ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ದಾಖಲೆಗೆ ಅನುಮತಿ ನೀಡಿ: ಗುರುಮೂರ್ತಿ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಮಹಾಸಭೆಯಲ್ಲಿ ಗುರುಮೂರ್ತಿ
Last Updated 5 ಏಪ್ರಿಲ್ 2022, 4:49 IST
ಅಕ್ಷರ ಗಾತ್ರ

ಶಿವಮೊಗ್ಗ: ಅರ್ಹರಿಗೆ ಭೂಮಿಯ ಹಕ್ಕುಪತ್ರ ನೀಡಲು ಇರುವ ಗೊಂದಲ ನಿವಾರಣೆಗೊಳಿಸುವಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವಂತೆ ಸರ್ಕಾರವನ್ನು ಒತ್ತಾಯಿಸಬೇಕಾದ ಅನಿವಾರ್ಯ ಇದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಹೇಳಿದರು.

ಇಲ್ಲಿನಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಹಕ್ಕುಪತ್ರ ನೀಡಲು 75 ವರ್ಷಗಳ ಬದಲಾಗಿ 25 ವರ್ಷಗಳ ದಾಖಲೆಗಳನ್ನು ಒದಗಿಸಲು ಅನುಮತಿ ನೀಡಬೇಕು. ಈ ಕಾಯ್ದೆಯ ತಿದ್ದುಪಡಿ ಸಂಬಂಧ ಮಲೆನಾಡು ಮತ್ತು ಬಯಲುಸೀಮೆ ವ್ಯಾಪ್ತಿಯ ಶಾಸಕರು ಸದನದಲ್ಲಿ ಗಂಭೀರವಾಗಿ ಸಮಾಲೋಚನೆ ನಡೆಸುವ ಅಗತ್ಯವಿದೆ’ ಎಂದರು.

‘ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ಗಂಭೀರ ವಿಷಯಗಳನ್ನು ಮಂಡಳಿಯ ವ್ಯಾಪ್ತಿಗೊಳಪಡಿಸಬೇಕು. ಮಂಡಳಿಯು ಪ್ರಸಕ್ತ ಸಾಲಿನಲ್ಲಿ ₹ 350 ಕೋಟಿ ಪ್ರಸ್ತಾವ ಸಲ್ಲಿಸಿದೆ. ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಪ್ರಾಧಿಕಾರದ ಎಲ್ಲ ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರ ನಿಯೋಗದೊಂದಿಗೆ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

‘ಕಳೆದ ಮಾರ್ಚ್‌ವರೆಗೆ ಒಟ್ಟು 405 ಕಾಮಗಾರಿಗಳನ್ನು ಪೂರ್ಣಗೊಳಿಸಿ, ₹ 281.9 ಕೋಟಿ ಖರ್ಚು ಮಾಡಲಾಗಿದೆ. ಉಳಿದ 236 ಕಾಮಗಾರಿಗಳಲ್ಲಿ 50 ಕಾಮಗಾರಿಗಳ ಬದಲಾವಣೆ, ಸ್ಥಳ ತಕರಾರು, ಮುಂತಾದ ಕಾರಣಗಳಿಂದ ಆಡಳಿತಾತ್ಮಕ ಅನುಮೋದನೆಗೆ ಬಾಕಿ ಉಳಿದಿವೆ. 186 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ಮುಂದಿನ 2 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಸ್. ಮಣಿ ಮಾತನಾಡಿ, ‘ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವ ಸಲ್ಲಿಸುವ ಸದಸ್ಯರು, ವಾಣಿಜ್ಯೋದ್ದೇಶದ ಕಾಮಗಾರಿಗಳು, ಸ್ಮಾರಕ, ವಸತಿಗೃಹ, ಧಾರ್ಮಿಕ ಕಟ್ಟಡಗಳ ನಿರ್ಮಾಣ, ಸಾಲಸೌಲಭ್ಯ, ಕೊಳವೆಬಾವಿ, ರಸ್ತೆ ಅಭಿವೃದ್ಧಿ, ಬೀದಿದೀಪ ಅಳವಡಿಕೆಯಂತಹ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ. ಬದಲಾಗಿ ಡಾಂಬರೀಕರಣ, ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ಗಳನ್ನು ಕೈಗೊಳ್ಳಬಹುದು’ ಎಂದರು.

‘ಲಭ್ಯ ಅನುದಾನದಲ್ಲಿ ಶೇ 17.15ರಷ್ಟು ವಿಶೇಷ ಘಟಕ ಮತ್ತು ಶೇ 7.25ರಷ್ಟನ್ನು ಗಿರಿಜನ ಉಪಯೋಜನೆಗಳಿಗಾಗಿ ಮೀಸಲಿರಿಸಲಾಗುವುದು. ಕಾಲುಸಂಕ, ತೂಗುಸೇತುವೆ, ಇನ್ನಿತರ ಸೇತುವೆಗಳ ನಿರ್ಮಾಣ ಕಾರ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗುವುದು. ಅಲ್ಲದೇ ಸಾಮಾಜಿಕ ಯೋಜನೆಗಳಾದ ಅಂಗನವಾಡಿ, ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಭವನಗಳಿಗೆ ಮೀಸಲಿಡಲಾಗುವುದು. ಅಂತೆಯೇ ಸಣ್ಣ ನೀರಾವರಿ ಯೋಜನೆಗಳು, ಚೆಕ್‍ಡ್ಯಾಂ, ಇಂಗುಗುಂಡಿಗಳು ಹಾಗೂ ನೀರು ಶೇಖರಣ ಕಾಮಗಾರಿಗಳಿಗೆ ಮೀಸಲಿಡಬಹುದು’ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್, ಬೆಳ್ಳಿಪ್ರಕಾಶ್ ಸೇರಿ ಶಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT