ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಜನರ ಭಯ, ಆತಂಕದ ನಡುವೆ ಸೆರೆ ಸಿಕ್ಕ ಚಿರತೆ

Last Updated 23 ಜೂನ್ 2022, 3:11 IST
ಅಕ್ಷರ ಗಾತ್ರ

ಭದ್ರಾವತಿ: ನ್ಯೂಟೌನ್ ವಿಐಎಸ್ಎಲ್ ಗೃಹಗಳ ಬಳಿ ಓಡಾಡುತ್ತ ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸೆರೆಹಿಡಿಯಿತು.

ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಶಿವಮೊಗ್ಗ ವನ್ಯಜೀವಿ ಸಂರಕ್ಷಣಾ ತಂಡದ ಅರವಳಿಕೆ ತಜ್ಞ ಡಾ.ವಿನಯ್
ಅವರು ಬಳಸಿದ ಅರವಳಿಕೆಗೆ ಮಣಿದ ಚಿರತೆ ಬೋನಿನಲ್ಲಿ ಬಂಧಿಯಾಯಿತು.

ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆ 9.30ಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.

‘ಶಿವಮೊಗ್ಗ ವನ್ಯಜೀವಿ ಸಂರಕ್ಷಣಾ ಇಲಾಖೆಯ ಅರವಳಿಕೆ ತಜ್ಞರು ಬಂದ ನಂತರ ಚಿರತೆ ಬಂಧಿಸಲು ಸಾಧ್ಯವಾಯಿತು. ಚಿರತೆಯನ್ನು ಸುರಕ್ಷಿತವಾಗಿ ಸೂಕ್ತ ಜಾಗಕ್ಕೆ ತಲುಪಿಸಲಾಗುವುದು’ ವಲಯ ಅರಣ್ಯಾಧಿಕಾರಿ ಶಿವಶರಣಯ್ಯ ತಿಳಿಸಿದರು.

ಬೆಳಿಗ್ಗೆ ಆತಂಕ ಸೃಷ್ಟಿಸಿದ ಚಿರತೆ: ಮೋಡ ಕವಿದ ವಾತಾವರಣ, ತುಂತುರು ಮಳೆಯ ಸಿಂಚನದಲ್ಲಿ ವಾಕಿಂಗ್ ಮುಗಿಸಿ ಬರುತ್ತಿದ್ದ ಜನರಿಗೆ ನ್ಯೂಟೌನ್ ವಿಐಎಸ್ಎಲ್ ವಸತಿಗೃಹಗಳ ಬಡಾವಣೆಯಲ್ಲಿ ಚಿರತೆ ಓಡಾಟ ನಡೆಸುತ್ತಿದೆ ಎಂಬ ಸುದ್ದಿ ಆತಂಕ, ಭಯವನ್ನು ಸೃಷ್ಟಿಸಿತ್ತು.

ವಿಐಎಸ್ಎಲ್ ಆಸ್ಪತ್ರೆ ಕಡೆಯಿಂದ ಬೆಣ್ಣೆಕೃಷ್ಣ ವೃತ್ತದ ಕಡೆ ಸಾಗುವ ಮೂರ್ನಾಲ್ಕು ಬೀದಿಯಲ್ಲಿ ಜನ ಕೈಗೆ ಸಿಕ್ಕ ಕೋಲು, ದೊಣ್ಣೆ ಹಿಡಿದುಕೊಂಡು ‘ಎಲ್ಲಿ ಚಿರತೆ ದಾಳಿಗೆ ಎರಗುತ್ತದೋ’ ಎಂಬ ಆಂತಕದ ನಡುವೆಯೂ ಗುಂಪು ಕಟ್ಟಿಕೊಂಡು ಸಾಗುತ್ತಿದ್ದ ದೃಶ್ಯ ಕಂಡುಬಂತು.

ಚಿರತೆ ಮನೆಗಳ ಹಿಂಬದಿಯಲ್ಲಿ ಶರವೇಗದಲ್ಲಿ ಹಾರುತ್ತ ಸಿಕ್ಕ ಕೋಣೆಗಳನ್ನು ಸುತ್ತಿಕೊಂಡು ಪುನಃ ಬೀದಿಗೆ ಬಂದು ಆತಂಕ ಸೃಷ್ಟಿಸಿತ್ತು.

ವರ್ಷದ ಹಿಂದೆ ವಿಐಎಸ್ಎಲ್ ಕಾರ್ಖಾನೆ ಒಳಗೆ ಚಿರತೆ ಇದೆ ಎಂಬ ಮಾಹಿತಿ ಹರಿದಾಡಿತ್ತು. ಜತೆಗೆ ಅದು ಕಾರ್ಖಾನೆ ಮುಂಭಾಗದ ರಸ್ತೆಯಲ್ಲಿ ಸಂಚರಿಸಿತ್ತು ಎಂಬ ಸುದ್ದಿ ಸಹ ಹರಡಿದ್ದರಿಂದ ವಾರಗಟ್ಟಲೇ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಖಾನೆ ಒಳಗೆ ಠಿಕಾಣಿ ಹಾಕಿ ಅದನ್ನು ಹಿಡಿಯುವ ಪ್ರಯತ್ನ ನಡೆಸಿದ್ದರು.

ಬುಧವಾರ ಸೆರೆಸಿಕ್ಕ ಚಿರತೆ ಕಾರ್ಖಾನೆಯ ಒಳಗಿದ್ದ ಚಿರತೆಯೇ? ಎಂಬ ದೊಡ್ಡ ಚರ್ಚೆ ನಾಗರಿಕರ ವಲಯದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT