ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ ಶಾಸಕ ಹಾಲಪ್ಪಗೆ ಟಿಕೆಟ್ ಬೇಡ: ಆಗ್ರಹ

ಶಾಸಕ ಹರತಾಳು ಹಾಲಪ್ಪ ವಿರುದ್ಧ ಭುಗಿಲೆದ್ದ ಬಿಜೆಪಿ ಕಾರ್ಯಕರ್ತರ ಆಕ್ರೋಶ
Last Updated 20 ಮಾರ್ಚ್ 2023, 7:03 IST
ಅಕ್ಷರ ಗಾತ್ರ

ಸಾಗರ: ಸಮೀಪದ ವರದಾಮೂಲ ಗ್ರಾಮದಲ್ಲಿ ‘ಸಾಗರ ಶಾಸಕರಿಂದ ನೊಂದ ಕಾರ್ಯಕರ್ತರ ಸಭೆ, ಬೇಕೇ ಬೇಕು, ಬದಲಾವಣೆ ಬೇಕು, ವ್ಯಕ್ತಿ ಮುಖ್ಯವಲ್ಲ’ ಎಂಬ ಬ್ಯಾನರ್ ಅಡಿ ಜೆಪಿ ಕಾರ್ಯಕರ್ತರು ಭಾನುವಾರ ಸಭೆ ನಡೆಸಿ ಶಾಸಕ ಹಾಲಪ್ಪ ಹಾಗೂ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್ ಕಾರ್ಯವೈಖರಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ ಭಟ್, ‘1962ರಿಂದ ಬಿಜೆಪಿಯಲ್ಲಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ ಅವರೊಂದಿಗೆ ನಾನು ಕೂಡ ಶ್ರಮಿಸಿದ್ದೇನೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಧೋರಣೆ ಬಿಜೆಪಿಯದ್ದು. ಆದರೆ, ಇತ್ತೀಚೆಗೆ ಈ ಧೋರಣೆಯಲ್ಲಿ ಬದಲಾವಣೆ ಕಾಣುತ್ತಿದೆ. ಸಾಗರ ಹಾಗೂ ಸೊರಬ ಕ್ಷೇತ್ರದ ಶಾಸಕರು ಬಿಜೆಪಿಗಿಂತ ತಾವೇ ಮುಖ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘ವ್ಯಕ್ತಿಗೆ ಅಧಿಕಾರ ದೊರೆತಂತೆ ನಡವಳಿಕೆಯಲ್ಲಿ ಸರಳತೆ, ವಿನಯವಂತಿಕೆ ರೂಢಿಸಿಕೊಳ್ಳಬೇಕು. ಯಾರು ತಮ್ಮನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೋ ಅವರನ್ನು ಗೌರವದಿಂದ ಕಾಣಬೇಕು. ಆದರೆ, ಸಾಗರ ಹಾಗೂ ಸೊರಬ ಕ್ಷೇತ್ರದ ಶಾಸಕರಲ್ಲಿ ಈ ಗುಣ ಕಾಣುತ್ತಿಲ್ಲ. ಈ ವಿಷಯವನ್ನು ಪಕ್ಷ ಹಾಗೂ ಪರಿವಾರದ ಹಿರಿಯರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

‘ಸಾಗರ ಕ್ಷೇತ್ರದಲ್ಲಿ ಮನಸ್ಸಿಗೆ ಬಂದ ಹಾಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ನಿರಂಕುಶ ಆಡಳಿತ ನಡೆಯುತ್ತಿದೆ. ಬಿಜೆಪಿ, ಸಂಘ ಪರಿವಾರದ ತತ್ವ, ಸಿದ್ಧಾಂತಗಳನ್ನು ಶಾಸಕರು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಬಿಜೆಪಿಯ ಅನೇಕ ಕಾರ್ಯಕರ್ತರಿಗೆ ಅಸಮಾಧಾನವಿದೆ. ಆದರೆ, ಹೆಚ್ಚಿನವರು ಭಯದ ಕಾರಣಕ್ಕೆ ಬಹಿರಂಗವಾಗಿ ಅದನ್ನು ಹೇಳುತ್ತಿಲ್ಲ’ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚೇತನ್ ರಾಜ್ ಕಣ್ಣೂರು ಹೇಳಿದರು.

‘ಕಳೆದ 32 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಈಗಿನ ಶಾಸಕರು ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಹಣದ ಬಲದಿಂದಲೇ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಅಹಂನಲ್ಲಿ ಅವರಿದ್ದಾರೆ. ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಲವು ಅಕ್ರಮ ನಡೆಸಿದ್ದಾರೆ. ಇದಕ್ಕೆಲ್ಲಾ ಪಕ್ಷದ ಜಿಲ್ಲಾಧ್ಯಕ್ಷರೇ ಸೂತ್ರಧಾರರಾಗಿದ್ದಾರೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ವಾಗ್ದಾಳಿ ನಡೆಸಿದರು.

‘ಕೇವಲ ಶಾಸಕರಿಂದ ಮಾತ್ರವಲ್ಲ, ಸಾಗರದಲ್ಲಿ ಪಕ್ಷದ ಘಟಕಗಳ ಪದಾಧಿಕಾರಿಗಳಿಂದ ಕೂಡ ಕಾರ್ಯಕರ್ತರಿಗೆ ಅವಮಾನವಾಗುತ್ತಿದೆ. ಇಡೀ ತಾಲ್ಲೂಕನ್ನು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಶಾಸಕರ ಬೆಂಬಲಿಗರಿಂದ ಹಲವು ಬಾರಿ ಕ್ಷೇತ್ರದಲ್ಲಿ ದುಂಡಾವರ್ತನೆ’ ನಡೆದಿದೆ ಎಂದು ನಗರಸಭೆ ಮಾಜಿ ಸದಸ್ಯ ಕೆ. ವಾದಿರಾಜ್ ದೂರಿದರು.

‘ಬಿಜೆಪಿಯಿಂದ ಸಾಗರದಲ್ಲಿ ಹಾಲಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದು ದುರದೃಷ್ಟಕರ. ಅವರನ್ನು ಗೆಲ್ಲಿಸಿದ ಪಾಪದ ಪ್ರಾಯಶ್ಚಿತವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಶಾಸಕರಾಗಿ ಮಾಡಬಾರದ್ದನ್ನೆಲ್ಲಾ ಅವರು ಮಾಡಿದ್ದಾರೆ. ಬೂಟು ನೆಕ್ಕುವವರಿಗೆ ಮಾತ್ರ ಸಾಗರದ ಬಿಜೆಪಿಯಲ್ಲಿ ಪ್ರಾತಿನಿಧ್ಯ ಎನ್ನುವ ಸ್ಥಿತಿ ಅವರಿಂದ ಬಂದಿದೆ’ ಎಂದು ಬಿಜೆಪಿ ಮುಖಂಡ ಪ್ರಕಾಶ್ ಕುಂಠೆ ಬೇಸರ ವ್ಯಕ್ತಪಡಿಸಿದರು.

‘ಸ್ವಾಭಿಮಾನವಿದ್ದವರು ಹಾಲಪ್ಪ ಅವರ ಜೊತೆ ಇರಲು ಸಾಧ್ಯವಿಲ್ಲ. ಹಿಂದುತ್ವದ ರಕ್ಷಣೆ ಮಾಡುತ್ತಾರೆ ಎಂದು ನಾವು ಅವರನ್ನು ಗೆಲ್ಲಿಸಿದೆವು. ಆದರೆ, ಉಡಾಫೆಯಾಗಿ ಮಾತನಾಡುತ್ತಾರೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಮಾಜಿ ಪ್ರಮುಖರಾದ ಪ್ರಶಾಂತ್ ಹೆಗಡೆ ಆವಿನಹಳ್ಳಿ ಟೀಕಿಸಿದರು.

‘ಹಾಲಿ ಶಾಸಕರಿಂದ ಬಿಜೆಪಿಯ ಕಾರ್ಯಕರ್ತರ ಆತ್ಮ ಗೌರವಕ್ಕೆ ಧಕ್ಕೆ ಉಂಟಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳುವುದೆ ತಪ್ಪು ಎನ್ನುವಂತೆ ಹಾಲಪ್ಪ ವರ್ತಿಸುತ್ತಿದ್ದಾರೆ. ಕಾರ್ಯಕರ್ತರ ಸ್ವಾಭಿಮಾನಕ್ಕಿಂತ ಯಾವುದೂ ದೊಡ್ಡದಲ್ಲ’ ಎಂದು ವೀರಶೈವ ಸಮಾಜದ ಮುಖಂಡ ಜಗದೀಶ್ ಒಡೆಯರ್ ಹೇಳಿದರು.

‘ಆವಿನಹಳ್ಳಿ ಭಾಗದ ಬಿಜೆಪಿಯ ಪ್ರತಿಯೊಂದು ಬೂತ್ ಕಮಿಟಿಯಲ್ಲೂ ಹಾಲಪ್ಪ ಅವರು ತಮ್ಮ ಸಂಬಂಧಿಕರನ್ನೆ ಪದಾಧಿಕಾರಿಗಳನ್ನಾಗಿ ಮಾಡುವ ಮೂಲಕ ಪಕ್ಷವನ್ನು ಹೈಜಾಕ್ ಮಾಡಿದ್ದಾರೆ. ಗೋಪಾಲಕೃಷ್ಣ ಬೇಳೂರು ಬಿಜೆಪಿಯ ಶಾಸಕರಾಗಿದ್ದಾಗ ಕಾಮಗಾರಿಯಲ್ಲಿ ಶೇ 2ರಷ್ಟು ಕಮಿಷನ್ ಪಡೆಯುತ್ತಾರೆ ಎಂಬ ಆರೋಪವಿತ್ತು. ಈಗ ಕಮಿಷನ್ ದರ ಶೇ 15ಕ್ಕೆ ಏರಿದೆ’ ಎಂದು ಬಿಜೆಪಿ ಮುಖಂಡ ಲೋಕೇಶ್ ಹುಣಾಲುಮಡಿಕೆ ಆರೋಪಿಸಿದರು.

ಬಸವರಾಜ್ ಬೇಸೂರು, ಅಭಿಷೇಕ್ ಅದರಂತೆ, ರಜನೀಶ್ ಹೆಗಡೆ ಹಕ್ರೆ, ವಿರೂಪಾಕ್ಷ, ಉದಯಕುಮಾರ್ ಬೇದೂರು, ರವಿಕುಮಾರ್ ಯಡೆಹಳ್ಳಿ, ಸೂರಜ್ ಮೂಡಳ್ಳಿ, ಜಗದೀಶ್ ಗೌಡ ಮಾತನಾಡಿದರು. ಕೆ.ಎಚ್.ಸುದರ್ಶನ, ಬಿ.ಡಿ.ರವಿಕುಮಾರ್, ವಸಂತಕುಮಾರ್ ಇದ್ದರು.

ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್‌ಗೆ ಹೋಗದಂತೆ ತಡೆದಿದ್ದೆ

ಬಿಜೆಪಿಯಲ್ಲಿನ ಕೆಲ ಘಟನೆಗಳಿಂದ ಮನನೊಂದ ಬಿ.ಎಸ್. ಯಡಿಯೂರಪ್ಪ ಅವರು ಒಮ್ಮೆ ದೇವೇಗೌಡರೊಂದಿಗೆ ಮಾತುಕತೆ ನಡೆಸಿ ಜೆಡಿಎಸ್‌ಗೆ ಹೋಗಲು ಸಿದ್ಧರಾಗಿದ್ದರು. ಸಚಿವ ಸ್ಥಾನದ ಆಮಿಷ ತೋರಿಸಿ ಕಾಂಗ್ರೆಸ್‌ನವರು ಬಿಎಸ್‌ವೈ ಅವರನ್ನು ಸೆಳೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷವೇ ಮುಖ್ಯ ಎಂದು ತಿಳಿಹೇಳಿ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲಾಗಿತ್ತು ಎಂದು ಪದ್ಮನಾಭ ಭಟ್ ಸಭೆಯಲ್ಲಿ ಹೇಳಿದರು.

ಕೆಜೆಪಿ ಕಟ್ಟುವಾಗ ಕೂಡ ಹಾಗೆ ಮಾಡದಂತೆ ಬಿಎಸ್‌ವೈಗೆ ಮನವಿ ಮಾಡಲಾಗಿತ್ತು. ಬಿಎಸ್‌ವೈ ತೀರಾ ಆತ್ಮೀಯರಾದರೂ ಅವರು ಕೆಜೆಪಿ ಕಟ್ಟಿದಾಗ ಅವರೊಂದಿಗೆ ಹೋಗಿಲ್ಲ. ಆ ಮಟ್ಟಿಗಿನ ಪಕ್ಷನಿಷ್ಠೆ ತೋರಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT