ಬಿದಿರು ನಾಶ: ಕುಲಕಸುಬಿಗೆ ಆಪತ್ತು
ಐದಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಅವರಿಸಿರುವುದರಿಂದ ಬಿದಿರು ನಾಶವಾಗಿದೆ. ಕಾಡಿನಲ್ಲಿ ಯಥೇಚ್ಛವಾಗಿ ಲಭ್ಯವಿದ್ದ ಶಾವೆ ಬಿದಿರು ಅರಣ್ಯನಾಶದಿಂದ ಸುಲಭವಾಗಿ ದೊರೆಯುತ್ತಿಲ್ಲ. ಕೆಲವು ರೈತರು ತಾವು ಬೆಳೆದ ಶಾವೆ ಬಿದಿರಿಗೆ ದುಪ್ಪಟ್ಟು ದರ ಹೇಳುತ್ತಾರೆ. ದುಬಾರಿ ಹಣ ನೀಡಿ ಬಿದಿರು ಪಡೆದು ತಯಾರಿಸಿದ ಬುಟ್ಟಿಗೆ ಮಾರುಕಟ್ಟೆಯಲ್ಲಿ ₹ 150ಕ್ಕೆ ಮಾರಾಟವಾಗುವುದು ಕಷ್ಟ. ಕಣಜಕ್ಕೆ ಗರಿಷ್ಠ ಬೆಲೆ ಇದ್ದರೂ ರೈತರು ಇಂದು ಕಣಜದಲ್ಲಿ ಭತ್ತ ಸಂಗ್ರಹಿಸಿಡುತ್ತಿಲ್ಲ. ಎಲ್ಲ ಋತುಗಳಲ್ಲೂ ಎಲ್ಲ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ. ಇದರಿಂದ ಶ್ರಮಕ್ಕೆ ತಕ್ಕಂತೆ ಆದಾಯವನ್ನೂ ನಿರೀಕ್ಷೆ ಮಾಡುವಂತಿಲ್ಲ. ಮಳೆ ಬಿಸಿಲಿನಲ್ಲಿ ಶ್ರೀಮಂತರ ಹೊಲಗದ್ದೆಗಳಲ್ಲಿ ಕೂಲಿ ಮಾಡುವ ಬದಲು ಮನೆಯಲ್ಲಿಯೇ ಕುಳಿತು ಬುಟ್ಟಿ ಹೆಣೆಯಬಹುದು ಎನ್ನುವ ಸಮಾಧಾನ ಹೊರತುಪಡಿಸಿದರೆ ಆರ್ಥಿಕವಾಗಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಸರ್ಕಾರ ಕುಲಕಸುಬು ಉಳಿಸಲು ಕಚ್ಚಾ ವಸ್ತುಗಳ ಖರೀದಿಗೆ ಪ್ರೋತ್ಸಾಹಧನ ಕಲ್ಪಿಸಿದರೆ ಭವಿಷ್ಯದಲ್ಲಿ ಕುಲಕಸಬಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಿದೆ ಎನ್ನುತ್ತದೆ ಮೇದಾರ ಕುಟುಂಬ.