ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಬಿಸಿಯೂಟದ ಬಾಬ್ತು

Last Updated 7 ಆಗಸ್ಟ್ 2021, 2:59 IST
ಅಕ್ಷರ ಗಾತ್ರ

ಶಿವಮೊಗ್ಗ: ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ತೊಗರಿ ಬೇಳೆ, ಉಪ್ಪು, ಅಡುಗೆ ಎಣ್ಣೆಯನ್ನು ಮನೆಗಳಿಗೇ ತಲುಪಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಈಗ ಬಿಸಿಯೂಟಕ್ಕೆ ತಗುಲಿದ ವೆಚ್ಚವನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಾಕಲು ಕ್ರಮ ಕೈಗೊಂಡಿದೆ.

ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 1.60 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಈಗಾಗಲೇ 1.20 ಲಕ್ಷ ಮಕ್ಕಳು ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಇನ್ನೊಂದು ವಾರದಲ್ಲಿ ಉಳಿದ ಎಲ್ಲ ಮಕ್ಕಳಿಗೂ ಖಾತೆ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

‘ಬ್ಯಾಂಕ್‌ ಖಾತೆ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ ‘ಕನಿಷ್ಠ ಶಿಲ್ಕು ರಹಿತ ಖಾತೆ’ಗಳನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಆಯಾ ಶಾಲಾ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ಲೋಹಿತ್ ಮಾಹಿತಿ ನೀಡಿದರು.

ಲೆಕ್ಕಾಚಾರ ಹೇಗೆ: ಪ್ರಸ್ತುತ 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ₹ 4.95 ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ₹ 7.45ರಂತೆ ಅಡುಗೆ ತಯಾರಿಕೆಯ ವೆಚ್ಚ ನಿಗದಿಪಡಿಲಾಗಿದೆ. ಶಾಲೆಯಲ್ಲೂ ಇದೇ ಲೆಕ್ಕಾಚಾರವಿದೆ. ಇದರನ್ವಯ ಮೇ ಮತ್ತು ಜೂನ್‌ ರಜೆಯ 50 ದಿನಗಳ ಮೊತ್ತವು ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಲಿದೆ.

ಶೂನ್ಯ ಶಿಲ್ಕಿನ ಖಾತೆ: ಈ ಬಾರಿ ಮಕ್ಕಳು ಶಾಲೆಗೆ ದಾಖಲಾಗುವ ಸಮಯದಲ್ಲೇ ಬ್ಯಾಂಕ್ ಖಾತೆ ತೆರೆದು ಅದರ ವಿವರ ನೀಡುವಂತೆ ಶಿಕ್ಷಕರು ಪಾಲಕರಿಗೆ ತಿಳಿಸುತ್ತಿದ್ದಾರೆ. ಬ್ಯಾಂಕ್‍ಗಳಲ್ಲಿ ಕನಿಷ್ಠ ಶಿಲ್ಕು ರಹಿತ ಖಾತೆ ತೆರೆಯಲು ಅವಕಾಶ ನೀಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು, ಗ್ರಾಮೀಣ ಬ್ಯಾಂಕ್‍ಗಳು ಹಾಗೂ ಅಂಚೆ ಕಚೇರಿಗಳಲ್ಲೂ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

1.27 ಲಕ್ಷ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 1,841 ಸರ್ಕಾರಿಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು, 103 ಅನುದಾನಿತ ಶಾಲೆಗಳಿವೆ. 164 ಸರ್ಕಾರಿ ಪ್ರೌಢ ಶಾಲೆಗಳು, 146 ಅನುದಾನಿತ ಪ್ರೌಢ ಶಾಲೆಗಳಿವೆ. ಈವರೆಗೆ 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ 1,05,812 ಮಕ್ಕಳು, ಅನುದಾನಿತ ಶಾಲೆಗಳಲ್ಲಿ 21,220 ಮಕ್ಕಳು ಸೇರಿ ಒಟ್ಟು 1,27,032 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

***

ಬ್ಯಾಂಕ್‌ ಖಾತೆ ಹೊಂದಿರುವ ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಳವಡಿಸುವಂತೆ ಎಲ್ಲ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. 1ನೇ ತರಗತಿಗೆ ದಾಖಲಾಗುವ ಮಕ್ಕಳು ಬ್ಯಾಂಕ್‌ ಖಾತೆ ಹೊಂದುವುದು ಕಡ್ಡಾಯ.

– ಎನ್‌.ಎಂ.ರಮೇಶ್, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

***

‘ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಬಿಸಿಯೂಟ ಬಾಬ್ತು ಜಮಾ ಮಾಡುವ ಸಲುವಾಗಿ ಸರ್ಕಾರ ₹ 3.6 ಕೋಟಿ ಬಿಡುಗಡೆ ಮಾಡಿದೆ. ಬ್ಯಾಂಕ್‌ ಖಾತೆ ತೆರೆಯದ ಮಕ್ಕಳ ಮಾಹಿತಿ ಪಡೆಯಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಖಾತೆ ತೆರೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು’ ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ಲೋಹಿತ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT