ಭಾನುವಾರ, ಅಕ್ಟೋಬರ್ 24, 2021
23 °C
ಎರಡನೇ ಅಲೆಯ ನ್ಯೂನತೆ ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ, 50 ವೆಂಟಿಲೇಟರ್ ಸಂಗ್ರಹ

ಶಿವಮೊಗ್ಗ: ಕೋವಿಡ್‌ 3ನೇ ಅಲೆ ಎದುರಿಸಲು ಮೆಗ್ಗಾನ್‌ ಸಜ್ಜು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋವಿಡ್‌ ಎರಡನೇ ಅಲೆಯ ಸಮಯದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೂ ಹಲವು ನ್ಯೂನತೆಗಳಿಂದ ಟೀಕೆಗೆ ಒಳಗಾಗಿದ್ದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಹಿಂದಿನ ಲೋಪ ತಿದ್ದಿಕೊಂಡು ಮೂರನೇ ಅಲೆ ಎದುರಿಸಲು ಸಜ್ಜಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಅಲೆ ಆರಂಭವಾದ ನಂತರ ಮೃತರ ಸಂಖ್ಯೆ 300 ದಾಟಿರಲಿಲ್ಲ. ಎರಡನೇ ಅಲೆಯಲ್ಲಿ 600ಕ್ಕೂ ಹೆಚ್ಚು ಜನರು ಕೊರೊನಾಗೆ ಜೀವ ಕಳೆದುಕೊಂಡಿದ್ದರು. ಪ್ರತಿದಿನವೂ 10ರಿಂದ 15 ಜನರು ಮೃತರಾಗುತ್ತಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯವಿದೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದ್ದರೂ, 500 ಕೋವಿಡ್‌ ರೋಗಿಗಳಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ.

ರೋಗಿಗಳ ಆಮ್ಲಜನಕ ಮಟ್ಟ ಗಣನೀಯವಾಗಿ ಕ್ಷೀಣಿಸಿದಾಗ ತಕ್ಷಣ ಕೃತಕ ಉಸಿರಾಟದ
ವ್ಯವಸ್ಥೆ ಕಲ್ಪಿಸಲು ಅಗತ್ಯವಾದ ವೆಂಟಿಲೇಟರ್‌ಗಳೇ ಇರಲಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ವೆಂಟಿಲೇಟರ್ ದಾಸ್ತಾನಿಗೆ ಆದ್ಯತೆ:

ಮೂರನೇ ಅಲೆ ಎದುರಾದರೆ ಸಾವಿನ ಪ್ರಮಾಣ ತಗ್ಗಿಸಲು ಮುಂದಾಗಿರುವ ಜಿಲ್ಲಾಡಳಿತ, ಮೆಗ್ಗಾನ್ ಆಡಳಿತ ಮಂಡಳಿ ವೆಂಟಿಲೇಟರ್‌ಗಳ ಖರೀದಿಗೆ ಆದ್ಯತೆ ನೀಡಿದೆ. ದಾನಿಗಳ ನೆರವೂ ಸೇರಿ ಸೇರಿ 50 ಯಂತ್ರಗಳನ್ನು ಸಂಗ್ರಹಿಸಿಡಲಾಗಿದೆ.

ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಬಹು ದೊಡ್ಡ ಲೋಪ ಎಂದರೆ ಪಾಸಿಟಿವ್ ಬಂದು ದಾಖಲಾದ ರೋಗಿಗಳ ಇತರೆ ಸಮಸ್ಯೆಗಳಿಗೆ ಗಮನ ಕೊಡದೇ ಇದ್ದದ್ದು. ಕಿಡ್ನಿ, ಹೃದಯ ಸಂಬಂಧಿ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದವರು ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾದಾಗ ತಕ್ಷಣ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಇದರಿಂದ ಹಲವರು ಮೃತಪಟ್ಟಿದ್ದರು.

ಈ ಬಾರಿ ಅಂತಹ ರೋಗಿಗಳಿಗೆ ವಿಶೇಷ ನಿಗಾವಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲಾಗಿದೆ.

ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್:

ಮೂರನೇ ಅಲೆ ಸಮಯದಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲು ಮೆಗ್ಗಾನ್‍ನಲ್ಲಿ 50 ಹಾಸಿಗೆಗಳ ಸೌಲಭ್ಯದ ಪ್ರತ್ಯೇಕ ಕೋವಿಡ್‌ ವಾರ್ಡ್ ಮೀಸಲಿಡಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದ ಯಂತ್ರೋಪಕರಣಗಳು, ಅಗತ್ಯ ಔಷಧಗಳನ್ನು ಸಂಗ್ರಹಿಸಲಾಗಿದೆ. ಎಲ್ಲ ಹಾಸಿಗೆಗಳಿಗೂ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳ ಕೋವಿಡ್ ನಿರ್ವಹಣೆ ಕುರಿತು ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. 20 ಮಕ್ಕಳ ತಜ್ಞರಿಗೆ ವಿಶೇಷ ತರಬೇತಿ ನೀಡಲಾಗಿದೆ.

33 ಸಾವಿರ ಲೀಟರ್ ಆಮ್ಲಜನಕ ಸಂಗ್ರಹ:

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 33 ಸಾವಿರ ಲೀಟರ್‌ ಆಮ್ಲಜನಕ ಸಂಗ್ರಹಾಗಾರ ಸಿದ್ಧಗೊಳಿಸಲಾಗಿದೆ. ಮೊದಲ ಅಲೆ ಸಮಯದಲ್ಲಿ 16 ಸಾವಿರ ಲೀಟರ್ ಸಂಗ್ರಹಿಸಿಡಲಾಗಿತ್ತು. ಈಗ ಅದನ್ನು ದ್ವಿಗುಣಗೊಳಿಸಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 6 ಕೆಎಲ್ ಆಕ್ಸಿಜನ್ ಸಂಗ್ರಹ ಪ್ಲಾಂಟ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. 

ದಾನಿಗಳ ಉದಾರ ನೆರವು:

ಎರಡನೇ ಅಲೆಯ ಸಮಯದಲ್ಲಿ ಎದುರಾಗಿದ್ದ ಕೊರತೆಗಳನ್ನು ತುಂಬಿಕೊಡಲು ಹಲವು ದಾನಿಗಳು ಮುಂದಾಗಿದ್ದಾರೆ. ಈಚೆಗೆ ಅನಿವಾಸಿ ಭಾರತೀಯ ಭೂಪಾಳಂ ಕುಟುಂಬ ರೋಟರಿ ಕ್ಲಬ್‌ ಮೂಲಕ ₹ 5 ಕೋಟಿ ಮೌಲ್ಯದ ಸಲಕರಣೆಗಳ ಹಸ್ತಾಂತರ ಮಾಡಿದೆ. ಹಲವು ದಾನಿಗಳು ವೆಂಟಿಲೇಟರ್‌, ಆಮ್ಲಜನಕ ಕಾನ್ಸನ್‌ಟ್ರೇಟರ್‌ ಸೇರಿ ಅಗತ್ಯ ಪರಿಕರ ನೀಡಿದ್ದಾರೆ.

ಎಲ್ಲ ವೈದ್ಯರ ಸೇವೆ ಬಳಕೆಗೆ ಒಲವು

ಮೆಗ್ಗಾನ್ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ವೈದ್ಯರು ಇದ್ದಾರೆ. ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಸೇವೆಯೂ ಲಭ್ಯವಿದೆ. ಎರಡನೇ ಅಲೆಯ ಸಮಯದಲ್ಲಿ 75ಕ್ಕೂ ಹೆಚ್ಚು ವೈದ್ಯರು ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ಕೆಲವು ವೈದ್ಯರು ಮಾತ್ರ ತಮ್ಮನ್ನು ಸೇವೆಗೆ ಸಮರ್ಪಿಸಿಕೊಂಡಿದ್ದರು. ಉಳಿದವರು ಕೆಲಸ ಮಾಡಿದರೂ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳತ್ತ ತೋರುವ ಆಸಕ್ತಿ ಮೆಗ್ಗಾನ್ ರೋಗಿಗಳತ್ತ ತೋರಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಮುಂದಿನ ಅಲೆ ಸಮಯದಲ್ಲಿ ಎಲ್ಲ ವೈದ್ಯರೂ ಸಂಪೂರ್ಣವಾಗಿ ತೊಡಗಿಸಲು ಜಿಲ್ಲಾಡಳಿತ, ಮೆಗ್ಗಾನ್ ಆಡಳಿತ ಮಂಡಳಿ ಸೂಚಿಸಿವೆ.

***

ಸಾಕಷ್ಟು ಪ್ರಮಾಣದ ಔಷಧ, ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾನಿಗಳ ಮಾನವೀಯ ಸ್ಪಂದನದಿಂದ ಕೋಟ್ಯಂತರ ಮೌಲ್ಯದ ಸಲಕರಣೆಗಳು ಬಂದಿವೆ. ಇಂತಹ ಪ್ರಯತ್ನಗಳ ಫಲವಾಗಿ ಮೆಗ್ಗಾನ್ ಆಸ್ಪತ್ರೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.

–ಕೆ.ಎಸ್‌.ಈಶ್ವರಪ್ಪ, ಉಸ್ತುವಾರಿ ಸಚಿವ

***

ಈ ಬಾರಿ ಅಗತ್ಯ ವೆಂಟಿಲೇಟರ್ ಸಂಗ್ರಹಿಸಿಡಲಾಗಿದೆ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಅವು ನೆರವಾಗಲಿವೆ. ಮಕ್ಕಳ ಚಿಕಿತ್ಸೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು.

- ಡಾ.ಶ್ರೀಧರ್, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಆಸ್ಪತ್ರೆ

***

ಸಹೋದ್ಯೋಗಿ ಶಿಕ್ಷಕ, ವ್ಯಂಗ್ಯಚಿತ್ರಗಾರ ಗಂಗಾಧರ್ ಅಡ್ಡೇರಿ ಕೊರೊನಾ ಸೋಂಕಿನಿಂದ ಮೃತಪಟ್ಟರು. ಆಮ್ಲಜನಕದ ಮಟ್ಟ ಕಡಿಮೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ತಕ್ಷಣ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದರೆ ಬದುಕುವ ಸಾಧ್ಯತೆ ಇತ್ತು. ಅಂತಹ ಸ್ಥಿತಿ ಯಾರಿಗೂ ಎದುರಾಗದಂತೆ ಎಚ್ಚರವಹಿಸಬೇಕು.

- ಎಚ್‌.ಬಿ. ಧರ್ಮಪ್ಪ, ಸಹ ಶಿಕ್ಷಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು