ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಜೋರು

ಮೈದುಂಬಿದ ಕೆರೆ– ಕಟ್ಟೆಗಳು; ಭರ್ತಿಯಾದ ಜಲಾಶಯಗಳು
Last Updated 17 ಜೂನ್ 2021, 5:00 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿದೆ. ಕೆಲವೆಡೆ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಹಾಗಾಗಿ ಕೆರೆ, ಕಟ್ಟೆಗಳಲ್ಲಿ ನೀರು ತುಂಬಿದ್ದು, ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.

ಹೊಸನಗರ ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮನೆಯಿಂದ ಹೊರ ಬರಲಾಗದಷ್ಟು ಮಳೆ ಅಬ್ಬರಿಸುತ್ತಿದೆ. ಇದರ ನಡುವೆಯೇ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ತುಂಬಿದ ತುಂಗೆ: ಜಿಲ್ಲೆಯ ಹಲವೆಡೆ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗಾಜನೂರು, ತುಂಗಾ ಡ್ಯಾಂ ಭರ್ತಿಯಾಗಿದೆ. ತುಂಗಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.

ಹೊನ್ನೆತಾಳುವಿನಲ್ಲಿ ಭಾರಿ ಮಳೆ: ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ಉಳಿದಂತೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಸಾಗರದಲ್ಲೂ ಮುಂಗಾರು ಜೋರಿದೆ.

ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ್ಲಿಗೆ ಗ್ರಾಮದ ಹೊಗಳಿಕಮ್ಮ ಕೆರೆಯ ದಂಡೆ ಒಡೆದು ಹಲವು ಭೂ ಪ್ರದೇಶ ಜಾಲಾವೃತಗೊಂಡು ಅಪಾರ ಬೆಳೆ ಹಾನಿಯಾಗಿದೆ.

ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಆಟ: ಶಿವಮೊಗ್ಗದಲ್ಲಿ ಬೆಳಿಗ್ಗೆಯಿಂದ ಮಳೆಯಾಗುತ್ತಿತ್ತು. ಮಧ್ಯೆ ಮಧ್ಯೆ ಬಿಡುವು ನೀಡಿದ ಮಳೆ ಬಿಸಿಲಿನ ದರ್ಶನವಾಯಿತು. ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಆಟವಿತ್ತು.

ಕೃಷಿ ಚಟುವಟಿಕೆ ಬಿರುಸು: ಜಿಲ್ಲೆಯಾದ್ಯಂತ ಉತ್ತಮ ಮಳೆ ಯಾಗುತ್ತಿದೆ. ಮಲೆನಾಡು ಭಾಗಗಳು ಅನಿಸಿಕೊಂಡಿರುವ ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಜೋರು ಮಳೆಯಾಗುತ್ತಿದೆ. ಅರೆ ಮಲೆನಾಡು ಭಾಗಗಳಲ್ಲೂ ಉತ್ತಮ ಮಳೆಯಾಗಿದ್ದು, ಮೆಕ್ಕೆ ಜೋಳ ಬಿತ್ತನೆಗೆ ವೇಗ ಸಿಕ್ಕಂತಾಗಿದೆ. ಅಡಿಕೆ ತೋಟಗಳಲ್ಲಿ ಬಿಸಿಗಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ತೀರ್ಥಹಳ್ಳಿಯಲ್ಲಿ ತುಂಬಿದ ತುಂಗೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಳೆ ಬಾರಿ ಅವಾಂತರ ಸೃಷ್ಟಿ ಮಾಡಿದೆ. ಇಡೀ ದಿನ ಮಳೆ ಸುರಿಯುತ್ತಿದ್ದು, ಆಗುಂಬೆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗರವಳ್ಳಿಯಲ್ಲಿ ಬಾರಿ ಮಳೆಗೆ ಮನೆ ಕುಸಿದಿದೆ. ಪುರಾತನ ಬಾವಿಯೊಂದು ಜರಿದು ಬಿದ್ದ ಕುರಿತು ವರದಿಯಾಗಿದೆ.

ಆಗುಂಬೆಯಲ್ಲಿ 20 ಸೆಂ.ಮೀ, ತೀರ್ಥಹಳ್ಳಿಯಲ್ಲಿ 67.4 ಮಿ.ಮೀ ಮಳೆಯಾಗಿದೆ. ಮಳೆಯಿಂದಾಗಿ ಹಲವೆಡೆ ಗದ್ದೆಗಳು ಜಲಾವೃತವಾಗಿವೆ. ತೀರ್ಥಹಳ್ಳಿ ಮತ್ತು ಶೃಂಗೇರಿ ಭಾಗದಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಏರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT