ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ವಿರೋಧದ ಹಿಂದೆ ಮಧ್ಯವರ್ತಿ ಲಾಬಿ: ಬಿಜೆಪಿ ರೈತ ಮೋರ್ಚಾ

Last Updated 4 ಅಕ್ಟೋಬರ್ 2021, 4:00 IST
ಅಕ್ಷರ ಗಾತ್ರ

ಸಾಗರ: ಕೃಷಿ ಕಾಯ್ದೆಯಲ್ಲಿನ ವಸಾಹತುಶಾಹಿ ಸ್ವರೂಪವನ್ನು ಬದಲಿಸಿ ರೈತರ ವರಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯ ವಿರೋಧದ ಹಿಂದೆ ಮಧ್ಯವರ್ತಿ ಲಾಬಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಪ್ರಸನ್ನ ಕೆರೆಕೈ ದೂರಿದರು.

ಸಮೀಪದ ವರದಾಮೂಲ ಗ್ರಾಮದಲ್ಲಿ ಬಿಜೆಪಿಯ ಗ್ರಾಮಾಂತರ ಮಂಡಲದ ರೈತ ಮೋರ್ಚಾ ಭಾನುವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ‘ಕೃಷಿ ಕಾಯ್ದೆ ಹಾಗೂ ರೈತ ಉತ್ಪಾದಕರ ಕಂಪನಿ’ ಕುರಿತ ಮಾಹಿತಿ ಮತ್ತು ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 2020ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ದಿಢೀರನೆ ಉದ್ಭವವಾದದ್ದಲ್ಲ. 20 ವರ್ಷಗಳ ಚರ್ಚೆಯ ಫಲಶ್ರುತಿಯ ಭಾಗವಾಗಿ ಕಾಯ್ದೆ ಜಾರಿಗೆ ಬಂದಿದೆ. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಕೂಡ ಈ ಕಾಯ್ದೆಗಳ ಜಾರಿ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು ಎಂಬುದನ್ನು ನೆನಪಿಸಿದರು.

ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಪ್ರಕಾರ ಎಪಿಎಂಸಿ ಪ್ರಾಂಗಣದ ಹೊರಗಡೆಯೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮುಕ್ತ ಅವಕಾಶವನ್ನು ರೈತರಿಗೆ ಕಲ್ಪಿಸಲಾಗಿದೆ. ಇದರಿಂದ ಬೇಗ ಹಾಳಾಗುವ ತರಕಾರಿ, ಹಣ್ಣುಗಳನ್ನು ಬೆಳೆಯುವ ರೈತರು ಮಧ್ಯವರ್ತಿಗಳ ಹಂಗಿಲ್ಲದೆ ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಬಹುದು. ಈಗ ಈ ಕಾಯ್ದೆ ತಿದ್ದುಪಡಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ. ಆದರೆ 2004, 2009ರ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂಬುದನ್ನು ಆ ಪಕ್ಷದ ಮುಖಂಡರು ಮರೆತಿದ್ದಾರೆ ಎಂದರು.

ಗುತ್ತಿಗೆ ಆಧಾರಿತ ಕೃಷಿ ಪದ್ಧತಿಯಿಂದ ಕೃಷಿ ಭೂಮಿ ಹಣವುಳ್ಳವರ ಪಾಲಾಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಆದರೆ ಈ ಪದ್ಧತಿಯಡಿ ಬೆಳೆಯ ಗುತ್ತಿಗೆ ನೀಡಲಾಗುತ್ತದೆಯೇ ಹೊರತು ಭೂಮಿಯ ಗುತ್ತಿಗೆ ನೀಡಲು ಅವಕಾಶವಿಲ್ಲ. ಬೆಳೆಗೆ ಸಂಬಂಧಿಸಿದಂತೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡ ಕಂಪನಿ ರೈತರಿಗೆ ಮೋಸ ಮಾಡಿದರೆ ಅದನ್ನು 30 ದಿನಗಳೊಳಗೆ ಸ್ಥಳೀಯ ನ್ಯಾಯಾಧೀಕರಣದ ಮುಂದೆ ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

‘ಆಹಾರ ಬೆಳೆ ಬೆಳೆಯುವುದರಲ್ಲಿ ನಾವು ಸ್ವಾಲವಲಂಬನೆ ಸಾಧಿಸಿದ್ದು ಬೆಳೆಗಳನ್ನು ರಫ್ತು ಮಾಡುವ ಸ್ಥಿತಿಗೆ ತಲುಪಿದ್ದೇವೆ. ಹೀಗಾಗಿ ಆಹಾರ ಬೆಳೆಗಳನ್ನು ದಾಸ್ತಾನು ಮಾಡಿ ಅದರ ಕೃತಕ ಅಭಾವ ಸೃಷ್ಟಿಸಿ ಅಕ್ರಮ ಲಾಭ ಪಡೆಯುವ ಸನ್ನಿವೇಶ ಈಗಿಲ್ಲ. ಈ ಕಾರಣಕ್ಕೆ ಅಗತ್ಯ ವಸ್ತುಗಳ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿರುವುದು ಸಕಾಲಿಕ ಕ್ರಮವಾಗಿದೆ’ ಎಂದು ಸಮರ್ಥಿಸಿಕೊಂಡರು.

ಕೃಷಿ ಕಾಯ್ದೆಯನ್ನು ವಿರೋಧಿಸಿ ಚಳವಳಿ ನಡೆಸುತ್ತಿರುವ ರೈತ ಮುಖಂಡರ ಬಳಿ ಕೇಂದ್ರದ ಕೃಷಿ ಸಚಿವರು 23 ಬಾರಿ ಮಾತುಕತೆ ನಡೆಸಿದ್ದಾರೆ. ಯಾವ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಹೇಳಲು ತಯಾರಿಲ್ಲದ ರೈತ ಮುಖಂಡರು ನೂತನ ಕಾಯ್ದೆ ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಇದರ ಹಿಂದೆ ಕೇಂದ್ರ ಸರ್ಕಾರವನ್ನು ರೈತ ವಿರೋಧಿ ಎಂದು ಬಿಂಬಿಸುವ ಹುನ್ನಾರವಷ್ಟೇ ಅಡಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ರೈತ ಮೋರ್ಚಾದ ಮತ್ತೋರ್ವ ಕಾರ್ಯದರ್ಶಿ ಡಾ.ನವೀನ್ ಮಡಿಕೇರಿ, ‘ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಿಕೊಂಡು ರೈತರೆಲ್ಲರೂ ಸೇರಿ ಒಗ್ಗಟ್ಟಿನಿಂದ ಖರೀದಿ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಭಾಗಿಯಾದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವ ಜೊತೆಗೆ ಉತ್ಪನ್ನಗಳ ಮೌಲ್ಯವರ್ಧನೆಯೂ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ.ಶ್ರೀ. ಆನಂದ್, ‘ಕೃಷಿ ಕ್ಷೇತ್ರಕ್ಕೆ ಯುವಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಾಯ್ದೆಗಳು ಬೇಕಾಗಿವೆ. ಇರುವ ಕಾಯ್ದೆಗಳಿಂದ ತೊಡಕಾದರೆ ಕೃಷಿಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುವ ಅಪಾಯವಿದೆ. ಹೀಗಾಗಿ ಕೇಂದ್ರ ಸರ್ಕಾರದನೂತನ ಕೃಷಿ ಕಾಯ್ದೆಗಳನ್ನು ಪರಾಮರ್ಶಿಸಬೇಕಿದೆ’ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ರೈತ ಮೋರ್ಚಾದ ಅಧ್ಯಕ್ಷ ಗಿರೀಶ್ ಹೆಗಡೆ ಹಕ್ರೆ, ಪ್ರಮುಖರಾದ ಗಿರೀಶ್ ಪಟೇಲ್, ನಟರಾಜ್, ಕುಮಾರ್ ನಾಯ್ಡು, ಗಂಗಾಧರ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT