ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮೀಣ ಭಾಗದಲ್ಲಿ ವಾಹನಗಳಿಗೆ ಕಂಟಕವಾದ ಗುಂಡಿ!

ಅಪಾಯಕಾರಿಯಾದ ಜೆಜೆಎಂ ಕಾಮಗಾರಿ‌ಯ ಅಸಮರ್ಪಕ ನಿರ್ವಹಣೆ...
Published 9 ಆಗಸ್ಟ್ 2024, 6:16 IST
Last Updated 9 ಆಗಸ್ಟ್ 2024, 6:16 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಭಾರಿ ಮಳೆ ಸುರಿಯುವ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳು ಹಾಗೂ ಶಾಲಾ ವಾಹನಗಳ ಸುಗಮ ಸಂಚಾರಕ್ಕೆ ಕೆಲವೆಡೆ ಕೇಂದ್ರ ಸರ್ಕಾರದ ಜಲಜೀವನ (ಜೆಜೆಎಂ) ಯೋಜನೆ ಅಡಿ ನಡೆಸಿರುವ ಕಾಮಗಾರಿಯೇ ಕಂಟಕವಾಗಿದೆ.

ಈ ಭಾಗದಲ್ಲಿ ಆಗಿರುವ ಅರೆಬರೆ ಕಾಮಗಾರಿಯೇ ಪ್ರಯಾಣಿಕರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

₹ 267.7 ಕೋಟಿ ವೆಚ್ಚದಲ್ಲಿ 36 ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ (ಎಂವಿಎಸ್) ಮತ್ತು ₹ 150 ಕೋಟಿ ವೆಚ್ಚದ ಜಲಜೀವನ ಮಿಷನ್‌‌ (ಜೆಜೆಎಂ) ಯೋಜನೆಯ ಪ್ರತ್ಯೇಕ ಕಾರ್ಯಕ್ರಮದಡಿ ಗ್ರಾಮೀಣ ಭಾಗದಲ್ಲಿ ವಿವಿಧ ರೀತಿಯ ಎಚ್‌ಡಿಪಿಇ ಪೈಪ್‌ ಅಳವಡಿಸುವ ಕಾಮಗಾರಿ ಸಾಗಿದೆ. ಕಾಮಗಾರಿಗೆ ತೆಗೆದ ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದು, ಸಮಸ್ಯೆ ಉದ್ಭವಿಸಿದೆ.

ಅಪಾಯದ ಗುಂಡಿ: 323 ಗ್ರಾಮೀಣ ನೀರು ಸಂಗ್ರಹಣ ತೊಟ್ಟಿಗಳಿಂದ ಮನೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್‌ ಮಾಡಲು ಒಂದು ಮೀಟರ್‌ ಆಳದ ಗುಂಡಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ತೆಗೆಯಲಾಗಿದೆ. ಪೈಪ್‌ ಅಳವಡಿಸಿದ ನಂತರ‌ ಗುಂಡಿಗಳನ್ನು ಬೇಕಾಬಿಟ್ಟಿಯಾಗಿ ಮುಚ್ಚಲಾಗಿದೆ. ಮುಚ್ಚಿದ ಗುಂಡಿಯು ಮಳೆಯ ನೀರು ಹರಿದ ಪರಿಣಾಮ ಸಡಿಲಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅಪಾಯ ತಂದೊಡ್ಡಿದೆ. ಭಾರಿ ಗಾತ್ರದ ವಾಹನ ಚಲಿಸಿದರೆ ಅಲ್ಲಿಯೇ ಹುದುಗುತ್ತಿವೆ. ಕಾರು, ಬೈಕ್‌ಗಳು ಟಾರ್‌ ರಸ್ತೆಯಿಂದ ಕೆಳಗಿಳಿಸದಂತೆ ಆಗಿದೆ.

ಗುಂಡಿಗೆ ಬಿದ್ದ ಬಸ್‌ಗಳು: ಈಚೆಗೆ ಕಿತ್ತನಗದ್ದೆ ಸಮೀಪ ಶಾಲೆಯ ವಾಹನವೊಂದು ವಿದ್ಯಾರ್ಥಿಗಳನ್ನು ಕರೆತರಲು ಹೋಗುತ್ತಿದ್ದ ಸಂದರ್ಭ ಗುಂಡಿಗೆ ಬಿದ್ದಿದೆ. ನಂತರ ಸ್ಥಳೀಯರ ಸಹಕಾರದಿಂದ ವಾಹನ ಮೇಲಕ್ಕೆತ್ತಲಾಗಿದೆ. ಹಾರೋಗೊಳಿಗೆ ಮತ್ತು ಬೀಸು ಸಮೀಪ ಸರ್ಕಾರಿ ಬಸ್‌ ಗುಂಡಿಗೆ ಬಿದ್ದಿವೆ.

ತೀರ್ಥಹಳ್ಳಿ ತಾಲ್ಲೂಕಿನ ಕಿತ್ತನಗದ್ದೆ ಸಮೀಪ ಶಾಲಾ ಬಸ್‌ ಗುಂಡಿಗೆ ಬಿದ್ದಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಕಿತ್ತನಗದ್ದೆ ಸಮೀಪ ಶಾಲಾ ಬಸ್‌ ಗುಂಡಿಗೆ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT