ಶಿವಮೊಗ್ಗ: ಅಡಿಕೆ ಸುಲಿಯುವ ಯಂತ್ರಕ್ಕೆ ಮನೆಯ ಮೀಟರ್‌ಗಳಿಂದಲೇ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ರೈತರು ಸ್ವಂತಕ್ಕಾಗಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತಾರೆ. ಮನೆಯ ಮೀಟರ್‌ಗಳಿಂದಲೇ ವಿದ್ಯುತ್ ಉಪಯೋಗಿಸಿ ಎಲ್‍ಟಿ–2 ದರಪಟ್ಟಿಯಂತೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಈಗ ವಿದ್ಯುತ್ ಇಲಾಖೆಯವರು ಕೈಗಾರಿಕೆಗಳಿಗೆ ಉಪಯೋಗಿಸುವ ಎಲ್‍ಟಿ–5 ವಿದ್ಯುತ್ ಸಂಪರ್ಕ ಪಡೆದು ಅಡಿಕೆ ಸುಲಿಯುವ ಯಂತ್ರ ಉಪಯೋಗಿಸಬೇಕೆಂದು ತೊಂದರೆ ನೀಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೊಸ ದರ ಪಟ್ಟಿ ಪ್ರಕಾರ ಇನ್ನೂ 9 ತಿಂಗಳು ರೈತರು ವಿದ್ಯುತ್ ಉಪಯೋಗಿಸದೇ ಇದ್ದರೂ ಕನಿಷ್ಠ ಶುಲ್ಕ ಕಟ್ಟಬೇಕಾಗುತ್ತದೆ. ಆದ್ದರಿಂದ ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‍ಟಿ–5 ಬದಲಾಗಿ ಎಲ್‍ಟಿ–2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಸುಟ್ಟುಹೋದ ಟಿ.ಸಿ.ಗಳನ್ನು ಕಾನೂನು ಪ್ರಕಾರ 72 ಗಂಟೆಯೊಳಗೆ ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸೆ. 20ಕ್ಕೆ ಪ್ರತಿಭಟನೆ: ಐ.ಟಿ. ಸೆಟ್‍ಗಳಿಗೆ ಕನಿಷ್ಠ 10 ಗಂಟೆ 3 ಫೇಸ್ ನಿರಂತರ ವಿದ್ಯುತ್ ನೀಡಬೇಕು. ಗ್ರಾಮಗಳಲ್ಲಿ ವಿಧಿಸಿರುವ ಮಾಸಿಕ ನಿಗದಿತ ಶುಲ್ಕ ಕೈಬಿಡಬೇಕು. ಹೀಗೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೆ. 20ರಂದು ಬೆಳಿಗ್ಗೆ 11ಕ್ಕೆ ರೈಲು ನಿಲ್ದಾಣದ ಬಳಿಯ ಕೆಇಬಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ರಾಘವೇಂದ್ರ, ಎಸ್.ಶಿವಮೂರ್ತಿ, ಹಿಟ್ಟೂರು ರಾಜು, ಸಿ.ಚಂದ್ರಪ್ಪ, ರಾಜಪ್ಪ, ಎ.ಯೋಗೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.