ಬುಧವಾರ, ಅಕ್ಟೋಬರ್ 20, 2021
24 °C
ಸಂಕಷ್ಟದಲ್ಲಿ ಹಾಲು ಉತ್ಪಾದಕರು, ಸಣ್ಣ ರೈತರ

ಶಿವಮೊಗ್ಗ: ಪಶು ಆಹಾರ ದರ ಏರಿಕೆ; ಆದಾಯಕ್ಕೆ ಕತ್ತರಿ

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪಶು ಆಹಾರ ದಿಢೀರ್ ಏರಿಕೆಯಾಗಿದ್ದು, ಹಾಲು ಉತ್ಪಾದಕರು, ಸಣ್ಣ ರೈತರ ಆದಾಯಕ್ಕೆ ಕತ್ತರಿ ಬಿದ್ದಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಹೈನುಗಾರಿಕೆ ವರವಾಗಿತ್ತು. ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿದ್ದ ಹಲವರು ಹಾಲಿಗೆ ಉತ್ತಮ ದರ ಮತ್ತು ಬೇಡಿಕೆ ಇರುವುದನ್ನು ಗಮನಿಸಿ ಹೈನುಗಾರಿಕೆಯನ್ನೇ ಉದ್ಯೋಗವನ್ನಾಗಿ ರೂಪಿಸಿಕೊಂಡಿದ್ದರು.

ಕೆಲವರು 25ರಿಂದ 40 ಹಸುಗಳನ್ನು ಸಾಕಿಕೊಂಡು ದೊಡ್ಡ ಪ್ರಮಾಣದಲ್ಲಿ ಹೈನು ಉದ್ಯಮವನ್ನು ಆರಂಭಿಸಿ ಒಳ್ಳೆಯ ಆದಾಯವನ್ನು ಗಳಿಸುತ್ತಿದ್ದರು. ಆದರೆ, ಈಚೆಗೆ ಪಶು ಆಹಾರದ ದರದಲ್ಲಿ ಗಣನೀಯ ಏರಿಕೆಯಾಗಿದ್ದು, ಹೈನೋದ್ಯಮವನ್ನು ಆರಂಭಿಸಿದ ರೈತರನ್ನು ಕಂಗಾಲುಗೊಳಿಸಿದೆ.

ದರ ಏರಿಕೆ: ಕೆಎಂಎಫ್ ವತಿಯಿಂದ ಪಶು ಆಹಾರ ಪೂರೈಕೆ ಮಾಡಲಾಗುತ್ತಿದೆ. ಇದರ ಜತೆಗೆ ಹಾಲು ಉತ್ಪಾದನೆಗಾಗಿ ರೈತರ ಅದರ ಜತೆಗೆ ಖಾಸಗಿಯಲ್ಲಿ ಫೀಡ್ಸ್, ಹತ್ತಿ ಹಿಂಡಿ, ಶೇಂಗಾ ಹಿಂಡಿ, ಗೋ ಬೂಸ, ಅವರೆ ಹೊಟ್ಟು ಸಹ ಹಾಕುತ್ತಾರೆ. ಇದರಿಂದ ಹಾಲು ಉತ್ಪಾದನೆ, ಹಸುಗಳ ಆರೋಗ್ಯ ಉತ್ತಮವಾಗುವುದನ್ನು ಕಂಡುಕೊಂಡಿದ್ದಾರೆ.

ಆದರೆ, ಒಂದು ತಿಂಗಳಿನಿಂದ ಇವುಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 50 ಕೆ.ಜಿ. ಫೀಡ್ಸ್ ₹ 950 ನಿಂದ ₹ 1030ಗೆ ಏರಿಕೆಯಾಗಿದೆ. 50 ಕೆ.ಜಿ. ಹತ್ತಿ ಹಿಂಡಿ ₹ 1200ನಿಂದ ₹ 1700, 50 ಕೆ.ಜಿ. ಶೇಂಗಾ ಹಿಂಡಿ ₹ 1000ದಿಂದ 1600ಗೆ, 30 ಕೆ.ಜಿ. ಅವರೆ ₹ 450 ನಿಂದ ₹ 600 ಏರಿಕೆಯಾಗಿದೆ. ಕೆಎಂಎಫ್‍ನಿಂದ ಸಿಗುವ ಫೀಡ್ಸ್ 50 ಕೆ.ಜಿ. ಚೀಲಕ್ಕೆ ₹ 970 ಇದೆ. ಶಿಮುಲ್‌ನಿಂದ ₹ 25.25 ಹಾಗೂ ಸರ್ಕಾರ ಪ್ರೋತ್ಸಾಹಧನ ₹ 5 ಸೇರಿ ಲೀಟರ್‌ ಹಾಲಿಗೆ ₹ ಕನಿಷ್ಠ 30.25 ಸಿಗುತ್ತಿದೆ. ಪಶು ಆಹಾರ ದುಬಾರಿಯಾದ ಮೇಲೆ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎನ್ನುವುದು ರೈತರ ಅಳಲು.

ಉತ್ಪಾದನಾ ವೆಚ್ಚ ಹೆಚ್ಚಳ
‘3 ಲೀಟರ್ ಹಾಲು ಕೊಡುವ ಹಸುವಿಗೆ ದಿನಕ್ಕೆ 5 ಕೆ.ಜಿ.ಯಾದರೂ ಹಿಂಡಿ ಬೇಕು. ಎಲ್ಲ ಸೇರಿ ಅಂದಾಜು ₹ 150 ಖರ್ಚು ಬರುತ್ತದೆ. ಆದರೆ, ಲೀಟರ್ ಹಾಲು ಮಾರಿದರೆ ಸಿಗುವುದು ₹ 90 ಮಾತ್ರ. ಹಸುಗಳಿಗೆ ಸರಿಯಾದ ಆಹಾರ ನೀಡದಿದ್ದರೆ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಮೊದಲು 5 ಹಸುಗಳಿದ್ದವು. ಖರ್ಚು ಅಧಿಕವಾದ್ದರಿಂದ 3 ಹಸುಗಳನ್ನು ಮಾರಾಟ ಮಾಡಿದ್ದೇನೆ. ಇರುವ ಎರಡು ಹಸುಗಳನ್ನೇ ನೋಡಿಕೊಂಡರೆ ಸಾಕಾಗಿದೆ’ ಎನ್ನುತ್ತಾರೆ ತ್ಯಾಜ್ಯವಳ್ಳಿಯ ದಿನೇಶ್‌.

ಪ್ರತಿ ಲೀಟರ್‌ ಹಾಲಿಗೆ ರೈತರಿಗೆ ಪ್ರೋತ್ಸಾಹಧನವೂ ಸೇರಿ ಕನಿಷ್ಠ ₹ 30 ಸಿಗುತ್ತಿದೆ. ರೈತರು ಹಸು ಸಾಕಾಣಿಕೆ ಮೇಲೆ ಅವುಗಳ ನಿರ್ವಹಣೆ ವೆಚ್ಚ ಇದೆ. ಕೆಎಂಎಫ್ ವತಿಯಿಂದ ಪಶು ಆಹಾರ ಪೂರೈಸಲಾಗುತ್ತಿದೆ.
-ಆನಂದ್‌, ಶಿಮುಲ್‌ ಅಧ್ಯಕ್ಷ

*

ಹಸು ಪೋಷಕಾಂಶ ಆಹಾರ ನೀಡುವುದಕ್ಕಾಗಿ ಹಿಂಡಿ, ಬೂಸ, ಫೀಡ್ಸ್‌ಗಳನ್ನು ಕೊಡುತ್ತಾರೆ. ಇವುಗಳ ದರ ಹೆಚ್ಚಳವಾಗಿರುವುದರಿಂದ ರೈತರ ಆದಾಯಕ್ಕೆ ಸ್ವಲ್ಪ ಮಟ್ಟಿಗೆ ಪೆಟ್ಟು ಬಿದ್ದಿದೆ.
-ಕಲ್ಲಪ್ಪ, ಉಪನಿರ್ದೇಶಕರು, ಪಶು ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.