ಸೋಮವಾರ, ಮೇ 23, 2022
20 °C
ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ದೊರೆತದ್ದು ₹ 4.22 ಕೋಟಿ

ಭದ್ರಾವತಿ: ಕೋವಿಡ್ ಕೇಂದ್ರಕ್ಕೆ ಶಾಸಕರ ಅನುದಾನದ ಸಿಂಹಪಾಲು

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ 2018ರಿಂದ2021ರವರೆಗೆ ಸರ್ಕಾರದಿಂದ ಶಾಸಕರ ನಿಧಿಗೆ ಬರಬೇಕಾದ ₹ 6 ಕೋಟಿಯಲ್ಲಿ ಬಿಡುಗಡೆಯಾಗಿರುವುದು ₹ 4.22 ಕೋಟಿ. 

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ 2018–19ನೇ ಸಾಲಿನಲ್ಲಿ ₹ 1.61 ಕೋಟಿ ಮೊತ್ತ ಬಂದಿದೆ. ಅದರಲ್ಲಿ ರಸ್ತೆ, ಆಟೊನಿಲ್ದಾಣ, ಬಸ್ ತಂಗುದಾಣ, ವಿವಿಧ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಕಾಮಗಾರಿಗಳು ನಡೆದಿವೆ.

2019ರ ಅಂತ್ಯದಲ್ಲಿ ಕೊರೊನಾ ಸಂಕಷ್ಟ ಕಾರಣ ಆ ಸಾಲಿನಲ್ಲಿ ಬಂದ ಮೊತ್ತ ₹ 61 ಲಕ್ಷ. ಅದರಲ್ಲಿ ಅಷ್ಟಾಗಿ ಕಾಮಗಾರಿ ಯೋಜನೆ ರೂಪಿಸಲು ಸಾಧ್ಯವಾಗದಿದ್ದರೂ 2018–19ನೇ ಸಾಲಿನಲ್ಲಿ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳಿಗೆ ಸದ್ಬಳಕೆ ಮಾಡಲಾಗಿದೆ.

ಕಳೆದ ಸಾಲಿನಲ್ಲಿ ಬಿಡುಗಡೆಯಾದ ಪೂರ್ಣ ಪ್ರಮಾಣದ ₹ 2 ಕೋಟಿ ಅನುದಾನದಲ್ಲಿ ಅರ್ಧದಷ್ಟು ಮೊತ್ತವನ್ನು ಎಂಪಿಎಂ ಕಲ್ಯಾಣ ಮಂದಿರದಲ್ಲಿ ಆರಂಭಿಸಿದ 500 ಬೆಡ್ ಆಸ್ಪತ್ರೆಗೆ ಹಾಗೂ ಆಂಬುಲೆನ್ಸ್, ಆಮ್ಲಜನಕ ಸಂಪರ್ಕ ವ್ಯವಸ್ಥೆಗೆ ಭರಿಸಲಾಗಿದೆ.

ಹೆಚ್ಚಿದ ಆಸ್ಪತ್ರೆ ಸೌಲಭ್ಯ: ಅನುದಾನದ ನೆರವಿನಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ 50 ಹಾಸಿಗೆಗಳು ಸಂಪೂರ್ಣ ಆಮ್ಲಜನಕ ಸೌಲಭ್ಯ ಹೊಂದಿವೆ. ಸಹಜವಾಗಿಯೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದಂತಾಗಿದೆ. ಎರಡು ಆಂಬುಲೆನ್ಸ್ ಲಭ್ಯವಾಗಿರುವುದು ಮೂಲಸೌಕರ್ಯವನ್ನು ಹೆಚ್ಚಿಸಿದಂತಾಗಿದೆ. ಇದರ ಮೂಲಕ 100 ಹಾಸಿಗೆಗಳ ಆಸ್ಪತ್ರೆ ಹೈಟೆಕ್ ಹಂತವನ್ನು ತಲುಪಿದೆ.

‘ಎಂಪಿಎಂ ಕಲ್ಯಾಣ ಮಂಟಪದಲ್ಲಿ ಆರಂಭಿಸಿದ ಕೋವಿಡ್ ಆಸ್ಪತ್ರೆ ಸೇವೆಗೆ ಸಜ್ಜಾಗಿದೆ. ಅಲ್ಲಿ ಚಿಕಿತ್ಸಾ ಕಾರ್ಯ ನಡೆದಿದೆ. ಮುಂದೆ ಕೊರೊನಾ ಸಂಕಷ್ಟ ಎದುರಾದಲ್ಲಿ ಅದನ್ನು ನಿಭಾಯಿಸುವ ಮಟ್ಟದ ವ್ಯವಸ್ಥೆ ಅಲ್ಲಿದೆ’ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಬೇಡಿಕೆ ಹೆಚ್ಚಿದೆ: ‘ನನ್ನ ಕ್ಷೇತ್ರಕ್ಕೆ ಇಲ್ಲಿಯ ತನಕ ₹ 6 ಕೋಟಿ ಅನುದಾನ ಬರಬೇಕಿತ್ತು. ಬಂದಿರುವ ಮೊತ್ತದಲ್ಲೇ ಅರ್ಧದಷ್ಟನ್ನು ಕೋವಿಡ್ ಸಂಕಷ್ಟಕ್ಕೆ ಬಳಕೆ ಮಾಡಲಾಗಿದೆ. ಉಳಿದ ಆವಶ್ಯಕತೆಗೆ ನಾಗರಿಕರ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಅನುದಾನ ಸಿಗದಿರುವುದು ಹೊರೆ ಹೆಚ್ಚು ಮಾಡಿದೆ’ ಎನ್ನುತ್ತಾರೆ ಶಾಸಕ ಬಿ.ಕೆ. ಸಂಗಮೇಶ್ವರ.

‘ಗ್ರಾಮೀಣ ಭಾಗದಲ್ಲಿ ಚಾನಲ್ ರಸ್ತೆ, ರಿವೀಟ್‌ಮೆಂಟ್ ಕೆಲಸಕ್ಕೆ ಒತ್ತು ನೀಡಲಾಗಿದೆ. ಇದಲ್ಲದೆ ನಗರದ ಸುಮಾರು 35 ಆಟೊರಿಕ್ಷಾ ನಿಲ್ದಾಣಗಳಿಗೆ ಶೆಲ್ಟರ್ ಕಲ್ಪಿಸುವ ಕೆಲಸ ಮಾಡಲಾಗಿದೆ. ಐದಾರು ಕಡೆ ನಗರ ಬಸ್‌ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಹಲವು ಸಮುದಾಯ ಭವನ, ಸಂಘ–ಸಂಸ್ಥೆಗಳ ಕಟ್ಟಡಗಳಿಗೆ ₹ 10 ಲಕ್ಷದಿಂದ ₹ 50 ಲಕ್ಷದ ತನಕ ಅನುದಾನ ನೀಡಲಾಗಿದೆ’ ಎಂದು ಅಂಕಿ–ಅಂಶ ತೆರೆದಿಟ್ಟರು.

ಬಂದಿರುವ ಒಟ್ಟು ಮೊತ್ತದಲ್ಲಿ ಕೋವಿಡ್ ಸಮಯದಲ್ಲಿ ಅಗತ್ಯವಿದ್ದ ಆಸ್ಪತ್ರೆ ನೆರವಿಗೆ ಹೆಚ್ಚಿನ ವಿನಿಯೋಗ ಮಾಡಿರುವುದು ಸಹಜವಾಗಿ ಜನರ ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಒಂದಷ್ಟು ಹೈಟೆಕ್ ಹಂತಕ್ಕೆ ತರಲಾಗಿದೆ.

***

ಶಾಸಕರ ನಿಧಿಯ ನೆರವು ಕೋರಿ ಸಾಕಷ್ಟು ಜನರು ಮನವಿ ಸಲ್ಲಿಸಿದ್ದಾರೆ. ಒತ್ತಡ ಇದ್ದೇ ಇದೆ. ಇಷ್ಟಾದರೂ ಕೋವಿಡ್ ಸಂಕಷ್ಟದಲ್ಲಿ ಬಳಸಿಕೊಂಡಿದ್ದೇವೆ. ಕೋವಿಡ್‌ ಕೆಲಸಕ್ಕೆ ವಿನಿಯೋಗ ಮಾಡಿದ ಮೊದಲ ಶಾಸಕ ಎಂಬ ಹೆಮ್ಮೆ ನನಗಿದೆ.

- ಬಿ.ಕೆ.ಸಂಗಮೇಶ್ವರ, ಶಾಸಕ, ಭದ್ರಾವತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು