ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೇಬೆನ್ನೂರು ಮಾರ್ಗಕ್ಕೆ ಭೂಮಿ: ಅಧಿಕ ಪರಿಹಾರಕ್ಕೆ ಒತ್ತಾಯ

Last Updated 3 ಫೆಬ್ರುವರಿ 2021, 15:20 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಣೆಬೆನ್ನೂರು–ಶಿವಮೊಗ್ಗ ರೈಲು ಯೋಜನೆಗೆ ಭೂಮಿ ಬಿಟ್ಟುಕೊಡುವುದಿಲ್ಲ. ಭೂಮಿ ನೀಡಿದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭೂಮಿ ಕಳೆದುಕೊಳ್ಳುವ ರೈತ ಹೋರಾಟ ಸಮಿತಿಯ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಂದು ಎಕರೆ ಜಮೀನಿಗೆ ₹ 1.25 ಕೋಟಿ,ಪ್ರತಿ ಎಕರೆ ಅಡಿಕೆ ತೋಟಕ್ಕೆ ₹ 2.50 ಕೋಟಿ ಪರಿಹಾರ ನೀಡಬೇಕು. ಇಲ್ಲವೇ, ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ಕೊಡಬೇಕು. ನಿರಾಶ್ರಿತ ರೈತ ಕುಟುಂಬಕ್ಕೆ ಉದ್ಯೋಗ ನೀಡಬೇಕು. ರೈತರ ಜಮೀನಿಗೆ ಹೋಗಲು ರಸ್ತೆ ಮಾಡಿಸಿಕೊಡಬೇಕು. ಸರ್ಕಾರಿ ಜಮೀನು, ಸರ್ಕಾರಿ ಪಡಾ, ಬಗರ್‌ಹುಕ್ಕುಂ, ಗ್ರಾಮಠಾಣಗಳಿಗೆ ಸೂಕ್ತ ಜಮೀನು ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ, ನ್ಯಾಮತಿ, ಶಿಕಾರಿಪುರ, ಹಿರೇಕೆರೂರು, ರಾಣೆಬೆನ್ನೂರು ತಾಲ್ಲೂಕಿನ ಹಲವು ಗ್ರಾಮಗಳ ಸುಮಾರು 1427 ಎಕರೆ ಜಮೀನು ರೈಲು ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಪ್ರಕಟಣೆ ಹೊರಡಿಸಿದೆ. ಒಂದು ಎಕರೆಗೆ 6 ಲಕ್ಷದಿಂದ 14 ಲಕ್ಷದವರೆಗೆ ಪರಿಹಾರ ನೀಡುವ ಮಾಹಿತಿ ಇದೆ. ರೈಲು ಮಾರ್ಗದ ಸರ್ವೆ ಪ್ರಕಾರ ಜಮೀನು ಮಧ್ಯಭಾಗದಲ್ಲಿ ಹಳಿ ಹಾದು ಹೋಗುತ್ತದೆ. ಅಕ್ಕ-ಪಕ್ಕದಲ್ಲಿ ಉಳಿದ ಜಮೀನಿನಲ್ಲಿ ಸಾಗುವಳಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಬಹುತೇಕ ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರು. ಸಂಪೂರ್ಣ ಭೂಮಿ ಕಳೆದುಕೊಂಡು ಕಾರ್ಮಿಕರಾಗುತ್ತಾರೆ. ಹಾಗಾಗಿ, ಜಮೀನು ಬಿಟ್ಟುಕೊಡುವುದಿಲ್ಲ ಎಂದರು.

ರೈಲು ಮಾರ್ಗ ಬೇರೆ ಕಡೆ ತೆಗೆದುಕೊಂಡು ಹೋಗಿ ಎಂದು ಸರ್ಕಾರಕ್ಕೆ ಹಿಂದೆಯೇ ತಿಳಿಸಿದ್ದೇವೆ. ಬಲವಂತಕ್ಕೆ ರೈತರು ಜಮೀನು ಕೊಡುವ ಪರಿಸ್ಥಿತಿ ನಿರ್ಮಾಣವಾದರೆ ಅಧಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಟಿ.ಹಾಲೇಶಪ್ಪ, ಚಂದ್ರಪ್ಪ, ಈಶಣ್ಣ, ಭೋಜನಾಯ್ಕ, ಜಗದೀಶ್ವರಯ್ಯ, ಇಟ್ಟೂರು ರಾಜು, ಇ.ಬಿ.ಜಗದೀಶ್, ಹಾಲೇಶ್‌ ನಾಯ್ಕ, ನೇಮಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT