ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಮಂಗಗಳ ಉಪಟಳಕ್ಕೆ ಬೇಸತ್ತ ರೈತರು

ಕಾಡಂಚಿನ ಗ್ರಾಮಗಳಲ್ಲಿ ದಾಳಿ ಇಡುತ್ತಿರುವ ವಾನರ ಸೇನೆ
ರಿ.ರಾ. ರವಿಶಂಕರ್
Published 7 ಮಾರ್ಚ್ 2024, 6:45 IST
Last Updated 7 ಮಾರ್ಚ್ 2024, 6:45 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಮಳೆ, ಹಣ್ಣು ಬಿಡುವ ಗಿಡ–ಮರಗಳ ಕೊರತೆಯ ಕಾರಣ ಕಾಡಿನ ಮಂಗಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ  ದಾಂಗುಡಿ ಇಡುತ್ತಿದ್ದು, ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿನ ನಾಗರಿಕರು ಮಂಗಗಳ ಉಪಟಳಕ್ಕೆ ಕಂಗೆಟ್ಟು ಹೋಗಿದ್ದಾರೆ.

ಮನೆಯ ಚಾವಣಿ ಮೇಲಿನ ಹೆಂಚು ಬೀಳಿಸಿ ಒಳಗೆ ನುಗ್ಗುವುದು, ಬಿಸಿಲಲ್ಲಿ ಒಣಗಿಸಿದ ಆಹಾರ ಪದಾರ್ಥಗಳನ್ನು ಹೊತ್ತೊಯ್ಯುವುದೂ ಸೇರಿದಂತೆ ಮನೆ ಬಳಕೆಗೆ ಅಂಗಳದಲ್ಲಿ ಬೆಳೆದ ಸೊಪ್ಪು, ತರಕಾರಿ ಮತ್ತು ಹಣ್ಣುಗಳನ್ನು ಉಳಿಸಿಕೊಳ್ಳಲು ರೈತರು ಹಾಗೂ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ನಿವಾಸಿ ಕೃಷಿಕ ತಂಗಚ್ಚನ್ ಅವರ 1.5 ಎಕರೆ ವಿಸ್ತೀರ್ಣದ ತೆಂಗು, ಬಾಳೆ ಹಾಗೂ ತರಕಾರಿ ಬೆಳೆದು ವಾರ್ಷಿಕ ಸರಾಸರಿ  ₹ 3.50 ಲಕ್ಷ ಲಾಭ ಗಳಿಸುತ್ತಿದ್ದರು. ಕಳೆದ 4–5 ವರ್ಷಗಳಿಂದ ಮಂಗಗಳ ಉಪಟಳಕ್ಕೆ ಬೇಸತ್ತು ಕೃಷಿ ಚಟುವಟಿಕೆಯಿಂದ ವಿಮುಖರಾಗಿದ್ದಾರೆ.

ರೈತರು ಮತ್ತು ಮಂಗಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಈ ಪ್ರದೇಶದ ರೈತರಿಗೆ ಮಂಗಗಳು ಕಂಟಕವಾಗಿವೆ.

ಸ್ಥಳೀಯವಾಗಿ ಶೆಟ್ಟಿಹಳ್ಳಿ ವಲಯ ಅರಣ್ಯ ಮತ್ತು ಸುತ್ತಲಿನ ನಿವಾಸಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದ್ದು, ಬಾನೆಟ್ ಮಕಾಕ್ ಮತ್ತು ಗ್ರೇ ಲಂಗೂರ್‌ ಪ್ರಬೇಧದ ಕೋತಿಗಳನ್ನು ಒಳಗೊಂಡ ವಿವಿಧ ವನ್ಯಜೀವಿಗಳು ಬೀಜ ಪ್ರಸರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಪರಿಸರ ಸಮತೋಲನ ಕಾಯ್ದುಕೊಳ್ಳುತ್ತ ಜೀವವೈವಿಧ್ಯಕ್ಕೆ ಕೊಡುಗೆ ನೀಡುತ್ತವೆ. ಪರಿಸರ ಪ್ರಾಮುಖ್ಯತೆಯ ಹೊರತಾಗಿಯೂ, ಕೃಷಿ ಜಮೀನುಗಳ ಆಸುಪಾಸಿನಲ್ಲಿ ಮಂಗಗಳ ಉಪಸ್ಥಿತಿಯು ಸ್ಥಳೀಯ ರೈತರ ಆತಂಕಕ್ಕೆ ಕಾರಣವಾಗಿವೆ.

ಕಾಡುಗಳ ನಾಶದಿಂದ ಈ ವನ್ಯಜೀವಿಗಳು ಆಹಾರದ ಹುಡುಕಾಟದಲ್ಲಿ ಹೆಚ್ಚಾಗಿ ಊರ ಕಡೆ ಮುಖ ಮಾಡುವಂತಾಗಿದೆ. ರೈತರು ಬೆಳೆದ ಜೋಳ, ಭತ್ತ, ತೆಂಗು, ಅಡಿಕೆ, ಹಣ್ಣು ಮತ್ತು ತರಕಾರಿಗಳಂತಹ ಬೆಳೆಗಳ ಮೇಲೆ ಹಿಂಡುಹಿಂಡಾಗಿ ದಾಳಿ ಇಡುತ್ತಿವೆ. ಈ ದಾಳಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿ, ಅವರ ಜೀವನೋಪಾಯ ಮತ್ತು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿದೆ.

ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಮೇಲೆ ಇತರೆ ಕಾಡು ಪ್ರಾಣಿಗಳು ದಾಳಿ ಮಾಡಿ ಹಾನಿ ಉಂಟುಮಾಡಿದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವ ಪದ್ಧತಿ ಇದೆ. ಆದರೆ, ಮಂಗಗಳ ದಾಳಿಯಿಂದ ಬೆಳೆನಷ್ಟ ಆದರೆ ಯಾವುದೇ ರೀತಿಯ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ರೈತರಿಗೆ ದಿಕ್ಕೇ ತೋಚದಂತಾಗಿದೆ.

‘ಸರ್ಕಾರಿ, ಖಾಸಗಿ ಸಂಘ– ಸಂಸ್ಥೆಗಳು, ರೈತರು ವಾಣಿಜ್ಯ ಬೆಳೆಯಾಗಿ ಅಕೇಶಿಯಾ ಹಾಗೂ ಅದೇ ಪ್ರಭೇದದ ನೆಡು ತೋಪು ಬೆಳೆಸಿರುವುದು ವನ್ಯಜೀವಿಗಳಿಗೆ ಸಹಜವಾಗಿ ದೊರೆಯುತ್ತಿದ್ದ ನೈಸರ್ಗಿಕ ಆಹಾರಕ್ಕೂ ಕುತ್ತು ತಂದಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಬೆಳೆಸುವಾಗ, ಅದರ ಅಂಚಿನ ಸುತ್ತಲೂ ವನ್ಯಜೀವಿಗಳ ಆಹಾರ ಕ್ರಮಕ್ಕೆ ಅನುಗುಣವಾಗಿ ಉತ್ತೇಜನ ನೀಡುವುದು ಅಗತ್ಯ’ ಎನ್ನುತ್ತಾರೆ ಪರಿಸರ ತಜ್ಞ ಕೆ.ಟಿ. ಮಂಜುನಾಥ್.

ಮಂಗಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವುದು ಅವೈಜ್ಞಾನಿಕ. ಅರಣ್ಯದಲ್ಲಿಯೇ ಅವುಗಳಿಗೆ ಆಹಾರ ಸಿಗುವಂತೆ ನಿರಂತರ ಕಾರ್ಯಕ್ರಮ ರೂಪಿಸಬೇಕು
ಪರಿಸರ ಪ್ರೇಮಿ, ಕಾಳಿಗುಂಡಿ
ವಾರ್ಷಿಕ ಕೃಷಿ ಉತ್ಪಾದನೆಯಲ್ಲಿ ಶೇ 25ರಿಂದ 30ರಷ್ಟು ಕಾಡು ಮಂಗಗಳು ಸೇರಿದಂತೆ ಪ್ರಾಣಿಗಳ ಪಾಲಾಗುತ್ತಿದೆ. ರೈತರಿಗಾಗುವ ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು
ಸಿ.ಈರಣ್ಣ, ಕೃಷಿಕ, ಕಲ್ಲೂರು
ಮಂಗಗಳಿಂದ ಫಸಲು ನಷ್ಟದ ನಿಖರ ಮೌಲ್ಯಮಾಪನ ಕಷ್ಟ. ಇತರೆ ವನ್ಯಪ್ರಾಣಿಗಳಿಂದಾಗುವ ಬೆಳೆಹಾನಿಗೆ ಖಾತೆ ಜಮೀನಾಗಿದ್ದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಬಹುದು
ಪವನ್‌ಕುಮಾರ್ ಎನ್., ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ, ಮುಗುಡ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT