ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಹೊಳೆಹೊನ್ನೂರು ಸಮೀಪದ ಕೂಡಲಿಯಲ್ಲಿ ಕಳೆಗಟ್ಟಿದ ಸಂಭ್ರಮ
Last Updated 21 ಮಾರ್ಚ್ 2023, 5:48 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸಮೀಪದ ಕೂಡಲಿಯಲ್ಲಿ ಸಂಗಮೇಶ್ವರ ಜಾತ್ರಾ ಮಹೋತ್ಸವ ಮಾರ್ಚ್‌ 21ರಿಂದ 24ರವರೆಗೆ ಜರುಗಲಿದೆ.

ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳವಾಗಿರುವ ಕೂಡಲಿಯಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅಮಾವಾಸ್ಯೆ ದಿನ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಆದ್ದರಿಂದ ಭಕ್ತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಮಾರ್ಚ್‌ 23ರಂದು ಸಂಗಮೇಶ್ವರ ಸ್ವಾಮಿ ರಥೋತ್ಸವ ನಡೆಯಲಿದ್ದು, ಸುತ್ತಮುತ್ತಲಿನ 150ಕ್ಕೂ ಹೆಚ್ಚು ಗ್ರಾಮಗಳ ಗ್ರಾಮದೇವತೆಗಳು ಆಗಮಿಸುತ್ತವೆ. ಮಾರ್ಚ್‌ 24ರಂದು ವಿಶೇಷವಾಗಿ ಬಂಜಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಅಂದು ಅವರದೇ ಪದ್ಧತಿಯಲ್ಲಿ ವಿಶೇಷ
ಪೂಜಾ ಕಾರ್ಯಗಳು ನಡೆಯುತ್ತವೆ. ಒಂದು ಜಾತಿಗೆ ವಿಶೇಷ ಆಚರಣೆ ಅವಕಾಶ ಕಲ್ಪಿಸಿರುವುದು ಈ ಕ್ಷೇತ್ರದಲ್ಲಿ ಮಾತ್ರ.

ಜಾತ್ರಾ ಮಹೋತ್ಸವದ ಅಂಗವಾಗಿ ಅಂಗಡಿಗಳನ್ನು ಹಾಕಲಾಗಿದೆ. ಕೊರೊನಾ ಕಾರಣ ಎರಡು ವರ್ಷಗಳಿಂದ ರದ್ದಾಗಿದ್ದ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ.

ರಾಜ್ಯದಲ್ಲಿ ನಡೆಯುವ ದೊಡ್ಡ ದೊಡ್ಡ ಜಾತ್ರಾ ಮಹೋತ್ಸವಗಳಲ್ಲಿ ಇದು ಕೂಡ ಒಂದಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಕೂಡಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಮನವಿ ಮಾಡಿದ್ದಾರೆ.

ಕಳೆದ ಬಾರಿ ಹೊಳೆಹೊನ್ನೂರು ಹಾಗೂ ಬೊಮ್ಮನಕಟ್ಟೆ ಗ್ರಾಮಸ್ಥರ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ನಂತರ ಎರಡೂ ಗ್ರಾಮಗಳ ಮುಖಂಡರನ್ನು ಕರೆಯಿಸಿ ಶಾಂತಿಸಭೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಭದ್ರತೆ ಜೊತೆಗೆ ಭಕ್ತರ ಕಾಳಜಿಗೆ ಆದ್ಯತೆ ನೀಡಲಾಗುವುದು. ಭಕ್ತರು ಶಾಂತಿ ರೀತಿಯಲ್ಲಿ ವರ್ತಿಸಬೇಕು ಎಂದು ಸಿಪಿಐ ಲಕ್ಷ್ಮೀಪತಿ ಮನವಿ ಮಾಡಿದರು.

ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಜನರು ಆಗಮಿಸುವುದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಿಲ್ಲ. ಆದರೆ, ಇಲ್ಲಿ ಅಂಗಡಿಗಳನ್ನು ಹಾಕಲು ವಸ್ತುಗಳನ್ನು ಸರಬರಾಜು ಮಾಡಲು ರಸ್ತೆಯಿಲ್ಲದ ಕಾರಣ ಹೆಗಲ ಮೇಲೆ ಹೊತ್ತು ಸಾಗಿಸುವ ಅನಿವಾರ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ವ್ಯಾಪಾರಿ ಅನಿಲ್ ಕುಮಾರ್ ಮನವಿ ಮಾಡಿದರು.

ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಮುಜಾರಾಯಿ ಇಲಾಖೆಯು ಜಾತ್ರಾ ಮಹೋತ್ಸವದಲ್ಲಿ ಅಂಗಡಿಗಳಿಂದ ಸುಂಕ ಸಂಗ್ರಹಿಸಲು ಮಾತ್ರ ಸೀಮಿತವಾಗದೆ, ಕುಡಿಯುವ ನೀರು, ಶೌಚಾಲಯ, ನದಿ ದಾಟಲು ದೋಣಿಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪುಣ್ಯ ಸ್ನಾನ ಮಾಡಿದ ಭಕ್ತರು ತಮ್ಮ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT