ಸೋಮವಾರ, ಜೂನ್ 21, 2021
29 °C
ಜಿಲ್ಲಾಡಳಿತದ ವಶಕ್ಕೆ 150 ಸಿಲಿಂಡರ್ ‘ಏರ್ ಆಕ್ಸಿಜನ್’

ಎಂಎಸ್‌ಪಿಎಲ್ ‘ಜೀವವಾಯು’ ಸರಬರಾಜು ಆರಂಭ

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಬಿಎಫ್ ಹಾಗೂ ಎಂಎಸ್ ಘಟಕದಲ್ಲಿನ ಕೆಲಸ ಕಾರ್ಯಕ್ಕೆ ಸಹಕಾರಿಯಾಗಿದ್ದ ಇಲ್ಲಿನ ಎಂಎಸ್‌ಪಿಎಲ್ ಗ್ಯಾಸ್ ಘಟಕ ಇದೀಗ ‘ಜೀವವಾಯು’ಆಗಿ ಕೆಲಸ ಆರಂಭಿಸಿದೆ.

ರಾಜ್ಯದಲ್ಲಿ ಆಮ್ಲಜನಕ ಹಾಹಾಕಾರ ಹೆಚ್ಚಾದಂತೆ ಇಲ್ಲಿರುವ ಘಟಕದಿಂದ ಒಂದಿಷ್ಟು ಲಾಭ ಪಡೆಯಬಹುದು ಎಂದು ಚಿಂತಿಸಿದ ಜಿಲ್ಲಾ ಉಸ್ತುವಾರಿ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲಾಡಳಿತದ ಜತೆ ಸಮಾಲೋಚನೆ ನಡೆಸಿ ಹೆಜ್ಜೆ ಇಟ್ಟಿದ್ದರಿಂದ ಉತ್ಪಾದನಾ ಚಟುವಟಿಕೆ ಆರಂಭವಾಗಿದೆ.

ವರ್ಷದ ಹಿಂದೆಯೇ ಈ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉತ್ಪಾದನೆ ಕುರಿತ ಮಾತುಕತೆ ನಡೆದಿತ್ತು. ಆದರೆ ಆಗ ಅದು ನನೆಗುದಿಗೆ ಬಿದ್ದಿತ್ತು. ಈಗ ಅದರ ಆರಂಭಕ್ಕೆ ಮುನ್ನುಡಿ ಬರೆಯುವ ಕೆಲಸ ಸ್ವತಃ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರಿಂದಲೇ ಆರಂಭವಾಗಿದ್ದು ವಿಶೇಷ.

ಭೋಗ್ಯಾವಧಿ ಮುಗಿದ ಸಂಸ್ಥೆ
ವಿಐಎಸ್ಎಲ್ ಹಾಗೂ ಎಂಎಸ್‌ಪಿಎಲ್ ನಡುವಿನ ಭೋಗ್ಯ ಕರಾರು ಅವಧಿ ಈಗಾಗಲೇ ಮುಗಿದಿದ್ದು, ಎರಡು ವರ್ಷಗಳಿಂದ ಯಾವುದೇ ವಹಿವಾಟು ಇವೆರಡು ಸಂಸ್ಥೆಗಳ ನಡುವೆ ನಡೆದಿಲ್ಲ. ಮುಚ್ಚಿದ್ದ ಘಟಕಕ್ಕೆ ಈಗ ಮುಕ್ತಿ ಕೊಡಿಸುವ ಪ್ರಯತ್ನದ ಭಾಗವಾಗಿ ನಡೆದ ಚಟುವಟಿಕೆ ಹಿನ್ನೆಲೆಯಲ್ಲಿ ಪುನಃ ಘಟಕದ ಕೆಲಸ ಆರಂಭವಾಗಿದ್ದು, ಈಗ ಏನಿದ್ದರೂ ಅದರ ಉತ್ಪಾದನೆ ವೈದ್ಯಕೀಯ ಆಮ್ಲಜನಕಕ್ಕೆ ಮಾತ್ರ ಸೀಮಿತ.

ಸುಮಾರು 7000 ಕೆ.ಎಲ್. ‘ಏರ್ ಆಕ್ಸಿಜನ್’ ಉತ್ಪಾದಿಸಿದ ಎಂಎಸ್‌ಪಿಎಲ್ ಸಂಸ್ಥೆಗೆ ಸಹಕಾರಿ ರೀತಿಯಲ್ಲಿ ವಿಐಎಸ್ಎಲ್ ಸಿಲಿಂಡರ್ ಫಿಲ್ಲಿಂಗ್ ಕೆಲಸ ನಿರ್ವಹಿಸಲಿದೆ. ಅಂದಾಜು 150 ಸಿಲಿಂಡರ್ ವ್ಯವಸ್ಥೆ ಹೊಂದಿರುವ ವಿಐಎಸ್ಎಲ್ ತನ್ನ ಪಾಲಿನ ಬಾಟ್ಲಿಂಗ್ ಕೆಲಸವನ್ನು ಪೂರೈಸಿ ಎಂಎಸ್‌ಪಿಎಲ್ ಘಟಕಕ್ಕೆ ವರ್ಗಾಯಿಸಲಿದ್ದು, ಅಲ್ಲಿರುವ ನೋಡಲ್ ಅಧಿಕಾರಿಗಳು ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲೆಯ ಸಂಬಂಧಿಸಿದ ಸರ್ಕಾರ ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಆರಂಭಿಸಿದ್ದು, ಮೊದಲ ಹಂತವಾಗಿ 150 ಸಿಲಿಂಡರ್ ‘ಏರ್ ಆಕ್ಸಿಜನ್’ ಶುಕ್ರವಾರ ರಾತ್ರಿ ಸರಬರಾಜಾಗಿದೆ.

‘ನಮ್ಮ ಮತ್ತು ಎಂಎಸ್‌ಪಿಎಲ್ ನಡುವಿನ ವ್ಯವಹಾರ ಮುಕ್ತಾಯವಾಗಿದೆ. ಸದ್ಯ ಸಾಮಾಜಿಕ ಜವಾಬ್ದಾರಿಯಿಂದ ವಿಐಎಸ್ಎಲ್ ತನ್ನ ಬಳಿ ಇರುವ ಸಿಲಿಂಡರ್ ಮೂಲಕ ಆಮ್ಲಜನಕ ಭರ್ತಿ ಮಾಡುವ ಕೆಲಸ ಮಾಡಲಿದೆ’ ಎಂದು ಹಂಗಾಮಿ ಕಾರ್ಯಪಾಲಕ ನಿರ್ದೇಶಕ ಎಸ್. ಮಿಶ್ರಾ ತಿಳಿಸಿದರು.

‘ಉತ್ಪಾದನೆ, ಅದರ ನಿರ್ವಹಣೆ ಕುರಿತಾಗಿ ಯಾವುದೇ ಮಾತುಕತೆ ನಮ್ಮೊಂದಿಗೆ ನಡೆದಿಲ್ಲ. ಅದೆಲ್ಲವೂ ನೇರವಾಗಿ ಜಿಲ್ಲಾಡಳಿತ ಮಟ್ಟದಲ್ಲಿ ಅವರೊಂದಿಗೆ ನಡೆದಿದೆ’ ಎಂದು ಹೇಳಿದರು.

‘ನಾವು ಸುಮಾರು 7000 ಕೆ.ಎಲ್. ಏರ್ ಆಕ್ಸಿಜನ್ ಭರ್ತಿ ಮಾಡುತ್ತೇವೆ. ಅದು ಬಾಟ್ಲಿಂಗ್ ಆದ ನಂತರ ಆಮ್ಲಜನಕವಾಗಿ ಪರಿವರ್ತನೆ ಆಗುತ್ತದೆ’ ಎನ್ನುತ್ತಾರೆ ಎಂಎಸ್‌ಪಿಎಲ್ ಅಧಿಕಾರಿ ಪ್ರಭು.

‘ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಪಿಎಲ್ ಘಟಕದಿಂದ 150 ಆಮ್ಲಜನಕ ಸಿಲಿಂಡರ್‌ಗಳು ನೆನ್ನೆ ಸರಬರಾಜಾಗಿವೆ. ಜಿಲ್ಲಾಡಳಿತ ನೇಮಿಸಿರುವ ನೋಡೆಲ್ ಅಧಿಕಾರಿಗಳ ಮಾರ್ಗಸೂಚಿಯಂತೆ ವಿತರಣೆ ನಡೆಯಲಿದೆ’ ಎಂದು ತಹಶೀಲ್ದಾರ್ ಸಂತೋಷಕುಮಾರ್ ‘ಪ್ರಜಾವಾಣಿ’ಗೆ ದೃಢಪಡಿಸಿದರು.

ಒಟ್ಟಿನಲ್ಲಿ ಕೈಗಾರಿಕಾ ಆಮ್ಲಜನಕ ಘಟಕದಲ್ಲಿ ಇದೀಗ ‘ಏರ್ ಆಕ್ಸಿಜನ್’ ಉತ್ಪಾದನೆ ನಡೆದಿರುವುದು ಜಿಲ್ಲೆಯ ‘ಜೀವವಾಯು’ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡಿದೆ. ಭವಿಷ್ಯದಲ್ಲಿ ಬೇಡಿಕೆಯ ಅವಶ್ಯಕತೆ ಪೂರೈಸಿದಲ್ಲಿ ಹೊರ ಜಿಲ್ಲೆಗೂ ಸರಬರಾಜು ಮಾಡುವ ಗುರಿ ಹೊಂದಿರುವ ಘಟಕದ ಪ್ರಯೋಜನ ಸಿಗುವಂತಾಗಲಿ ಎನ್ನುವುದೇ ಎಲ್ಲರ ಆಶಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.