ಸೋಮವಾರ, ಜನವರಿ 17, 2022
21 °C
ದಶಕ ಕಳೆದರೂ ಆಗದ ಸ್ಥಳಾಂತರ ಕಾರ್ಯ, ಚರ್ಚೆಯಲ್ಲೇ ಸಮಯ ಕಳೆದ ಮಹಾನಗರ ಪಾಲಿಕೆ

ಶಿವಮೊಗ್ಗ: ರಸ್ತೆ, ಫುಟ್‌ಪಾತ್ ಅತಿಕ್ರಮಿಸುವ ವಾರದ ಸಂತೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸುಮಾರು ನಾಲ್ಕು ಲಕ್ಷ ಜನಸಂಖ್ಯೆ ಇರುವ ಶಿವಮೊಗ್ಗ ನಗರದಲ್ಲಿ ವಾರದ ಸಂತೆಗೆ ವ್ಯವಸ್ಥಿತ ಸ್ಥಳ ದೊರಕಿಸಲು ಮಹಾನಗರ ಪಾಲಿಕೆ ವಿಫಲವಾಗಿದೆ.

ಶಿವಮೊಗ್ಗ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಿರುವ ಮಿಳ್ಳಘಟ್ಟ ರಸ್ತೆಯ ಮಗ್ಗುಲಲ್ಲೇ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದೆ. ಕೋವಿಡ್‌ ಸಮಯದಲ್ಲಿ ಸಂತೆ ಕ್ಷೀಣಿಸಿದರೂ ವ್ಯಾಪಾರ ವಹಿವಾಟು ನಿಂತಿಲ್ಲ. ತರಕಾರಿ, ಹಣ್ಣು, ದಿನಸಿ ಸೇರಿ ವಿವಿಧ ಸಾಮಗ್ರಿಗಳ ಮಾರಾಟ ರಸ್ತೆ ಬದಿಗಳಲ್ಲೇ ನಡೆಯುತ್ತಿದೆ.

ವಾರದ ಸಂತೆ ಸ್ಥಳಾಂತರ ಕಾರ್ಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪಾಲಿಕೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆಯಿಂದ ಇಂದಿಗೂ ಸಂತೆ ಸ್ಥಳಾಂತರಗೊಂಡಿಲ್ಲ. ಮಿಳ್ಳಘಟ್ಟ, ಗೋಪಾಳ ಮುಖ್ಯ ರಸ್ತೆಯಲ್ಲಿಯೇ ಈ ಸಂತೆ ನಡೆಯುತ್ತಿರುವುದರಿಂದ ಪ್ರತಿ ಮಂಗಳವಾರ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ, ಪಾದಚಾರಿಗಳ ಓಡಾಟಕ್ಕೂ ಅಡ್ಡಿಯಾಗಿದೆ. ರಸ್ತೆಯ ಮೇಲೆಯೇ ಮಕ್ಕಳು, ವೃದ್ಧರು ನಡೆದಾಡಬೇಕಿದೆ. ಇದರಿಂದ ವಾಹನಗಳ ಅಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ. ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ.

ರಸ್ತೆಯ ಎರಡೂ ಬದಿ ಕಾಲುದಾರಿ ಆಕ್ರಮಿಸಿಕೊಂಡು ಇಲ್ಲಿ ಸಂತೆ ನಡೆಸುವ ಕಾರಣ ಗೋಪಾಳ, ಮಿಳ್ಳಘಟ್ಟ, ಟಿಪ್ಪುನಗರ, ರಾಮಮನೋಹರ ಲೋಹಿಯಾ ನಗರ, ಬುದ್ಧನಗರ, ಅಣ್ಣಾನಗರ, ಅಶೋಕನಗರ ಮೊದಲಾದ ಭಾಗಗಳಿಗೆ ಈ ಮಾರ್ಗದ ಮೂಲಕ ಸಂಚರಿಸುವ ಬಸ್‌, ಕಾರು, ಲಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡಬೇಕಿದೆ. ಬಸ್, ಲಾರಿ ಚಾಲಕರು ಅನುಭವಿಸುವ ಯಾತನೆ ಹೇಳತೀರದು. ವಾಹನ ಚಲಾಯಿಸುವಾಗ ಸ್ವಲ್ಪ ಎಡವಿದರೂ ಅಪಘಾತ, ಅಪಾಯ ಸಂಭವಿಸುತ್ತವೆ.

ಖಾಸಗಿ ಬಸ್‌ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ಗಳಿಗಾಗಿ ಕಾಯಬೇಕಾದ ಸ್ಥಿತಿ ಇದೆ. ತರಕಾರಿ ತ್ಯಾಜ್ಯವನ್ನು ಪಾದಚಾರಿ ಮಾರ್ಗದ ಬಳಿಯ ಚರಂಡಿಗೆ ಸುರಿಯುವ ಕಾರಣ ನೀರು ಹರಿಯದೇ ನಿಲ್ಲುತ್ತದೆ. ಇದರಿಂದ ಸೊಳ್ಳೆಗಳ ಕಾಟ ಮಿತಿಮೀರಿದೆ. ಈ ಸಂತೆ ಮುಖ್ಯ ಬಸ್‌ನಿಲ್ದಾಣಗಳ ಪಕ್ಕದಲ್ಲೇ ಇರುವುದರಿಂದ ಪ್ರಯಾಣಿಕರಿಗೆ, ವಾಹನಗಳಿಗೆ, ಸುತ್ತಲಿನ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಅರಿತು ಅಂದಿನ ಸಂತೆಯನ್ನು ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಹತ್ತಿರದ ನಗರ ಪಾಲಿಕೆ ಜಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ₹ 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. 2016ರಲ್ಲಿಯೇ ಸಂತೆ ಸ್ಥಳಾಂತರಗೊಳ್ಳಲಿದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ. ಈ ನಡುವೆ ಐದಾರು ಮೇಯರ್‌ಗಳು ಬದಲಾಗಿದ್ದಾರೆ. ಶಾಸಕರೂ ಬದಲಾಗಿದ್ದಾರೆ. ಆದರೆ, ಸಂತೆ ಮಾತ್ರ ಸ್ಥಳಾಂತರಗೊಂಡಿಲ್ಲ. ಜನರ ಗೋಳೂ ತಪ್ಪಿಲ್ಲ.

110 ವ್ಯಾಪಾರಿಗಳಿಗಷ್ಟೇ ಜಾಗ: ಪ್ರಸ್ತುತ ನಿರ್ಮಿಸಿರುವ ಸಂತೆ ಮಾರುಕಟ್ಟೆ ಅವೈಜ್ಞಾನಿಕವಾಗಿದೆ. ಸುಮಾರು 500 ಅಂಗಡಿಗಳಿವೆ. ಅವುಗಳಲ್ಲಿ ಕೇವಲ 110 ಅಂಗಡಿಗಳಿಗೆ ಮಾತ್ರವೇ ಸ್ಥಳಾವಕಾಶವಿದೆ. ಇದು ಕೂಡ ಸಂತೆ ಸ್ಥಳಾಂತರಗೊಳ್ಳದಿರಲು ಮುಖ್ಯ ಕಾರಣ. ಮೊದಲು ₹ 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಪಾಲಿಕೆ ನೂತನ ಸಂತೆ ಜಾಗದ ಪಕ್ಕದಲ್ಲೇ ಪಾಲಿಕೆಗೆ ಸೇರಿದ 17 ಗುಂಟೆ ಜಾಗವನ್ನು ₹ 25 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತಿಸಿತ್ತು. ಆದರೆ, ಅನುಷ್ಠಾನ ಸಾಧ್ಯವಾಗಿಲ್ಲ.

ವಾಹನ ನಿಲುಗಡೆಗೆ ಅನುಕೂಲ: ಸಂತೆ ಸ್ಥಳಾಂತರಗೊಳ್ಳದ ಕಾರಣ ಕೆಎಸ್‌ಆರ್‌ಟಿಸಿ ಡಿಪೊ ಬಳಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸಂತೆ ಜಾಗ ಖಾಲಿ ಬಿದ್ದಿದೆ. ವ್ಯಾಪಾರಸ್ಥರು, ಸಾರ್ವಜನಿಕರ ವಾಹನ ನಿಲ್ಲಿಸಲು ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ. 

*

ನೂತನವಾಗಿ ನಿಗದಿಪಡಿಸಿದ ಸಂತೆ ಮೈದಾನದಲ್ಲಿ ಚಾವಣಿ ಸೇರಿ ಇನ್ನಷ್ಟು ಮೂಲಸೌಲಭ್ಯ ಕಲ್ಪಿಸಬೇಕಿದೆ. ಅಲ್ಲಿನ ನಿವಾಸಿಗಳು ಒಂದಷ್ಟು ಜಾಗಬಿಟ್ಟುಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಅವರ ಬೇಡಿಕೆ ಪರಿಶೀಲಿಸಿದ ನಂತರ ಸ್ಥಳಾಂತರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
-ಸುನೀತಾ ಅಣ್ಣಪ್ಪ, ಮೇಯರ್, ನಗರ ಪಾಲಿಕೆ

*

ಹೊಸ ಸ್ಥಳಕ್ಕೆ ಹೋದರೆ ವ್ಯಾಪಾರ ಕ್ಷೀಣಿಸಬಹುದು ಎಂದು ಬಹುತೇಕ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಈ ವಾರದಲ್ಲಿ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ.
-ಎಚ್‌.ಸಿ.ಯೋಗೀಶ್, ಪಾಲಿಕೆ ವಿರೋಧ ಪಕ್ಷದ ಸದಸ್ಯ

*

ಸಂತೆಯ ಮರುದಿನ ತರಕಾರಿ ತ್ಯಾಜ್ಯ ಪಾದಚಾರಿ ಮಾರ್ಗ, ರಸ್ತೆಯ ಮೇಲೆಲ್ಲ ಬಿದ್ದಿರುತ್ತದೆ. ಮಳೆಗಾಲದಲ್ಲಿ ಎರಡು–ಮೂರು ದಿನಕ್ಕೆ ಕೊಳೆತು ಸುತ್ತಲೂ ದುರ್ವಾಸನೆ ಹರಡಿರುತ್ತದೆ. ಇದರಿಂದ ನೆಮ್ಮದಿಯಿಂದ ಜೀವನಕ್ಕೆ ತೊಂದರೆಯಾಗಿದೆ.
-ಮಧು, ಆರ್‌ಎಂಎಲ್‌ ನಗರ

ವಿದ್ಯಾರ್ಥಿಗಳ ಕಲಿಕೆಗೂ ಅಡ್ಡಿ
ಸಂತೆ ನಡೆಯುವ ರಸ್ತೆ ಪಕ್ಕದಲ್ಲಿ ಮಿಳ್ಳಘಟ್ಟ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇದೆ. ಈ ಭಾಗದಲ್ಲಿ ಸೈಕಲ್‌ ಮೇಲೆ ಶಾಲಾ–ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಸರ್ಕಸ್‌ ಮಾಡುತ್ತಲೇ ಸಾಗಬೇಕಾದ ಅನಿವಾರ್ಯತೆ ಇದೆ. ವ್ಯಾಪಾರಿಗಳು ಉಳಿದ ತರಕಾರಿಗಳನ್ನು ಶಾಲೆ ಆವರಣ, ಸುತ್ತಲಿನ ಪ್ರದೇಶದ‌ಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಒಂದೆಡೆ ಇವು ಕೊಳೆತು ನಾರುತ್ತಿದ್ದರೆ, ಇನ್ನೊಂದೆಡೆ ಕತ್ತೆ, ಹಂದಿ, ನಾಯಿ, ದನಕರು ಅಲ್ಲಿಯೇ ತಿಂದು ಗಲೀಜು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಕೂಡ ಆಗುತ್ತಿದೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.