ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಆಧುನಿಕ ರಂಗಭೂಮಿಯ ದೊಡ್ಡಕ್ಕ ಎಸ್.ಮಾಲತಿ

ಬಿ.ವಿ.ಕಾರಂತ ಪ್ರಶಸ್ತಿ ಘೋಷಿಸಿ ಆರು ವರ್ಷಗಳ ನಂತರ ಪ್ರದಾನಕ್ಕೆ ಅದೇಶ
ಸಂದೇಶ್ ಜವಳಿ (ಲೇಖಕರು ರಂಗಕರ್ಮಿ, ಸಂಘಟಕ)
Published 26 ಜನವರಿ 2024, 6:52 IST
Last Updated 26 ಜನವರಿ 2024, 6:52 IST
ಅಕ್ಷರ ಗಾತ್ರ

ಶಿವಮೊಗ್ಗ: ರಂಗಕರ್ಮಿ ಶಿವಮೊಗ್ಗ ಜಿಲ್ಲೆ ಸಾಗರದ ದಿವಂಗತ ಎಸ್.ಮಾಲತಿ ಅವರಿಗೆ 2018–19ರಲ್ಲಿ ರಾಜ್ಯ ಸರ್ಕಾರ ಬಿ.ವಿ.ಕಾರಂತ ಪ್ರಶಸ್ತಿ ಘೋಷಣೆ ಮಾಡಿತ್ತು. ಅದನ್ನು ಈ ವರ್ಷ ಪ್ರದಾನ ಮಾಡಲು ಸರ್ಕಾರ ಆದೇಶಿಸಿದೆ.

ಬಹುಶಃ ಪದಗಳಲ್ಲಿ ಹಿಡಿದಿಡಲು ಕಷ್ಟವೆನಿಸುವ ವ್ಯಕ್ತಿತ್ವ ಎಸ್. ಮಾಲತಿ ಅವರದ್ದು. ಆಕೆ ಆಧುನಿಕ ರಂಗಭೂಮಿಯ ದೊಡ್ಡಕ್ಕ. 2006ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನಾಟಕೋತ್ಸವದಲ್ಲಿ ವಿ.ಕೃ.ಗೋಕಾಕ್‌ರ 'ಜನನಾಯಕ' ನಾಟಕ ಅಭಿನಯಿಸಲು ನಮ್ಮ ತಂಡಕ್ಕೆ ಅವಕಾಶ ಸಿಕ್ಕಾಗ ನಾವು ಮಾಲತಿ ಅವರನ್ನು ಸಂಪರ್ಕಿಸಿದ್ದವು. ಜನನಾಯಕ ನಾಟಕವು ಸ್ವಾತಂತ್ರ್ಯಪೂರ್ವದಲ್ಲಿ ಗೋಕಾಕರು ಬರೆದಿರುವ ಸುಮಾರು ಐದು ಗಂಟೆಯ ನಾಟಕವಾಗಿದ್ದು, ಅದನ್ನು ಎರಡು ಗಂಟೆಗೆ ಇಳಿಸಿ ಪುನರ್‌ರಚಿಸಿ ಎಸ್.ಮಾಲತಿಯವರು ನಮ್ಮ ತಂಡಕ್ಕೆ ನಿರ್ದೇಶಿಸಿದ್ದರು.

ಸಾಗರದಲ್ಲೇ ಹುಟ್ಟಿ ಬೆಳೆದ ಮಾಲತಿಯವರು ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ, ಮಂಗಳೂರು ವಿ.ವಿ. ಯ ಕನ್ನಡ ಎಂ.ಎ ಪದವಿಯಲ್ಲಿ ಪಥಮ ರ್ಯಾಂಕ್ ಪಡೆದಿದ್ದರು. ನಟಿ, ಕವಯಿತ್ರಿ, ಪ್ರಗತಿಪರ ಚಿಂತಕಿ, ಅಂಕಣಗಾರ್ತಿ, ಅನುವಾದಕಿ ಮತ್ತು ಮಾನವೀಯ ನೆಲೆಗಟ್ಟಿನ ಹೋರಾಟಗಾರ್ತಿಯಾಗಿ ನನ್ನಂತೆ ಅನೇಕ ಜನರ ಮೇಲೆ ಪರಿಣಾಮ ಬೀರಿದ್ದರು. ನಾಟಕ ರಚನೆ, ಪುಸ್ತಕ ವಿಮರ್ಶೆ, ರಂಗ ನಿರ್ದೇಶನ ಎಂದು ಸದಾ ಚಟುವಟಿಕೆಯಲ್ಲೇ ಇರುತ್ತಿದ್ದರು.

ನಮ್ಮ ನಟಮಿತ್ರರಿಗಾಗಿ ನಿರ್ದೇಶಿಸಿದ 'ಭೀಮಕಥಾನಕ', 'ಸೀತಾ ಚರಿತ'. ಅವರೇ ಬರೆದ ನಾಟಕಗಳು. 'ಸ್ವಪ್ನ ಸಾರಸ್ವತ, ನಾಟಕ ರೂಪಾಂತರ, ಕಾರ್ನಾಡರ 'ಯಯಾತಿ', 'ಮಾಮಾಮೋಶಿ', 'ಹಕ್ಕಿಗೊಂದು ಗೂಡುಕೊಡಿ'. ಅವರು ನಮ್ಮ ತಂಡಕ್ಕೆ ನಿರ್ದೇಶಿಸಿದ ನಾಟಕಗಳು, ಸತ್ಯ ಮತ್ತು ಸೌಂದರ್ಯದ ಹುಡುಕಾಟವೇ ನನ್ನ ನಾಟಕ, ರಂಗಭೂಮಿ, ಅದಕ್ಕೆ ನನ್ನ ಮೊದಲ ಆದ್ಯತೆ ಎನ್ನುವುದು ಅವರ ದಿಟ್ಟ ನಿಲುವಾಗಿತ್ತು. 'ಬುದ್ಧ ಹೇಳಿದ ಕತೆ', 'ಗಿಳಿಯಾದ ಮಂತ್ರವಾದಿ' ಎಂಬ ಮಕ್ಕಳ ನಾಟಕಗಳನ್ನೂ ನಮ್ಮ ತಂಡಕ್ಕೆ ನಿರ್ದೇಶಿಸಿದ್ದರು.

ಸಾಗರದ ಪ್ರತಿಷ್ಠಿತ ಜೈಹಿಂದ್ ಬೇಕರಿಯ ಕುಟುಂಬದಿಂದ ಬಂದವರಾದರೂ ಬದುಕಿನ ಪಯಣದಲ್ಲಿ ಬಹಳಷ್ಟು ಕಷ್ಟ, ಸಂಕಷ್ಟ, ನೋವು, ನಿರಾಸೆ ಎಲ್ಲವನ್ನೂ ತಮ್ಮೊಳಗೆ ಇಟ್ಟುಕೊಂಡು, ತಮ್ಮ ಪ್ರೀತಿಯ ಹವ್ಯಾಸ, ಬರವಣಿಗೆ ಮತ್ತು ರಂಗಭೂಮಿಗೆ ತಮ್ಮ ತಾಪದ ಭಾವು ಕಿಂಚಿತ್ತೂ ತಗುಲದಂತೆ ಎಚ್ಚರವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT