ಭಾನುವಾರ, ಜೂನ್ 26, 2022
22 °C

ಸಮಾಜದ ಋಣ ತೀರಿಸುವ ಕೆಲಸ ಮಾಡಿ: ಅಕ್ಷರ ಸಂತ ಹಾಜಬ್ಬ ಹರೇಕಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಪ್ಪನ್‌ಪೇಟೆ: ಬದುಕಿನಲ್ಲಿ ಸಾರ್ಥಕತೆ ಕಾಣಲು ಸಮಾಜದಿಂದ ಏನನ್ನೂ ನಿರೀಕ್ಷೆ ಮಾಡದೆ, ಶ್ರೀಮಂತಿಕೆಯನ್ನು ತೊರೆದು, ಸರಳವಾಗಿ ಬದುಕಿ ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ತಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಮುಡಿಪಾಗಿಸಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹಾಜಬ್ಬ ಹರೇಕಳ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‌ಕುಮಾರ್‌ ಅಭಿಮಾನಿ ಬಳಗ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್‌ಗೆ ನುಡಿನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಈ ಮಾತೃ ಭೂವಿಯ ಋಣ ತೀರಿಸಲು, ಬಾಲ್ಯದಲ್ಲಿಯೇ ಗುಣಾತ್ಮಕ ಶಿಕ್ಷಣದೊಂದಿಗೆ ಸನ್ಮಾರ್ಗದಲ್ಲಿ ಸಾಗಿ, ಬದುಕೆಂಬ ಮೂರು ದಿನದ ಸಂತೆಯಲ್ಲಿ ‘ನಾವು ಕಳೆದುಹೋಗುವ ಮುನ್ನ ನಿಸ್ವಾರ್ಥ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ನಿಜವಾದ ಬದುಕು’ ಎಂದರು.

ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು, ‘ಕನ್ನಡ ನಮ್ಮ ಸ್ವಾಭಿಮಾನದ ಸಂಕೇತ. ಈ ಭಾಷೆಯ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಯುವ ಶಕ್ತಿಯ ಕೈಯಲ್ಲಿದೆ. ನೆಲ–ಜಲ–ಭಾಷೆಗೆ ದಕ್ಕೆಯಾದಲ್ಲಿ ಕನ್ನಡಿಗರೆಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಅಣಿಯಾಗಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಕೇತಾರ್ಜಿ ರಾವ್‌ ಅವರು ತಾಯಿ ಭುವನೇಶ್ವರಿ ಭಾವಚಿತ್ರದ ರಾಜಬೀದಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು

ನಂತರ ಮಾತನಾಡಿ, ‘ಕನ್ನಡ ನಿತ್ಯೋತ್ಸವವಾಗಲಿ. ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಸಂಘಟನೆಗಳ ಕಾರ್ಯ ಅವಿಸ್ಮರಣೀಯ’ ಎಂದರು.

ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು ಕನ್ನಡ ನಾಡು ನುಡಿಗೆ ಶ್ರಮಿಸಿದ ಮಹನೀಯರ ವೇಷ ಭೂಷಣಗಳನ್ನು ತೊಟ್ಟಿದ್ದರು. ಆಟೊ ಚಾಲಕರು, ಮಾಲೀಕರು ತಮ್ಮ ವಾಹನಗಳನ್ನು ಶೃಂಗರಿಸಿ ಮೆರವಣಿಗೆಗೆ ಮೆರುಗು ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಹಾಜಬ್ಬ ಹರೇಕಳ ಅವರನ್ನು ವಿನಾಯಕ ವೃತ್ತದಿಂದ ಮೆರವಣೆಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು.

ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಬಳಗದ ಅಧ್ಯಕ್ಷ ಆರ್.ಎ. ಚಾಬುಸಾಬ್‌ ಕನ್ನಡ ಧ್ವಜಾರೋಹಣ ನೇರವೇರಿಸಿದರು. ಟಿ.ಆರ್. ಕೃಷ್ಣಪ್ಪ, ಆರ್.ಎನ್. ಮಂಜುನಾಥ್, ಪದ್ಮಸುರೇಶ್, ಜಿ.ಆರ್. ಗೋಪಾಲಕೃಷ್ಣ, ಎನ್. ವರ್ತೇಶ್‌, ಮಂಜಪ್ಪ, ಮೆಣಸೆ ಆನಂದ, ಎಂ.ಎಂ. ಪರಮೇಶ್, ಅಮೀರ್ ಹಂಜಾ, ಪಿಯೂಸ್‌ ರೋಡ್ರಿಗಸ್, ಆರ್.ಡಿ. ಶೀಲಾ, ಉಲ್ಲಾಸ್ ತೆಂಕೋಲು, ವಾಸು, ದೇವರಾಜ್, ಚೋಳರಾಜ್, ಹನೀಫ್‌, ಹಸನಬ್ಬ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು