ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ಮಾಡುವುದು ನಿಲ್ಲಿಸಬೇಕು: ರೈತ ಸಂಘ ಆಗ್ರಹ

ಕೈಗೆ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಿಸಿ ಪ್ರತಿಭಟನೆ
Published : 18 ಸೆಪ್ಟೆಂಬರ್ 2024, 15:16 IST
Last Updated : 18 ಸೆಪ್ಟೆಂಬರ್ 2024, 15:16 IST
ಫಾಲೋ ಮಾಡಿ
Comments

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ನಂಬರ್‌ ಜೋಡಣೆ ಮಾಡುವುದು ಕೂಡಲೇ ನಿಲ್ಲಿಸುವುದು, ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬಾರದು. ಪರಿಸರಕ್ಕೆ ಹಾನಿಯಾಗುವ ಈ ಕಾರ್ಯವನ್ನು ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೈಗೆ ಕ‍ಪ್ಪುಪಟ್ಟಿ ಧರಿಸಿಕೊಂಡು ಕರಾಳ ದಿನಾಚರಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಬುಧವಾರ ಪ್ರತಿಭಟನೆ ನಡೆಸಲಾಯಿತು. 

ರಾಜ್ಯ ಸರ್ಕಾರ ರೈತರ ಮೇಲೆ ಪ್ರಹಾರ ಮಾಡುವಂತಹ ಕೆಲಸ ಮಾಡುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ಮಾಡುವುದು ಕಾನೂನು ಬಾಹಿರವಾಗಿದೆ. ರೈತರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋದರೆ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ ಎಂದರು.

ಜಿಂದಾಲ್‌ ಕಂಪನಿಗೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಭೂಮಿ ನೀಡಬಾರದು. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಬೆಳೆ ಮತ್ತು ಮನೆಗಳು ಹಾನಿಯಾಗಿವೆ. ಸರ್ಕಾರ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಕೃಷಿ ಸಾಲ ಪಡೆಯಲು ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡಲು ಶುಲ್ಕಪಡೆಯಬಾರದು. ರೈತರ ಕೃಷಿ ಸಾಲವನ್ನು ಒತ್ತಾಯವಾಗಿ ವಸೂಲಿ ಮಾಡಬಾರದು. ಸಾಲ ನೀಡುವಾಗ ರೈತರನ್ನು ಸಿಬಿಲ್‌ನಿಂದ ಹೊರತುಪಡಿಸಬೇಕು. ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೇ ನಿವಾರಣೆ ಮಾಡಬೇಕು ಎಂದು ಎಂದರು. 

ಬಗರ್‌ ಹಕುಂ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಸಾಗುವಳಿ ಚೀಟಿ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕೃಷಿ ಬೆಲೆ ಆಯೋಗ ವರದಿ ಮತ್ತು ಡಾ. ಸ್ವಾಮಿನಾಥನ್‌ ವರದಿಯಂತೆ ಬೆಲೆ ನಿಗದಿ ಮಾಡಬೇಕು. ಪಹಣಿ ಮತ್ತು ಭೂ ದಾಖಲೆಗಳನ್ನು ನೀಡಲು ಈಗ ₹ 25  ಶುಲ್ಕ ಪಡೆಯುತ್ತಿರುವುದು ದುಬಾರಿಯಾಗಿದೆ. ಹೀಗಾಗಿಯೆ ಸರ್ಕಾರ ₹ 5 ಶುಲ್ಕ ಪಡೆಯಬೇಕು. ತೆಂಗಿಗೆ ಬಾಧಿಸುತ್ತಿರುವ ಕಪ್ಪು ತಲೆ ಹುಳುವಿನ ಬಾಧೆಯನ್ನು ಕೂಡಲೇ ನಿಯಂತ್ರಿಸಬೇಕು ಎಂದು ತಿಳಿಸಿದರು. 

ಮೈಕ್ರೋ ಫೈನಾನ್ಸ್‌ ಕಂಪನಿಗಳ ಹಣಕಾಸು ವ್ಯವಹಾರದ ಮೇಲೆ ಸರ್ಕಾರ ನಿಯಂತ್ರಣ ಮಾಡಬೇಕು. ಬೋರ್‌ವೆಲ್‌ ಕೊರೆಯಲು ಸರ್ಕಾರವೆ ಬೆಲೆ ನಿಗದಿ ಮಾಡಲು ಅಧಿಕಾರಿಗಳು, ಬೋರ್‌ವೆಲ್‌ ಮಾಲೀಕರು ಹಾಗೂ ರೈತರನ್ನು ಒಳಗೊಂಡ ಸಮಿತಿ ರಚಿಸಬೇಕು. ಭೂ ದಾಖಲೆ ಗಣಿಕೀಕೃತ ಮಾಡುವಾಗ ತಪ್ಪುಗಳು ಆದಲ್ಲಿ ನೌಕರರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಬೇಕು. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ವೆಚ್ಚದ ಬಗ್ಗೆ ತಮ್ಮ ಆಸ್ಪತ್ರೆಯ ಮುಂಭಾಗದಲ್ಲಿ ನಾಮಫಲಕ ಹಾಕಬೇಕು. ಖಾಸಗಿ ಶಾಲೆ ಮತ್ತು ಕಾಲೇಜುಗಳು ಶುಲ್ಕ ಪಡೆಯಲು ಸರ್ಕಾರದ ನಿಯಮಗಳನ್ನು  ಕಡ್ಡಾಯವಾಗಿ ಪಾಲಿಸಬೇಕು. ಅನಧಿಕೃತವಾಗಿ ಪಡೆದ ಶುಲ್ಕವನ್ನು ವಾಪಸ್ಸು ನೀಡಬೇಕು ಎಂದರು. 

ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಇ.ಬಿ ಜಗದೀಶ, ಹನುಮಂತಪ್ಪ, ಜಿ.ಎನ್‌ ಪಂಚಾಕ್ಷರಿ, ರುದ್ರೇಶ, ಜ್ಞಾನೇಶ, ಸಿ ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT