ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಗುಪ್ಪದಲ್ಲಿ ಪಾರ್ಸಲ್ ಸೇವಾ ಕೇಂದ್ರ

ಕಡಿಮೆ ಶುಲ್ಕ ಮತ್ತು ಹೆಚ್ಚು ಸುರಕ್ಷಿತ ಸೇವೆ ದೊರಕುವ ನಿರೀಕ್ಷೆ
Last Updated 14 ಫೆಬ್ರುವರಿ 2021, 3:38 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಪಾರ್ಸಲ್ ಸೇವಾ ಕೇಂದ್ರವನ್ನು ಆರಂಭಿಸುವುದಾಗಿ ರೈಲ್ವೆ ಇಲಾಖೆ ಪ್ರಕಟಣೆ ನೀಡಿದ್ದು ಈ ಭಾಗದ ಜನತೆಗೆ ಹರ್ಷ ತಂದಿದೆ.

ಕಳೆದ ತಿಂಗಳು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಇಲ್ಲಿಯ ರೈಲ್ವೆ ನಿಲ್ದಾಣದ ಸೌಲಭ್ಯಗಳ ತಪಾಸಣೆಗೆಂದು ಬಂದಾಗ ರೈಲ್ವೆ ಹೋರಾಟ ಸಮಿತಿ ವತಿಯಿಂದ ಪಾರ್ಸಲ್ ಸೇವಾ ಕೇಂದ್ರವನ್ನು ಆರಂಭಿಸುವಂತೆ ಮನವಿ ಮಾಡಲಾಗಿತ್ತು. ಈ ಹಿಂದೆ ಮಹಾರಾಜರ ಕಾಲದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ನಂತರ ಅದನ್ನು ನಿಲ್ಲಿಸಿದ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ರೈಲ್ವೆ ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂದಿಸಿದ ಇಲಾಖೆ ಅಧಿಕಾರಿಗಳು ಫೆ. 9ರಂದು ತಾಳಗುಪ್ಪದಲ್ಲಿ ಪಾರ್ಸಲ್ ಸೇವಾ ಕೇಂದ್ರವನ್ನು ಆರಂಭಿಸುವ ಸಂಬಂಧ ಆದೇಶ ಹೊರಡಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ.

ತಾಳಗುಪ್ಪ ರೈಲ್ವೆ ನಿಲ್ದಾಣ ಈ ಭಾಗದ ಕೊನೆಯ ನಿಲ್ದಾಣವಾಗಿರುವುದರಿಂದ ಅಲ್ಲಿ ಹೆಚ್ಚು ಕಾಲ ರೈಲು ನಿಲುಗಡೆ ಆಗುವುದರಿಂದ ರೈಲ್ವೆ ಬೋಗಿಗೆ ಪಾರ್ಸಲ್ ತುಂಬಲು ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ತಾಳಗುಪ್ಪ ನಿಲ್ದಾಣಕ್ಕೆ ಈ ಕೇಂದ್ರ ಮಂಜೂರಾಗಿದೆ.

ಹಾಲಿ ಬೆಂಗಳೂರು ಹಾಗೂ ಮೈಸೂರಿಗೆ ಇಲ್ಲಿಂದ ರೈಲು ಸಂಚಾರವಿದೆ. ಈ ಭಾಗದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು, ಉದ್ದಿಮೆದಾರರು ತಮ್ಮ ವಹಿವಾಟಿಗೆ ಸಂಬಂಧಪಟ್ಟ ಪಾರ್ಸಲ್‌ಗಳನ್ನು ರೈಲಿನ ಮೂಲಕ ಕಳುಹಿಸಲು ಅನುಕೂಲ ಕಲ್ಪಿಸಿದಂತಾಗಿದೆ. ಇದರ ಜೊತೆಗೆ ಸಾರ್ವಜನಿಕರು ಬೈಕ್, ಮೊಪೆಡ್‌ನಂತಹ ತಮ್ಮ ವಾಹನಗಳನ್ನು ಬೆಂಗಳೂರು ಅಥವಾ ಮೈಸೂರಿಗೆ ಕಳುಹಿಸಲು ಹಾಗೂ ಅಲ್ಲಿಂದ ತರಿಸಿಕೊಳ್ಳಲು ಅನುಕೂಲವಾಗಿದೆ.

ಈವರೆಗೆ ನಗರ ಪ್ರದೇಶಕ್ಕೆ ಪಾರ್ಸಲ್ ಕಳುಹಿಸಲು ಖಾಸಗಿ ಬಸ್‌ಗಳ ಸೇವೆಯನ್ನು ಜನರು ಅವಲಂಬಿಸಿದ್ದರು. ಆದರೆ ಇದಕ್ಕಾಗಿ ದುಬಾರಿ ಶುಲ್ಕವನ್ನು ಪಾವತಿಸಬೇಕಿತ್ತು. ರೈಲಿನ ಪಾರ್ಸಲ್ ಸೇವಾ ಕೇಂದ್ರದ ಮೂಲಕ ಕಡಿಮೆ ಶುಲ್ಕ ಮತ್ತು ಹೆಚ್ಚು ಸುರಕ್ಷಿತ ಸೇವೆ ದೊರಕುವ ನಿರೀಕ್ಷೆ ಮೂಡಿದೆ.

*
ಮಹಾರಾಜರ ಕಾಲದಲ್ಲಿ ಈ ಭಾಗದಿಂದ ಸಾಂಬಾರ ಪದಾರ್ಥಗಳನ್ನು ರವಾನೆ ಮಾಡಲು ರೈಲ್ವೆಯಲ್ಲಿ ಪಾರ್ಸಲ್ ಸೇವಾ ಕೇಂದ್ರದ ವ್ಯವಸ್ಥೆ ಇತ್ತು. ಈಗ ಪುನಃ ಈ ಕೇಂದ್ರವನ್ನು ತೆರೆಯುತ್ತಿರುವುದು ಹೆಚ್ಚಿನ ಪ್ರಯೋಜನವಾಗಲಿದೆ.
- ಕುಮಾರಸ್ವಾಮಿ, ಸಂಚಾಲಕರು, ರೈಲ್ವೆ ಹೋರಾಟ ಸಮಿತಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT