾನಿಗೀಡಾಗಿವೆ. ಇದರಲ್ಲಿ 356 ಹೊಸ ಕಟ್ಟಡ ನಿರ್ಮಾಣದ ಆವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶಿವಮೊಗ್ಗ 33, ಹಿಸನಗರ 18, ಶಿಕಾರಿಪುರ 69, ಸಾಗರ 69, ಸೊರಬ 44, ಭದ್ರಾವತಿ 49, ತೀರ್ಥಹಳ್ಳಿ 67 ಶಾಲೆಗಳಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ.

‘ಅನುದಾನ ಕೊರತೆ ಕಾರಣ ಕಾಮಗಾರಿ ಪೂರ್ಣಗೊಂಡಿಲ್ಲ. ಅನುದಾನ ಬಂದರೆ ನೀಡುತ್ತೇವೆ ಎಂದು ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಅದು ಕೂಡ ಇದುವರೆಗೂ ಸಾಕಾರಗೊಂಡಿಲ್ಲ. ಇಲಾಖೆ ನೀಡುತ್ತಿರುವ ಅನುದಾನ ಅರೆಕಾಸಿನ ಮಜ್ಜಿಗೆಯಾಗಿದೆ. ಶಾಲೆಯಲ್ಲಿ ಒಡೆದು ಹೋಗಿರುವ ಹೆಂಚಿನ ರಿಪೇರಿ ಮಾಡಲು ಸಾಲುವುದಿಲ್ಲ. ಕೊಠಡಿ ನಿರ್ಮಿಸಲು ಆಗುವುದೇ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.

ಕೆಲ ಶಾಲೆಗಳಿಗಷ್ಟೇ ಸುಣ್ಣ ಬಣ್ಣದ ಭಾಗ್ಯ

ಹೊಸಕೊಪ್ಪ ಶಿವು

ಕೋಣಂದೂರು: ಈಚೆಗಷ್ಟೇ ಪ್ರಾರಂಭವಾದ ಸರ್ಕಾರಿ ಶಾಲೆಗಳಲ್ಲಿ ಕೆಲವೇ ಶಾಲೆಗಳಿಗೆ ಮಾತ್ರ ಸುಣ್ಣ ಬಣ್ಣದ ಭಾಗ್ಯ ಲಭಿಸಿದೆ.

ಶಾಲಾಭಿವೃದ್ಧಿ ಸಮಿತಿ, ಗ್ರಾಮ ಪಂಚಾಯಿತಿ, ದಾನಿಗಳ ನೆರವಿನಿಂದ ತಾಲ್ಲೂಕಿನ ಕೆಲವು ಶಾಲೆಗಳು ಸುಣ್ಣ ಬಣ್ಣದಿಂದ ಹೊಸ ರೂಪ ಪಡೆದು ಕಾರ್ಯಾರಂಭ ಮಾಡುತ್ತಿವೆ. ತಾಲ್ಲೂಕಿನ ಬಹುತೇಕ ಶಾಲೆಗಳ ಚಾವಣಿ, ಕಿಟಕಿ ಬಾಗಿಲುಗಳು, ಕ್ರೀಡಾಂಗಣ, ಕಾಂಪೌಂಡ್ ಸರಿಯಾಗಿಲ್ಲ. ಕೆಲವು ಕಿರಿಯ ಪ್ರಾಥಮಿಕ ಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಮುಚ್ಚಿ ದಶಕಗಳೇ ಕಳೆದಿವೆ.

ಹೆಸರಿಗೆ ಮಾತ್ರ ಸರ್ಕಾರಿ ಶಾಲೆ, ಬಹುತೇಕರು ಅತಿಥಿ ಶಿಕ್ಷಕರೇ: ತಾಲ್ಲೂಕಿನ ಹಲವು ಶಾಲೆಗಳಿಗೆ ನಿಗದಿಪಡಿಸಿದ ಶಿಕ್ಷಕರಿಲ್ಲ. ಕೆಲವು ವಿಷಯಗಳನ್ನು ಅತಿಥಿ ಶಿಕ್ಷಕರಿಂದ ಬೋಧಿಸಲಾಗುತ್ತಿದೆ. ಅವರುಗಳಿಗೆ ಕೆಲಸದ ಅನಿಶ್ಚಿತತೆ ಇರುವುದರಿಂದ ಮಕ್ಕಳ ಶಿಕ್ಷಣ ಸಮರ್ಪಕವಾಗಿ ಸಾಗುತ್ತಿಲ್ಲ ಎಂಬ ಆರೋಪ ಕೆಲವು ಪೋಷಕರದ್ದು. ಅನೇಕ ಶಾಲೆಗಳಿಗೆ ಅತಿಥಿ ಶಿಕ್ಷಕರೂ ಸಹ ಇಲ್ಲದೇ ಊರಿನ ಪದವಿ ಮುಗಿಸಿದ ಪದವೀಧರರಿಂದ ತರಗತಿಗಳನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಕಾಯಂ ಶಿಕ್ಷಕರ ನೇಮಕ ಆಗಬೇಕು ಎಂಬುದು ಪೋಷಕರ ಆಗ್ರಹ.

ಹೆಸರಿಗೆ ಮಾತ್ರ ಇಂಗ್ಲಿಷ್ ಮಾಧ್ಯಮ: ಕೆಲವು ಶಾಲೆಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೂ ಬೋಧಿಸಲಾಗುತ್ತಿದೆ. ಆದರೆ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಇಂಗ್ಲಿಷ್ ಪಾಠ ಆಗುತ್ತಿಲ್ಲ ಎಂಬುದು ಬಹುತೇಕ ಪೋಷಕರ ಆರೋಪ.

ಹಾಜರಾತಿ ಕ್ಷೀಣ: ಈ ವರ್ಷದ ಶೈಕ್ಷಣಿಕ ವರ್ಷ ಮೇ ತಿಂಗಳಿನಲ್ಲಿ ಪ್ರಾರಂಭವಾಗಿದ್ದರೂ ಹಾಜರಾತಿಯಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ಬಹುತೇಕ ವಿದ್ಯಾರ್ಥಿಗಳು ಶಾಲೆಯ ಕಡೆ ಮುಖ ಮಾಡುತ್ತಿಲ್ಲ. ಇನ್ನು ಕೆಲ ಪೋಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿಯೂ ಇದ್ದಾರೆ. ಅವಧಿಗೂ ಮುನ್ನ ತರಗತಿ ಪ್ರಾರಂಭಿಸಿರುವುದು ಕೇವಲ ವ್ಯರ್ಥ ಕಾಲಹರಣ ಎನ್ನುತ್ತಾರೆ ಕೆಲ ಪೋಷಕರು.

ದೇಶಕ್ಕಾಗಿ ನಾವು ಸಂಘಟನೆ: ಹುಂಚದಕಟ್ಟೆ ಆದರ್ಶ ಅವರ ಸಾರಥ್ಯದ ‘ದೇಶಕ್ಕಾಗಿ ನಾವು’ ಎಂಬ ಯುವಕರ ಪಡೆ ಹುಂಚದಕಟ್ಟೆ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳಲೀಮಕ್ಕಿ (ಸಿದ್ದಾಪುರ), ಕೋಣಂದೂರು ಸಮೀಪದ ಕೆರೆಕೋಡಿ ಕಿರಿಯ ಪ್ರಾಥಮಿಕ ಶಾಲೆ, ಗುಡ್ಡೇಕೊಪ್ಪ ಕಿರಿಯ ಪ್ರಾಥಮಿಕ ಶಾಲೆ, ಮೇಳಿಗೆ ಸಮೀಪದ ಕೆಳಕೆರೆ ಅಂಗನವಾಡಿ ಕಟ್ಟಡಗಳ ಸಂಪೂರ್ಣ ಸುಣ್ಣ ಬಣ್ಣದ ಕಾರ್ಯವನ್ನು ಮುಗಿಸಿ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧವಾಗಿವೆ. ಇದರೊಂದಿಗೆ ಮಳಲೀಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರಿನ ಶಿಲ್ಪಾ ಫೌಂಡೇಶನ್ ಹಾಗೂ ಪ್ರಕೃತಿ ರಿಸೈಕ್ಲಿಂಗ್ ಪ್ರೈವೇಟ್ ಲಿಮಿಟೆಡ್ ಸಹ ಕೈ ಜೋಡಿಸಿದೆ.

ಕೊರೊನಾ ಕಾಲದಲ್ಲಿ 2 ವರ್ಷಗಳಿಂದ ತರಗತಿಗಳು ನಿಯಮಿತವಾಗಿ ನಡೆದಿಲ್ಲ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಬೌದ್ಧಿಕ, ಶಾರೀರಿಕ, ಭಾವನಾತ್ಮಕ ಬದಲಾವಣೆಗೆ ಶಿಕ್ಷಕರ ಪಾತ್ರ ಹೆಚ್ಚಿದೆ.

ನಾಲ್ಕು ಕೊಠಡಿ; ಏಳು ತರಗತಿ

ವರುಣ್‌ ಬಿಲ್ಗುಣಿ

ಕುಂಸಿ: ಇರುವ ನಾಲ್ಕು ಕೊಠಡಿಯಲ್ಲಿ ಏಳು ತರಗತಿಗಳನ್ನು ನಡೆಸಬೇಕು. ಮಳೆ ಬಂದರೆ ಆ ಕೊಠಡಿಗಳು ಸೋರುತ್ತಿವೆ.

ಇದು ಇಲ್ಲಿನ ಹಳೆಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಸಮಸ್ಯೆ.

ಒಂದರಿಂದ ಏಳನೇ ತರಗತಿ ನಡೆಸಲು ಕನಿಷ್ಠ ಏಳು ಕೊಠಡಿಗಳಾದರೂ ಬೇಕು. ಆದರೆ, ಇಲ್ಲಿ ಇರುವುದು ನಾಲ್ಕೇ ಕೊಠಡಿ. ಹಾಗಾಗಿ ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗೆ ಅಥವಾ ರಂಗಮಂದಿರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರ ಕೊಠಡಿಯನ್ನು ಎರೆಡು ಭಾಗಗಳನ್ನಾಗಿ ಮಾಡಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.

ಇರುವ ನಾಲ್ಕು ಕೊಠಡಿಯ ಚಾವಣಿಯೂ ಸರಿ ಇಲ್ಲ. ಶಾಲೆಯ ಚಾವಣಿಯ ಮರವನ್ನು ಗೆದ್ದಲು ತಿಂದು ಅದರ ಮಣ್ಣಿನ ಪುಡಿ ಮಕ್ಕಳ ಮೇಲೆಯೆ ಉದುರುತ್ತಿದೆ. ಹೆಂಚುಗಳು ಸರಿ ಇಲ್ಲದೆ ಮಳೆ ಬಂದರೆ ಕೊಠಡಿಗಳು ಪೂರ್ತಿ ಸೋರುತ್ತಿವೆ. ಮಕ್ಕಳು ಜೀವ ಭಯದಲ್ಲೇ ಪಾಠ ಕೇಳುವ ಅನಿವಾರ್ಯತೆ ಇದೆ.

ಪಂಚಾಯಿತಿಯ ಅನುದಾನದಿಂದ ಶಾಲೆಗೆ ಸುಣ್ಣ ಬಣ್ಣ ಆಗಿದೆ. ಆದರೆ, ಶಾಲೆಯ ಕಿಟಕಿ ಹಾಗೂ ಬಾಗಿಲುಗಳೂ ಸರಿ ಇಲ್ಲದೆ ಶಾಲೆಯ ವಸ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲೆಯ ಅಡುಗೆ ಮನೆಯ ನೆಲ ಸಂಪೂರ್ಣ ಕಿತ್ತು ಹೋಗಿದೆ. ಅಡುಗೆ ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಶಾಲೆಯ ಬಿಸಿಯೂಟ ತಯಾರಕರು.

ಈ ಶಾಲೆಯಲ್ಲಿ 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ಬೆಂಚುಗಳು ಇಲ್ಲ. ಇರುವ ಬೆಂಚುಗಳು ಸರಿ ಇರದ ಕಾರಣ ಮಕ್ಕಳಿಗೆ ಕೂರಲು ಕಿರಿಕಿರಿಯಾಗುತ್ತಿದೆ. ಶಾಲೆಯ ಒಂದು ಕಡೆ ಕಾಂಪೌಂಡ್ ಕೂಡ ಹಾಳಾಗಿದೆ.

‘ಶಾಲೆಯ ಚಾವಣಿ ಸರಿ ಪಡಿಸಬೇಕು, ಮಕ್ಕಳಿಗೆ ಬೆಂಚುಗಳು ಬೇಕಾಗಿದೆ, ಶಾಲೆಗೆ ಇನ್ನೂ ಹೆಚ್ಚುವರಿ ಕೊಠಡಿಯ ಅವಶ್ಯಕತೆ ಇದ್ದು, ಇತ್ತ ಗಮನ ಹರಿಸಬೇಕು‘ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಮಂಜಮ್ಮ

ಕೋಟ್‌...

ಜಿಲ್ಲೆಯಲ್ಲಿ 1,161 ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ. ಕೊಠಡಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಸಿ.ಆರ್‌. ಪರಮೇಶ್ವರಪ್ಪ, ಡಿಡಿಪಿಐ, ಶಿವಮೊಗ್ಗ

ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯ ಕನಿಷ್ಠ ಆವಶ್ಯಕತೆ ಪೂರೈಸುವಲ್ಲಿ ವಿಫಲವಾಗಿದೆ. ದಾನಿಗಳಿಂದ, ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಆವಶ್ಯಕತೆಗಳನ್ನು ಪೂರೈಸುವುದು ಇಲಾಖೆಗೆ ಶೋಭೆ ತರುವುದಿಲ್ಲ. ಕಾಲ ಕಾಲಕ್ಕೆ ಮೇಲ್ದರ್ಜೆಗೆ ಏರಿಸಲು ಸೂಕ್ತ ನಿಯಮಗಳು ಜಾರಿಯಾಗಬೇಕು.

ರಜಿತ್ ಹುಂಚಾ, ಸಮಾಜ ಸೇವಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು