ಶಿವಮೊಗ್ಗ: ಮರಳು ಬಗೆತ, ಅತಿಯಾದ ನೀರಿನ ಬಳಕೆಯಿಂದ ಒಂದೆಡೆ ನದಿ ಪಾತ್ರಗಳು ಬರಡಾಗುತ್ತಿವೆ. ಇನ್ನೊಂದೆಡೆ ನಗರಗಳೇ ನದಿ ಮಾಲಿನ್ಯದ ಫ್ಯಾಕ್ಟರಿಗಳಾಗುತ್ತಿವೆ ಎಂದು ವೃಕ್ಷ ಲಕ್ಷ ಆಂದೋಲನದ ರಾಜ್ಯ ಸಂಚಾಲಕ ಅನಂತ ಹೆಗಡೆ ಅಶೀಸರ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ನಿರ್ಮಲ ತುಂಗಾ ಹಾಗೂ ಭದ್ರಾ ಅಭಿಯಾನದ ಸಂಪರ್ಕ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ಮಲ ತುಂಗಾ ಭದ್ರಾ ಅಭಿಯಾನ ತಂಡವು ನವೆಂಬರ್ 4ರಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆ ಕಿಷ್ಕಿಂದೆವರೆಗೆ ತುಂಗಾ ಹಾಗೂ ಭದ್ರಾ ನದಿಗಳ ದಂಡೆಯಲ್ಲಿ ಹಾಗೂ ತುಂಗಭದ್ರಾ ನದಿ ದಂಡೆಯಲ್ಲಿ ಸ್ವಚ್ಛತಾ ಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿದೆ. ಅದು ಶ್ಲಾಘನೀಯ. ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ಆಡಳಿತಗಳಿಗೆ ನದಿ ನೀರು, ಪರಿಸರ ಸಂರಕ್ಷಣೆ ಆದ್ಯತೆಯ ವಿಷಯವೇ ಅಲ್ಲ. ಉತ್ತರ ಕರ್ನಾಟಕದ ನದಿ ಪಾತ್ರದಲ್ಲಿನ ಯೋಜನೆಗಳೆಲ್ಲ ಮುಗಿದು ಈಗ ಸರ್ಕಾರಗಳು ಪಶ್ಚಿಮ ಘಟ್ಟಕ್ಕೆ ಮಾರಕವಾದ ಯೋಜನೆಗಳ ಜಾರಿಗೆ ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 48 ಔಷಧ ಕಂಪನಿಗಳನ್ನು ಬಂದ್ ಮಾಡಲು ಆದೇಶಿಸಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಔಷಧಿ ಉತ್ಪಾದನೆ ಇನ್ನೂ ಮುಂದುವರಿಯುತ್ತಲೇ ಇದೆ. ಮಂಡಳಿಯವರು ನೋಟಿಸ್ ಕೊಡುವುದನ್ನು ಬಿಟ್ಟರೆ ತಮಗೆ ಬೇರೇನೂ ಜವಾಬ್ದಾರಿ ಇಲ್ಲ ಅಂದುಕೊಂಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಮಾಲಿನ್ನಯ ನಿಯಂತ್ರಣ, ಪ್ಲಾಸ್ಟಿಕ್ ಬಳಕೆ ನಿಷೇಧದಂತಹ ಕಾರ್ಯಗಳಿಗೆ ಅದಮ್ಯ ಚೇತನ ಸಂಸ್ಥೆ ಮಾದರಿಯಾಗಬೇಕು ಎಂದ ಅವರು, ವಿಶ್ವವಿದ್ಯಾಲಯಗಳಲ್ಲಿ ಮಂಡಿತವಾಗುವ ಪರಿಸರ ಸಂಬಂಧಿ ಮಹಾಪ್ರಬಂಧಗಳು ಇಂಗ್ಲಿಷ್‌ನಲ್ಲಿರುತ್ತಿದ್ದು, ಅಲ್ಲೇ ಕೊಳೆಯುತ್ತಿವೆ. ಜನಸಾಮಾನ್ಯರಿಗೆ ಏನೂ ಉಪಯೋಗವಾಗುತ್ತಿಲ್ಲ. ಅವು ಕನ್ನಡದಲ್ಲಿ ಪ್ರಕಟವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ‘ ದೇಶದಲ್ಲಿ ಹಸಿವಿನಿಂದ ಬಳಲಿ ಮರಣ ಹೊಂದಿದವರಿಗಿಂತ 2-3 ಪಟ್ಟು ಹೆಚ್ಚು ಜನರು ಕಲುಷಿತ ನೀರಿನ ಸೇವನೆಯಿಂದ ಸಾಯುತ್ತಿದ್ದಾರೆ. ಬೆಳೆಗಳಿಗೆ ಸಿಂಪಡಿಸುವ ಕ್ರಿಮಿ ನಾಶಕಗಳು ಸೇರಿ ನದಿಗಳು ಕಲುಷಿತವಾಗುತ್ತಿವೆ. ಹೀಗಾಗಿ ಅಭಿಯಾನಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ನದಿಗಳು ಕಲುಷಿತಗೊಳ್ಳುತ್ತಿವೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ₹30 ಕೋಟಿ ವೆಚ್ಚದಲ್ಲಿ ಮಾಲಿನ್ಯ ತಡೆ ಯೋಜನೆ ರೂಪುಗೊಳ್ಳುತ್ತಿದೆ ಎಂದರು.
ಅಭಿಯಾನದ ಪ್ರಮುಖ ಎಂ.ಶಂಕರ್ ಮಾತನಾಡಿ, ಇದು ಯಾವುದೇ ರಾಜಕೀಯ ಪ್ರೇರಿತ ಪಾದಯಾತ್ರೆಯಲ್ಲ. ತುಂಗಾ ಭದ್ರಾ ನದಿಗುಂಟ ವಾಸಿಸುವ ಜನರೊಂದಿಗೆ ಸಂವಾದ, ಜನ ಜಾಗೃತಿ, ನದಿ ನೀರು ಕಲುಷಿತವಾಗಿರುವ ಬಗ್ಗೆ ಮಾಹಿತಿ ನೀಡಿ ಸ್ವಚ್ಛತೆಗೆ ಮಠಾಧೀಶರು, ಜನಪ್ರತಿನಿಧಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರ ಬೆಂಬಲ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಪ್ರಮುಖರಾದ ಶ್ರೀಪಾದ ಬಿಚ್ಚುಗತ್ತಿ, ರಮೇಶ್ ಹೆಗ್ಡೆ, ಗಿರೀಶ್ ಪಟೇಲ್, ಎಸ್.ಬಿ.ಅಶೋಕ ಕುಮಾರ್, ಕಾಂತೇಶ ಕದರಮಂಡಲಗಿ, ದಿನೇಶ್ ಕುಮಾರ್, ಸಿ.ಎಂ.ಮಂಜುನಾಥ, ಮೋಹನ ಬಾಳಿಕಾಯಿ, ತ್ಯಾಗರಾಜ ಮಿತ್ಯಾಂತ, ಬಾಲು ನಾಯ್ಡು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.