ಶುಕ್ರವಾರ, ಅಕ್ಟೋಬರ್ 29, 2021
20 °C
ಸುಗಮ ಸಂಚಾರಕ್ಕೆ ಅಡ್ಡಿ, ಸುತ್ತಿ ಬಳಸಿ ಸಾಗುವ ವಾಹನಗಳು, ರಸ್ತೆ ಮಧ್ಯೆ ಗುಂಡಿಗಳು

‘ಸ್ಮಾರ್ಟ್’ ಅಲ್ಲದ ಕಾಮಗಾರಿ: ನಾಗರಿಕರಿಗೆ ಕಿರಿಕಿರಿ

ಚಂದ್ರಹಾಸ ಹಿರೆಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಅನುಷ್ಠಾನ ನಗರದ ನಾಗರಿಕರನ್ನು ಹೈರಾಣಾಗಿಸಿವೆ. ನಿಧಾನಗತಿಯ, ಯೋಜಿತವಲ್ಲದ ಅವೈಜ್ಞಾನಿಕ ಕಾಮಗಾರಿಗಳ ಫಲವಾಗಿ ಕಾರು, ಬೈಕ್‌, ಆಟೊ ಚಾಲಕರು, ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಯೋಜಿತವಾಗಿ ಅನುಷ್ಠಾನಗೊಳಿಸದೇ ಎಲ್ಲ ಕೆಲಸಗಳನ್ನೂ ಏಕ ಕಾಲಕ್ಕೆ, ಎಲ್ಲೆಡೆ ಕೈಗೊಂಡಿರುವ ಪರಿಣಾಮ ಜನರು ಮನೆಗಳ ಬಳಿಗೆ ತೆರಳಲೂ ಪರದಾಡುವ ಸ್ಥಿತಿ ಇದೆ.

ಅನುಷ್ಠಾನ ಲೋಪ

ಅತ್ಯುತ್ತಮ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಕ್ರಮಗಳ ಬಗೆಗೆ ನಗರದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಒಂದೆರಡು ಬಡಾವಣೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಒಂದು ರಸ್ತೆಯಲ್ಲಿ ಹಲವು ಕಾಮಗಾರಿ ಕೈಗೊಳ್ಳುವಾಗ ಯೋಜಿತವಾಗಿ ನಿರ್ವಹಿಸುತ್ತಿಲ್ಲ. ರಸ್ತೆ ಅತಿಕ್ರಮಣ ಮಾಡಿದೆಡೆ ತೆರವುಗೊಳಿಸದೇ ಇರುವ ಜಾಗದಲ್ಲೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಸ್ತೆ ಮಧ್ಯದಲ್ಲೇ ಯುಜಿಡಿ, ನೀರಿನ ಪೈಪ್‌ಲೈನ್, ಚರಂಡಿ, ವಿದ್ಯುತ್ ಕೇಬಲ್‌ ಅಳವಡಿಸಲಾಗುತ್ತಿದೆ. ಪೈಪ್‌ಲೈನ್ ಅಳವಡಿಕೆಗೆ ಗುಂಡಿಯನ್ನು ಒಂದೇ ಬಾರಿ ತೆಗೆಯದೇ ಪ್ರತಿಯೊಂದು ಪೈಪ್‌ಲೈನ್‌ಗೂ ಪ್ರತ್ಯೇಕ ಕಾಮಗಾರಿ ನಡೆಸಲಾಗುತ್ತಿದೆ.

ಒಂದು ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳುವಾಗ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸಾಕಷ್ಟು ದಿನಗಳು ಕಿರಿಕಿರಿ ಅನುಭವಿಸುವಂತಾಗಿದೆ. ಕೆಲವು ತಿಂಗಳುಗಳ ಹಿಂದೆ ನಿರ್ಮಿಸಿದ ಸುಂದರ ರಸ್ತೆಗಳನ್ನು ಅಗೆದ ಪರಿಣಾಮ ಸಂಪೂರ್ಣ ಹಾಳಾಗಿವೆ. ಒಂದು ಪ್ರದೇಶದಲ್ಲಿ ಕೆಲಸ ಕೈಗೊಂಡ ನಂತರ ಆ ಕಾಮಗಾರಿ ಪೂರ್ಣಗೊಳಿಸದೆ, ಅರ್ಧಕ್ಕೆ ಬಿಟ್ಟು ಬೇರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಇದು ಜನರಿಗೆ ಸಾಕಷ್ಟು ತೊಂದರೆ ಮಾಡಿದೆ.

ಆಟೊ ಚಾಲಕರಿಗೆ ಆರ್ಥಿಕ ನಷ್ಟ

ಮೊದಲೇ ಪೆಟ್ರೋಲ್, ವಾಣಿಜ್ಯ ಬಳಕೆಯ ಅನಿಲ ದರ ಗಗನಕ್ಕೇರಿದೆ. ಕೊರೊನಾ ಮತ್ತಿತರ ಕಾರಣಗಳಿಂದ ಆಟೊ ಚಾಲಕರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮಧ್ಯೆ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಅವೈಜ್ಞಾನಿಕ ನಿರ್ವಹಣೆಯ ಪರಿಣಾಮ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಐದಾರು ಕಿ.ಮೀ. ಸುತ್ತುವ ಅನಿವಾರ್ಯ ಇದೆ. ಯಾವ ರಸ್ತೆಗೆ ಹೋದರೂ ಮುಂದಕ್ಕೆ ಸಾಗುವುದೇ ಇಲ್ಲ. ಅಷ್ಟೊಂದು ಅಡೆತಡೆ, ಗುಂಡಿಗಳಿಂದ ತುಂಬಿಹೋಗಿವೆ.

ನಿತ್ಯವೂ ಗುಂಡಿಗಳಿಗೆ ಸಿಲುಕುವ ವಾಹನಗಳು

ಯುಜಿಡಿ, ಕೇಬಲ್‌, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ, ಫುಟ್‌ಪಾತ್ ನಿರ್ಮಾಣಕ್ಕೆಂದು ಹಲವು ಗುಂಡಿಗಳನ್ನು ತೋಡಲಾಗಿದೆ. ಕೆಲಸ ಮುಗಿದ ನಂತರ ವ್ಯವಸ್ಥಿತವಾಗಿ ಮುಚ್ಚುವುದಿಲ್ಲ. ಇದರಿಂದ ಆ ಮಾರ್ಗಗಳಲ್ಲಿ ಚಲಿಸುವ ವಾಹನಗಳು ಸಿಲುಕುತ್ತವೆ. ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

ಮಳೆ ಬಂದರೆ ಕೆಸರು, ನಿಂತರೆ ದೂಳು

ಶಿವಮೊಗ್ಗ ನಗರದಲ್ಲಿ ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಗಳಾಗುತ್ತವೆ. ನೀರು ತುಂಬಿದ ಗುಂಡಿಗಳಲ್ಲಿ ವಾಹನಗಳ ಚಕ್ರಗಳು ಇಳಿದು ಅಪಘಾತಗಳಾಗುತ್ತಿವೆ. ವಾಹನಗಳು ಸಂಚರಿಸುವಾಗ ಕೆಸರು ಸಿಡಿದು ಪಾದಚಾರಿಗಳ ಮೇಲೆ ಎರಚುತ್ತವೆ. ಕರ್ತವ್ಯಕ್ಕೆ ತೆರಳಲು ಅವಸರವಿದ್ದವರು ಕೆಸರು ಮೆತ್ತಿದ ಬಟ್ಟೆಯಲ್ಲೇ ಹೋಗುವ ಅನಿವಾರ್ಯ ಇದೆ. ಎಷ್ಟೋ ರಸ್ತೆಗಳಲ್ಲಿ ವಾಹನಗಳು ಕೆಸರಿನಲ್ಲಿ ಸಿಲುಕಿ ಮುಂದೆ ಸಾಗುವುದೇ ಇಲ್ಲ. ಇನ್ನು ಒಂದೆರಡು ದಿನ ಮಳೆ ನಿಂತರೆ ರಸ್ತೆಗಳು ದೂಳುಮಯವಾಗುತ್ತವೆ. ಒಂದೇ ದಿನದಲ್ಲಿ ಎದುರು ಬರುವ ವಾಹನಗಳು ಕಾಣದಷ್ಟು ದೂಳು ವಾಹನಗಳನ್ನು ಆವರಿಸುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಜನರೂ ದೂಳಿನ ಮಧ್ಯೆಯೇ ಬದುಕು ಸಾಗಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಮುಖ್ಯರಸ್ತೆಗಳು ಬಂದ್‌, ಒಳ ರಸ್ತೆಗಳಲ್ಲಿಲ್ಲ ಸೌಕರ್ಯ

ಮುಖ್ಯರಸ್ತೆಗಳಲ್ಲಿ ಕಾಮಗಾರಿಗಳು ನಡೆಯುವಾಗ ಒಳ ರಸ್ತೆಗಳ ಮೂಲಕ ವಾಹನಗಳು ಸಂಚರಿಸುತ್ತವೆ. ಒಳ ರಸ್ತೆಗಳು ಇಕ್ಕಟ್ಟಾಗಿರುವ ಕಾರಣ ವಾಹನ ದಟ್ಟಣೆಯಿಂದ ಸುಗಮ ಸಂಚಾರ ಸಾಧ್ಯವಾಗುವುದೇ ಇಲ್ಲ. ಅರ್ಧ ಕಿ.ಮೀ. ರಸ್ತೆ ಕ್ರಮಿಸಲು ಅರ್ಧ ತಾಸು ವ್ಯಯಿಸುವುದು ಅನಿವಾರ್ಯವಾಗಿದೆ. ಈಚೆಗೆ ಕುವೆಂಪು ರಸ್ತೆಯ ನ್ಯಾಯಾಧೀಶರ ವಸತಿಗೃಹದ ಮುಂದೆ ರಸ್ತೆ ಕಾಮಗಾರಿ ನಡೆಯುವಾಗ ಆದಿಚುಂಚನಗಿರಿ ಶಾಲಾ ರಸ್ತೆಯಲ್ಲಿ ವಾಹನಗಳು ಸಂಚರಿಸಲು
ಪರದಾಡಿದವು. ಇಂತಹ ಸ್ಥಿತಿ ನಗರದ ಎಲ್ಲೆಡೆ ನಿತ್ಯವೂ ಕಾಣಬಹುದು.

ವಾಹನಗಳ ಮೇಲೆ ಬೀಳುವ ಮರಗಳು

ಫುಟ್‌ಪಾತ್ ನಿರ್ಮಾಣಕ್ಕೆ ಪ್ರತಿ ರಸ್ತೆಯಲ್ಲೂ ಭೂಮಿ ಅಗೆಯಲಾಗಿದೆ. ಹೀಗೆ ಅಗೆಯುವಾಗ ಅಕ್ಕಪಕ್ಕದ ಮರಗಳ ಬೇರು ಸಡಿಲಗೊಳ್ಳುತ್ತಿವೆ. ಕೆಲವು ಕಡೆ ಮರಗಳು ವಾಹನಗಳ ಮೇಲೆ ಬಿದ್ದು ಜಖಂ ಆಗಿವೆ. ಇದಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಯಾವುದೇ ಪರಿಹಾರ ನಿಗದಿ ಮಾಡಿಲ್ಲ.

ಅಂದದ ಗೋಡೆಗಳಿಗೆ ರಾಚುವ ಕೆಸರು

ನಗರದ ಹಲವೆಡೆ ಗೋಡೆಗಳ ಮೇಲೆ ಈಚೆಗೆ ಪರಿಸರ, ಪರಂಪರೆ, ಸಂಸ್ಕೃತಿ, ಪ್ರವಾಸಿ ತಾಣಗಳನ್ನು ಪರಿಚಯಿಸುವ ಸುಂದರ ಚಿತ್ರಗಳನ್ನು ಬರೆಸಲಾಗಿತ್ತು. ಸ್ವಲ್ಪ ದಿನಗಳಲ್ಲೇ ಅಲ್ಲಿ ಗುಂಡಿಗಳನ್ನು ಅಗೆದು ರಸ್ತೆಗೆ ಮಣ್ಣು ಹರಡಿದ್ದಾರೆ.

ಮಳೆ ಬಂದ ತಕ್ಷಣ ವಾಹನಗಳ ಚಕ್ರಗಳಿಂದ ರಾಚುವ ಕೆಸರು ಎಲ್ಲ ಕಲಾಕೃತಿಗಳನ್ನೂ ಮುಳುಗಿಸುತ್ತಿದೆ.

ಅಂಕಿ ಅಂಶಗಳು

₹ 7 ಕೋಟಿ

ಖಾಸಗಿ ಬಸ್‌ನಿಲ್ದಾಣದ ಅಭಿವೃದ್ಧಿ

₹ 130 ಕೋಟಿ

ತುಂಗಾ ನದಿಯ ಉತ್ತರ ದಡದ ಅಭಿವೃದ್ಧಿ 

₹ 15.93 ಕೋಟಿ

ಟ್ಯಾಕ್ಸಿ, ಆಟೊರಿಕ್ಷಾ ನಿಲ್ದಾಣ

₹ 44.43 ಕೋಟಿ

ಎಲ್‌ಇಡಿ ದೀಪ ಅಳವಡಿಕೆ

100

ಸ್ಮಾರ್ಟ್‌ ಬಸ್‌ನಿಲ್ದಾಣ  

₹ 979.98 ಕೋಟಿ ಮೊತ್ತದ ಕ್ರಿಯಾಯೋಜನೆ

ಸ್ಮಾರ್ಟ್‌ ಸಿಟಿ ಯೋಜನೆಯ ಅನುಷ್ಠಾನಕ್ಕಾಗಿ ₹ 979.98 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈವರೆಗೆ ₹ 396 ಕೋಟಿ ಅನುದಾನ ನೀಡಿವೆ.
₹ 309.41 ಕೋಟಿ ವೆಚ್ಚ ಮಾಡಲಾಗಿದೆ.  

53 ಕಾಮಗಾರಿಗಳಲ್ಲಿ ₹ 54.20 ಕೋಟಿ ಮೌಲ್ಯದ 21 ಕಾಮಗಾರಿಗಳು ಪೂರ್ಣಗೊಂಡಿವೆ.
₹ 889.8 ಕೋಟಿ ಮೊತ್ತದ 30 ಕಾಮಗಾರಿಗಳು ಪ್ರಗತಿಯಲ್ಲಿವೆ. ₹ 36.70 ಕೋಟಿ ಮೊತ್ತದ ಎರಡು ಕಾಮಗಾರಿ ಡಿ.ಪಿ.ಆರ್. ಹಂತದಲ್ಲಿದೆ. ಸಾರ್ವಜನಿಕ ಸಹಭಾಗಿತ್ವದ ಎರಡು ಯೋಜನೆಗಳು ಪ್ರಗತಿಯಲ್ಲಿವೆ. ₹ 143.60 ಕೋಟಿ ಮೊತ್ತದ ಎರಡು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಲ್ಲಿ ₹ 329.10 ಕೋಟಿ ಮೊತ್ತದ 31 ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅವುಗಳಲ್ಲಿ ₹ 193.70 ಕೋಟಿ ಮೊತ್ತದ 30 ಕಾಮಗಾರಿಗಳು ಪೂರ್ಣಗೊಂಡಿವೆ. ₹ 135.40 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟಾರೆ ₹ 1,485.61 ಕೋಟಿ ಮೊತ್ತದ 87 ಯೋಜನೆಗಳನ್ನು ಸ್ಮಾರ್ಟ್‌ ಸಿಟಿ ಪ್ರದೇಶ (ಎ.ಬಿ.ಡಿ.) ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಕೈಗೆತ್ತಿಕೊಂಡ ಕಾಮಗಾರಿಗಳು

₹ 505.71 ಕೋಟಿ ವೆಚ್ಚದಲ್ಲಿ 110 ಕಿ.ಮೀ. ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ, 
₹ 20.69 ಕೋಟಿ ವೆಚ್ಚದಲ್ಲಿ 5 ಪ್ಯಾಕೇಜ್‌
ಗಳ ಮೂಲಕ 113 ಕನ್ಸರ್‌ವೆನ್ಸಿಗಳ ಅಭಿವೃದ್ಧಿ, ₹ 141.14 ಕೋಟಿ ವೆಚ್ಚದಲ್ಲಿ ನಗರದ 11 ಪ್ರದೇಶಗಳಲ್ಲಿ ಹಸಿರೀಕರಣ, ಉದ್ಯಾನಗಳ ಅಭಿವೃದ್ಧಿ ಹಾಗೂ ಜಲಾಭಿಮುಖ ನದಿ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ. ₹ 68.87 ಕೋಟಿ ವೆಚ್ಚದಲ್ಲಿ ಸಂಯೋಜಿತ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ ವ್ಯವಸ್ಥೆ, ₹ 17.26 ಕೋಟಿ ವೆಚ್ಚದಲ್ಲಿ 3 ಪಾರಂಪರಿಕ ಕಟ್ಟಡಗಳ ಪುನರುಜ್ಜೀವನ ನಿರ್ವಹಣೆ. ₹ 92.66 ಕೋಟಿ ವೆಚ್ಚದಲ್ಲಿ ಬಹು ಹಂತದ ವಾಹನ ನಿಲುಗಡೆ ವ್ಯವಸ್ಥೆ, ಹಾಕರ್ಸ್ ವಲಯ, ಇತ್ಯಾದಿ 11 ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಹಂತ ಹಂತವಾಗಿ ಕೆಲಸಗಳನ್ನು ನಿರ್ವಹಿಸದೇ ಇಡೀ ನಗರದಲ್ಲಿ ಏಕ ಕಾಲಕ್ಕೆ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥಮಾಡುತ್ತಿದ್ದಾರೆ. ಅಪಘಾತಗಳು ಸಾಮಾನ್ಯವಾಗಿವೆ.

ಕೆ.ಪಿ.ಶ್ರೀಪಾಲ್, ವಕೀಲ, ಗೋಪಾಳ

ಸ್ಮಾರ್ಟ್‌ ಸಿಟಿ ಯೋಜನೆ ಶಿವಮೊಗ್ಗ ನಗರದ ಅಂದ ಹೆಚ್ಚಿಸಲಿದೆ. ಸಾವಿರಾರು ಕೋಟಿ ಅನುದಾನ ದೊರೆಯುತ್ತಿದೆ. ಉತ್ತಮ ರಸ್ತೆ, ಪಾರ್ಕ್‌ ನಿರ್ಮಾಣವಾಗುತ್ತಿವೆ. ಎಲ್ಲ ಕಾಮಗಾರಿ ಮುಗಿದರೆ ಶಿವಮೊಗ್ಗ ಬೇರೆಯದೆ ಸ್ವರೂಪ ಪಡೆಯಲಿದೆ. ಜನರಿಗೆ ಈಗ ಕಿರಿಕಿರಿ ಎನಿಸಬಹುದು.  ಸ್ವಲ್ಪ ದಿನ ಸಮಾಧಾನದಿಂದ ಕಾಯಬೇಕು. 
ಎಸ್‌.ಎಸ್‌.ಜ್ಯೋತಿ ಪ್ರಕಾಶ್, ಅಧ್ಯಕ್ಷ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

ಕಾಮಗಾರಿ ವಿಳಂಬದ ಕಾರಣ ಆಟೊ ಚಾಲಕರಿಗೆ ತುಂಬಾ ಸಮಸ್ಯೆಯಾಗಿದೆ. ಎಲ್ಲ ಮಾರ್ಗಗಳಲ್ಲೂ ಸುತ್ತಿ ಬಳಸಿ ಸಾಗಬೇಕಿದೆ. ಬಾಡಿಗೆ ನಷ್ಟವಾಗುತ್ತಿದೆ. ಶೀಘ್ರ ಪೂರ್ಣಗೊಳಿಸಿದರೆ ಅನುಕೂಲವಾಗುತ್ತದೆ.
ಕುಂಸಿ ರವಿ, ಆಟೊ ಚಾಲಕ, ಗೋ‍ಪಿವೃತ್ತ

ಸ್ಮಾರ್ಟ್‌ ಸಿಟಿ ಅದ್ಬುತ ಯೋಜನೆ. ಆದರೆ, ನಿರ್ವಹಣೆ ಸರಿ ಇಲ್ಲ. ಯೋಜಿತವಾಗಿ ಕೆಲಸ ಮಾಡುತ್ತಿಲ್ಲ. ವಿವಿಧ ಕಾಮಗಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲ. ವಾಹನಗಳಿಗೆ ಸಾಕಷ್ಟು ಹಾನಿಯಾಗುತ್ತಿದೆ.
ಆದಿತ್ಯ, ಎಂಜಿನಿಯರಿಂಗ್ ವಿದ್ಯಾರ್ಥಿ, ಶರಾವತಿ ನಗರ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು