ಸಾಗರ: ತಾಲ್ಲೂಕಿನ ‘ದ್ವೀಪ’ ಪ್ರದೇಶವಾಗಿರುವ ತುಮರಿ ಗ್ರಾಮದಲ್ಲಿನ ಸಾರ್ವಜನಿಕ ಗ್ರಂಥಾಲಯ ಮೂರು ತಿಂಗಳಿನಿಂದ ಮುಚ್ಚಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ತುಮರಿ ವೃತ್ತದಲ್ಲಿನ ಜನನಿಬಿಡ ಪ್ರದೇಶದಲ್ಲಿರುವ ಗ್ರಂಥಾಲಯ ಕಟ್ಟಡ ಒಂದು ರೀತಿಯಲ್ಲಿ ಗ್ರಾಮದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ನಿತ್ಯ ಓದುವ ಅಭಿರುಚಿಯುಳ್ಳ ಗ್ರಾಮಸ್ಥರಲ್ಲದೆ ಸಾಗರ ಪೇಟೆಗೆ ಬರುವ ಪ್ರಯಾಣಿಕರು ಕೂಡ ಬಸ್ ಬರುವ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಬಂದು ಓದಿನಲ್ಲಿ ತೊಡಗಿಕೊಳ್ಳುತ್ತಿದ್ದರು.
ಈಗ್ಗೆ ಮೂರು ತಿಂಗಳ ಹಿಂದೆ ಗ್ರಂಥಾಲಯದ ಸಿಬ್ಬಂದಿ ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಗ್ರಂಥಾಲಯದ ಬಾಗಿಲು ಮುಚ್ಚಲು ದಾರಿ ಮಾಡಿಕೊಟ್ಟಿದೆ. ಸುಮಾರು 3 ಸಾವಿರ ಪುಸ್ತಕ, ವರ್ತಮಾನ ಪತ್ರಿಕೆಗಳನ್ನು ಹೊಂದಿರುವ ಗ್ರಂಥಾಲಯದ ಬಾಗಿಲು ತೆರೆಯಲು ಗ್ರಾಮ ಪಂಚಾಯಿತಿ ಆಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ತುಮರಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಿಸಲು ಕಟ್ಟಡಕ್ಕಾಗಿ ಹಲವು ವರ್ಷಗಳ ಕಾಲ ಹೋರಾಟವೇ ನಡೆದಿದೆ. 1990ರ ದಶಕದ ಆರಂಭದಲ್ಲಿ ಗ್ರಂಥಾಲಯಕ್ಕೆಂದು 10 ಗುಂಟೆ ಜಾಗ ಮಂಜೂರಾಗಿದ್ದರೂ ಸ್ಥಳದ ಗುರುತಿಸುವಿಕೆ ವಿವಾದದಿಂದ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಗ್ರಂಥಾಲಯಕ್ಕೆಂದು ಮಂಜೂರಾದ ಜಾಗದಲ್ಲಿ ಪಂಚಾಯಿತಿ ವಾಣಿಜ್ಯ ಮಳಿಗೆ ನಿರ್ಮಿಸಿದೆ ಎಂಬ ದೂರು ಕೇಳಿಬಂದಿತ್ತು.
ಈ ಕಾರಣದಿಂದ ವಿವಾದ 2016ನೇ ಸಾಲಿನಲ್ಲಿ ರಾಜ್ಯ ಹೈಕೋರ್ಟ್ ಮೆಟ್ಟಿಲು ಏರಿತ್ತು. ಗ್ರಂಥಾಲಯಕ್ಕೆಂದು ಮಂಜೂರಾದ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿರುವುದು ಸರಿಯಲ್ಲ ಎಂದು ನ್ಯಾಯಾಲಯ ಆದೇಶಿಸಿದ ನಂತರ ಅಲ್ಲಿದ್ದ ಮಳಿಗೆಗಳನ್ನು ತೆರವುಗೊಳಿಸಿ 2019ರಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದೆ.
ಹೀಗೆ ದಶಕಗಳ ಕಾಲದ ಹೋರಾಟದಿಂದ ನಿರ್ಮಾಣವಾದ ಗ್ರಂಥಾಲಯ ಕೇವಲ ಸಿಬ್ಬಂದಿ ಕೊರತೆ ಕಾರಣಕ್ಕೆ ಬಾಗಿಲು ಮುಚ್ಚುವುದು ಎಷ್ಟು ಸರಿ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ. ಗ್ರಂಥಾಲಯದ ಸಿಬ್ಬಂದಿಗೆ ಗ್ರಂಥಾಲಯ ಇಲಾಖೆ ವೇತನ ನೀಡುತ್ತಿದ್ದು, ಅದರ ಮೇಲ್ವಿಚಾರಣೆ ಜವಾಬ್ಧಾರಿ ಗ್ರಾಮ ಪಂಚಾಯಿತಿಯದ್ದಾಗಿದೆ. ಹೀಗಾಗಿ ಗ್ರಂಥಾಲಯದ ಬಾಗಿಲು ತೆರೆಯಲು ಪಂಚಾಯಿತಿ ಕೂಡಲೇಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.