ಶಿವಮೊಗ್ಗ: ಅಲೆಮಾರಿ ಕುಟುಂಬದ ಬಾಲಕರಿಗೆ ಮೈಸೂರಿನಲ್ಲಿ, ಬಾಲಕಿಯರಿಗೆ ಉಡುಪಿಯಲ್ಲಿ ಉಚಿತ ಶಿಕ್ಷಣ, ಊಟ, ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭರವಸೆ ನೀಡಿದರು.
ನಗರದ ಹೊರವಲಯದ ಅಲೆಮಾರಿ ಕ್ಯಾಂಪ್‌ನಲ್ಲಿ ಸಹೋದರಿ ನಿವೇದಿತ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ‘ದಲಿತ ಕೇರಿಗೆ ಭೇಟಿ ಮತ್ತು ಶ್ರೀಗಳ ಆಶೀರ್ವಚನ
ಹಾಗೂ ಪಾದಪೂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಿವೇದಿತ ಪ್ರತಿಷ್ಠಾನ ಸ್ಥಳೀಯ ಅಲೆಮಾರಿಗಳಿಗೆ ಸಹಾಯ ಹಸ್ತ ಚಾಚಿರುವುದು ಸಂತೋಷದ ವಿಚಾರ. ಉತ್ತಮ ಕಾರ್ಯಕ್ಕೆ ನಮ್ಮನ್ನೂ ಸೇರಿಸಿಕೊಳ್ಳಬೇಕು’ ಎಂದು ಹೇಳಿದರು.
ದೇವರ ಅನುಗ್ರಹದ ಜತೆಗೆ ಪ್ರಯತ್ನವೂ ಇದ್ದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಎರಡೂ ಪ್ರಯತ್ನಗಳು ಸೇರಿದರೆ ವಿಜಯ ಲಭ್ಯವಾಗಲಿದೆ. ಮಹಾಭಾರತದಲ್ಲಿ ಕೃಷ್ಣನ ಅನುಗ್ರಹ, ಪಾರ್ಥನ ಪ್ರಯತ್ನ ಸೇರಿದಾಗ ಪಾಂಡವರಿಗೆ ವಿಜಯ ಲಭಿಸಿತ್ತು. ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿ ಕೈಕಟ್ಟಿ ಕೂರಬಾರದು ಎಂದು ಅವರು ಕಿವಿಮಾತು ಹೇಳಿದರು.
ದುಷ್ಟತನದಿಂದ ದೂರವಿರಿ, ಸದ್ಗುಣವನ್ನ ಬೆಳೆಸಿಕೊಳ್ಳಿ, ದುರ್ಗುಣ ಮತ್ತು ದುಶ್ಚಟ ದೂರವಿಟ್ಟರೆ ಬದುಕು ಒಳ್ಳೆಯದಾಗುತ್ತದೆ ಎಂದರು.
ವೇದಬ್ರಹ್ಮ ಅ.ಪ. ರಾಮಭಟ್, ನಿವೇದಿತಾ ಪ್ರತಿಷ್ಠಾನದ ತೇಜಸ್ವಿನಿ, ವಿದ್ಯಾ ರಾಘವೇಂದ್ರ, ಭಾಗೀರಥಮ್ಮ, ಮಮತಾ, ಕೃಷ್ಣವೇಣಿ, ನಮ್ರತಾ ಫ್ರಫುಲ್ಲಾ, ಪ್ರಭಾ, ಲಕ್ಷ್ಮಿ ಮಹೇಶ್, ವಿನಾಯಕ ಬಾಯರಿ ಅವರೂ ಈ ಸಂದರ್ಭದಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.