ಶಿಕಾರಿಪುರ: ತಾಲ್ಲೂಕಿನ ಅಂಜನಾಪುರ ಜಲಾಶಯ ಭರ್ತಿಯಾದ ಕಾರಣ ಬುಧವಾರ ಶಾಸಕ ಬಿ.ವೈ. ವಿಜಯೇಂದ್ರ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುವ ಜನರಿಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಉತ್ತರ ಕೊಡಲಿವೆ. ತಾಲ್ಲೂಕಿನ ರೈತರಿಗೆ ಭವಿಷ್ಯದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದರು. ಪ್ರಸ್ತುತ ಅಂಜನಾಪುರ ಜಲಾಶಯ ಭರ್ತಿಯಾಗಲು ಮಳೆ ನೀರಿನ ಜತೆ ತುಂಗಾ ನದಿಯಿಂದ ನೀರು ತರುವ ಹೊಸಳ್ಳಿ ಏತನೀರಾವರಿ ಯೋಜನೆ ಕಾರಣವಾಗಿದೆ ಎಂದರು.
ಜಲಾಶಯಗಳು ಭರ್ತಿಯಾಗಿ ಅಧಿಕಾರಿಗಳು ಕೃಷಿ ಚಟುವಟಿಕೆಗೆ ಪೂರಕವಾದ ಕೃಷಿ ಪರಿಕರಗಳನ್ನು ಸಮರ್ಪಕವಾಗಿ ವಿತರಿಸಬೇಕು. ಕಳೆದ ವರ್ಷ ಈ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದರು. ಪ್ರಸ್ತುತ ನಿಮ್ಮೆಲ್ಲರ ಆಶೀರ್ವಾದದಿಂದ ಒಂದು ವರ್ಷದ ಬಳಿಕ ನಾನು ಶಾಸಕನಾಗಿ ಬಾಗಿನ ಅರ್ಪಿಸಿದ್ದು, ಸಂತಸ ತಂದಿದೆ. ತಾಲ್ಲೂಕಿನ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ ಪತ್ನಿ ಪ್ರೇಮಾ, ಮುಖಂಡರಾದ ಕೆ.ಎಸ್. ಗುರುಮೂರ್ತಿ, ಎಚ್.ಟಿ. ಬಳಿಗಾರ್, ವೀರೇಂದ್ರ ಪಾಟೀಲ್, ಕೆ.ಜಿ. ವಸಂತಗೌಡ್ರು, ಕುಮಾರಗೌಡ್ರು, ಸುರೇಶ್ ನಾಯ್ಕ, ಪರಮೇಶ್ವರಪ್ಪ, ನಿಂಬೆಗೊಂದಿ ಸಿದ್ದಲಿಂಗಪ್ಪ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಾದ ಅಶೋಕ್, ಬಸವರಾಜ್, ನೀರಾವರಿ ಇಲಾಖೆ ಎಂಜಿನಿಯರ್ ವೆಂಕಟೇಶ್, ಮಂಜುನಾಥ್, ರಾಮಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.