ಶುಕ್ರವಾರ, ಮಾರ್ಚ್ 24, 2023
31 °C
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಆಮ್ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಸೋಮವಾರ ಮನವಿ ಸಲ್ಲಿಸಿದರು.

‘ಇಲ್ಲಿಯ ಸರ್ಕಾರಿ ಮಾಲೀಕತ್ವದಲ್ಲಿ 25, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 9, ಖಾಸಗಿ ಜಾಗದಲ್ಲಿ 17, ಕೊಳಚೆ ನಿರ್ಮೂಲನ ಮಂಡಳಿಯ ಮಾಲೀಕತ್ವದಲ್ಲಿ 2 ಸ್ಲಂ ಪ್ರದೇಶಗಳಿವೆ. ಒಟ್ಟು 53 ಕೊಳಚೆ ಪ್ರದೇಶಗಳಿವೆ. ಇಲ್ಲಿ 15,000ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಇವೆಲ್ಲವೂ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿವೆ. ಆದರೂ ಮೂಲ ಸೌಕರ್ಯವನ್ನು ಸರ್ಕಾರ ಒದಗಿಸಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

‘ಸರ್ಕಾರದಿಂದ ಕೇವಲ ಭರವಸೆ ಕೊಟ್ಟರೇ ವಿನಾ ಹಕ್ಕುಪತ್ರ ಕೊಡಲಿಲ್ಲ. ಕೊಳಚೆ ಪ್ರದೇಶವನ್ನು ಮತ ಬ್ಯಾಂಕ್‌ಗಳನ್ನಾಗಿ ಮಾಡಿಕೊಂಡು ವಂಚಿಸುತ್ತಿದ್ದಾರೆ. 2012ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಗರಕ್ಕೆ ಭೇಟಿ ನೀಡಿದ್ದರು. ಆಗ 2502 ಮನೆಗಳಿಗೆ ಹಕ್ಕುಪತ್ರ ಕೂಡ ನೀಡಿದ್ದರು. ಆದರೆ ಅದು ಹಕ್ಕುಪತ್ರವಾಗಿರದೇ ಕೇವಲ ಪರಿಚಯ ಪತ್ರವಾಗಿತ್ತು. ಸರ್ಕಾರ ಹೀಗೆಯೇ ಸ್ಲಂ ನಿವಾಸಿಗಳನ್ನು ವಂಚಿಸುತ್ತಿದೆ’ ಎಂದು ಆರೋಪಿಸಿದರು.

‘ಕೊಳಚೆ ನಿರ್ಮೂಲನ ಮಂಡಳಿ ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ಕೊಡುವುದಾಗಿ ಹೇಳುತ್ತಿದೆ. ಆದರೆ ಅದು ಪರಿಚಯ ಪತ್ರವಾಗಬಾರದು. ನಗರದಲ್ಲಿರುವ ಎಲ್ಲ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಕೂಡಲೇ ಶಾಶ್ವತ ಹಕ್ಕುಪತ್ರ ನೀಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದೆ. ಪ್ರಮುಖರಾದ ನೇತ್ರಾವತಿ ಟಿ., ರೋಹಿತ್, ರವಿಕುಮಾರ್, ಪುಷ್ಪಲತಾ, ಸುರೇಶ್ ಕೋಟೆಗಾರ್, ಮಕ್ಬುಲ್ ಅಹ್ಮದ್, ಪ್ರದೀಪ್ ಇದ್ದರು.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು