ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ ನಾಟಿ ಮಾಡಿದ ಮಕ್ಕಳು

Last Updated 13 ಸೆಪ್ಟೆಂಬರ್ 2021, 6:44 IST
ಅಕ್ಷರ ಗಾತ್ರ

ಹೊಸನಗರ: ‘ಸುತ್ತಲೂ ಶರಾವತಿ ಹಿನ್ನೀರು, ನಡುಗಡ್ಡೆಯಂತಿರುವ ನಮ್ಮೂರಿಗೆ ಇರುವುದು ಒಂದೇ ಸಂಪರ್ಕ ರಸ್ತೆ. ಆದರೆ, ಅದು ಸಂಪೂರ್ಣ ಹದಗೆಟ್ಟು ಹೋಗಿದ್ದು, ದುರಸ್ತಿ ಮಾಡಿಕೊಡಿ’ ಎಂದು ತಾಲ್ಲೂಕಿನ ಪೂಜಾರಿ ಜಡ್ಡಿನ ಮಕ್ಕಳು ಶನಿವಾರ ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾಣಿಗ ಗ್ರಾಮದ ಪೂಜಾರಿ ಜಡ್ಡು, ಮೊಗೇರರ ಕ್ಯಾಂಪ್ ಹಾಗೂ ಗ್ರಾಮದ ದೇವರ ಕಾಡಿನ ರಸ್ತೆಗಳೆಲ್ಲವೂ ಸಂಪೂರ್ಣ ಹದಗೆಟ್ಟುಹೋಗಿವೆ. ಹೀಗಾಗಿ, ಈ ಭಾಗದ ವಿದ್ಯಾರ್ಥಿಗಳು ಶನಿವಾರ ಶಾಲೆಗೆ ಹೋಗದೆ ತಮ್ಮ ಪೋಷಕರೊಂದಿಗೆ ಸೇರಿ ಬೆಳ್ಳಂಬೆಳಿಗ್ಗೆ ರಸ್ತೆ ನಾಟಿ ಮಾಡುವ ಮೂಲಕ ಪ್ರತಿಭಟನೆಗೆ ಇಳಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ಬ್ಯಾಣದ, ಪ್ರತಿಭಟನೆ ನಿರತರನ್ನು ಸಮಾಧಾನಿಸಿ, ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ದುರಸ್ತಿ ಮಾಡುವಂತೆ ವಿನಂತಿಸಿದರು.

ಮನವಿಗೆ ಸ್ಪಂದಿಸಿದ ಇಒ, ‘ಸದ್ಯಕ್ಕೆ ಕೆಸರನ್ನು ತೆರವುಗೊಳಿಸಿ, ಮಳೆಗಾಲದ ನಂತರ ರಸ್ತೆ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು. ಅಲ್ಲದೆ, ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೂ ತಂದು ಪೂರ್ಣಪ್ರಮಾಣದ ಕಾಮಗಾರಿ ನಡೆಸುವ ಭರವಸೆ ನೀಡಿದರು.

ಧರ್ಮರಾಜ್, ನೇಮರಾಜ್, ನಾಗರಾಜ್, ರಾಘು, ಶಿವು, ತಿಮ್ಮಪ್ಪ, ಪುಟ್ಟಪ್ಪ, ರವಿ, ಲವ, ಅಭಿಲಾಷ್, ಪ್ರಶಾಂತ್, ಉಮಾಪತಿ, ಗಣಪತಿ, ಬಂಗಾರಪ್ಪ ಹಾಗೂ ಸ್ಥಳೀಯ ವಿನಾಯಕ ಯುವಕ ಸಂಘದ ಸದಸ್ಯರು, ಗ್ರಾಮದ ಹಿರಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT