ಗುರುವಾರ , ಜೂನ್ 30, 2022
25 °C
ಬೀದಿ, ಬಯಲಲ್ಲೇ ನಿತ್ಯದ ಕಾಯಕ

ಕೊರೊನಾಗೆ ಸಡ್ಡು ಹೊಡೆದ ಅಲೆಮಾರಿಗಳು; ಶೇ 70ರಷ್ಟು ಸದಸ್ಯರಿಗಿಲ್ಲ ಮಾಸ್ಕ್‌ ಅರಿವು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಿಶ್ವದ ಎಲ್ಲೆಡೆ ಕೋವಿಡ್‌ ಹಾವಳಿ ಇಟ್ಟಿದ್ದರೂ ಇಲ್ಲಿನ ಸಹ್ಯಾದ್ರಿ ಕಾಲೇಜು ಹತ್ತಿರ ರಸ್ತೆ ಬದಿ ನೆಲೆಸಿರುವ ಅಲೆಮಾರಿ ಕುಟುಂಬಗಳತ್ತ ಸೋಂಕು ಸುಳಿದಿಲ್ಲ. ನಿತ್ಯವೂ ಪೇಟೆ, ಹಳ್ಳಿ ತಿರುಗಿ ಕೂದಲು, ಹೇರ್‌ಪಿನ್, ಬಾಚಣಿಕೆ ಮಾರುವ ಇವರಿಗೆ ಪ್ರಕೃತಿಯೇ ಸಂರಕ್ಷಕ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅರ್ಧ ಲಕ್ಷ ದಾಟಿದೆ. ಮನೆಯಿಂದ ಹೊರಗೆ ಬಾರದೆ ಸಂರಕ್ಷಿತ ವಾತಾವರಣದಲ್ಲಿ ಇದ್ದ ಹಲವರಿಗೂ ಕೋವಿಡ್‌ ಕಾಡಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲೂ ಈ ಅಲೆಮಾರಿ ಸಮುದಾಯದ ಒಬ್ಬರಿಗೂ ಸೋಂಕು ತಗುಲಿಲ್ಲ. ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಅಲ್ಲಿರುವ 190 ಜನರಲ್ಲಿ ಶೇ 70ರಷ್ಟು ಜನರು ಇಂದಿಗೂ ಮಾಸ್ಕ್‌ ಧರಿಸುವುದಿಲ್ಲ. ಶೇ 40ರಷ್ಟು ಸದಸ್ಯರು ಲಾಕ್‌ಡೌನ್‌ ಸಮಯದಲ್ಲೂ ಬೀದಿಬೀದಿ ತಿರುಗಿ ನಿತ್ಯದ ಕಾಯಕ ಮಾಡುತ್ತಿದ್ದಾರೆ.

ಶಿಳ್ಳೇಕ್ಯಾತ, ಸಿಂಧೋಳ್, ಸುಡುಗಾಡು ಸಿದ್ದರು, ದುರುಗಮುರುಗಿ ಇತ್ಯಾದಿ ಹೆಸರಿನಿಂದ ಕರೆಯುವ ಪರಿಶಿಷ್ಟ ಜಾತಿಗೆ ಸೇರಿದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು 40 ವರ್ಷಗಳಿಂದ ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದ ಹೊರವಲಯ ರಸ್ತೆಯ ಖಾಲಿ ಜಾಗದಲ್ಲಿ ಟೆಂಟ್‌ ಹಾಕಿಕೊಂಡು ಜೀವನ ಸಾಗಿಸುತ್ತಿವೆ. ಭಿಕ್ಷಾಟನೆ, ಕೂದಲು, ಪಿನ್ನು, ಬಾಚಣಿಕೆಗಳ ಮಾರಾಟ ಅವರ ಪ್ರಮುಖ ವೃತ್ತಿ.

ಹಲವು ದಶಕಗಳ ಹಿಂದೆ ಆಂಧ್ರಪ್ರದೇಶದಿಂದ ವಲಸೆ ಬಂದಿದ್ದ ಈ ಕುಟುಂಬಗಳು ಬಿ.ಎಚ್‌.ರಸ್ತೆಯ ಮಹದೇವಿ ಚಿತ್ರಮಂದಿರದ ಬಳಿ ನೆಲೆ ನಿಂತಿದ್ದವು. 40 ವರ್ಷಗಳ ಹಿಂದೆ ಸಹ್ಯಾದ್ರಿ ಕಾಲೇಜು ಹತ್ತಿರದ ಈಗಿನ ಜಾಗಕ್ಕೆ ಸ್ಥಳಾಂತರಗೊಂಡಿದ್ದವು. ಇಂದಿಗೂ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ನೀರು, ಶೌಚಾಲಯ ಸೇರಿ ಯಾವುದೇ ಮೂಲಸೌಕರ್ಯವಿಲ್ಲ. ಮಹಿಳೆಯರು ಸೀರೆ, ತೆಂಗಿನಗರಿಗಳ ಮರೆಯಲ್ಲಿ, ಪುರುಷರು ಬಯಲಲ್ಲೇ ಸ್ನಾನ ಮಾಡುತ್ತಾರೆ. ಆ ಕುಟುಂಬಗಳಲ್ಲಿ ಎಸ್ಸೆಸ್ಸೆಲ್ಸಿ ಓದಿರುವುದು ಒಬ್ಬಳೇ ಬಾಲಕಿ.

ಅಲ್ಲಿರುವ ಕುಟುಂಬಗಳಲ್ಲಿ ಕೆಲವರಿಗೆ ಇಂದು ದುಡಿಮೆಯಾದರೆ ಅದನ್ನೇ ಉಳಿದವರಿಗೂ ಹಂಚಿ ತಿನ್ನುತ್ತಾರೆ. ಸಾಮರಸ್ಯ, ಸಹಬಾಳ್ವೆಗೂ ಈ ಕುಟುಂಬಗಳು ಮಾದರಿಯಾಗಿವೆ.

***

ಪ್ರಕೃತಿಯೇ ಕಾಪಾಡುತ್ತಾಳೆ

‘ಲಾಕ್‌ಡೌನ್ ಸಮಯದಲ್ಲೂ ಕೆಲವು ಕುಟುಂಬಗಳು ಹಳ್ಳಿಗಳಿಗೆ ಹೋಗುತ್ತಿವೆ. ವ್ಯಾಪಾರ ಇಲ್ಲ. ನಗರ ಪಾಲಿಕೆ ಎರಡು ಹೊತ್ತು ಊಟ ಕೊಡುತ್ತಿದೆ. ಮಧ್ಯಾಹ್ನ ಉಪವಾಸ. ಮಾಸ್ಕ್‌, ಸ್ಯಾನಿಟೈಸರ್ ಖರೀದಿಸುವಷ್ಟು ಶಕ್ತಿ ನಮ್ಮಲ್ಲಿ ಇಲ್ಲ. ಯಾರೂ ನಮಗೆ ಕೊಟ್ಟಿಲ್ಲ. ಹಾಗಾಗಿ, ಬಹುತೇಕ ಜನರು ಇಲ್ಲಿ ಮಾಸ್ಕ್‌ ಧರಿಸುವುದಿಲ್ಲ. ಪ್ರಕೃತಿಯೇ ನಮ್ಮ ತಾಯಿ. ಅವಳೇ ನಮ್ಮನ್ನು ಕಾಪಾಡುತ್ತಿದ್ದಾಳೆ’ ಎನ್ನುತ್ತಾರೆ ಅಲೆಮಾರಿ ಸಮುದಾಯದ ಯಜಮಾನ ಗಂಗಣ್ಣ.

***

ಅಲೆಮಾರಿ ಸಮುದಾಯಗಳ ಸದಸ್ಯರು ಕಠಿಣ ಕೆಲಸ ಮಾಡುತ್ತಾರೆ. ವಾತಾವರಣ, ಬಿಸಿಲಿಗೆ ಸದಾ ತೆರೆದುಕೊಳ್ಳುವ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೂ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

- ಡಾ.ಕೆ.ಎಲ್‌.ವೇಣುಗೋಪಾಲ್, ಸರ್ಕಾರಿ ವೈದಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು