ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ವಿದ್ಯಾರ್ಥಿಗಳಿಗೆ ಹಿರಿಯರ ನೆರವು

ಸಹ್ಯಾದ್ರಿ ವಿಜ್ಞಾನ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಶಂಕರಮೂರ್ತಿ ಅಭಿಮತ
Last Updated 9 ಅಕ್ಟೋಬರ್ 2021, 14:32 IST
ಅಕ್ಷರ ಗಾತ್ರ

ಶಿವಮೊಗ್ಗ: ಆರ್ಥಿಕವಾಗಿ ಹಿಂದುಳಿದ ಸಂಶೋಧನಾ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ನೆರವಾಗಬೇಕು. ಅವರ ಸಂಶೋಧನೆ ಮುಗಿಯುವವರೆಗೆ ದತ್ತು ಪಡೆಯಬೇಕು ಎಂದು ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಯೂ ಆದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾಗಮ ಹಾಗೂ ನಿವೃತ್ತ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ರಚನೆ ಅಲ್ಲಿನ ಸಂತಸದ ದಿನಗಳನ್ನು ನೆನಪು ಮಾಡಿಕೊಳ್ಳುವುದಕ್ಕೆ ಸೀಮಿತವಾಗಬಾರದು. ಸಹ್ಯಾದ್ರಿ ಕಾಲೇಜಿನಲ್ಲಿ ಈಗಲೂ ಬಡತನದಿಂದ ವ್ಯಾಸಂಗ ಮಾಡುತ್ತಿರುವ ಹಲವು ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಓದಿನ ಹರಿವು ಹೆಚ್ಚಾಗಿದೆ. ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದರೆ, ಬಡತನದ ಕಾರಣ ಹಿಂದೆ ಸರಿಯುತ್ತಿದ್ದಾರೆ. ಸಂಘ ಇಂತಹ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಅವರ ಸಂಶೋಧನೆಗೆ ಸಹಾಯ ಮಾಡಬೇಕು ಎಂದರು.

ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ನೆನಪು ಮಾಡಿಕೊಳ್ಳುವುದೇ ಒಂದು ಸುಂದರ ಅನುಭವ. ಮನುಷ್ಯ ಜೀವನದ ಕಾಲಘಟ್ಟಗಳನ್ನು ಮರು ನೆನಪು ಮಾಡಿಕೊಳ್ಳುವುದೂ ಒಂದು ಸಂಭ್ರಮ. ಸಹ್ಯಾದ್ರಿ ಕಾಲೇಜಿನಲ್ಲಿದ್ದ ‘ಆ ದಿನಗಳ’ ನೆನಪಿನಲ್ಲಿ ಅಸಂಖ್ಯಾತ ವಿಷಯಗಳು, ಕಾರಿಡಾರ್‌ನಲ್ಲಿ ಓಡಾಡಿದ ಸಮಯ, ಚಳವಳಿಗಳಲ್ಲಿ ಭಾಗವಹಿಸಿದ ದಿನಗಳು, ಆಟಗಳಲ್ಲಿ ಭಾಗವಹಿಸಿದ ನೆನಪು, ಗೆಳಯರು, ಗೆಳತಿಯರ ಜತೆ ಹರಟುತ್ತಿದ್ದ ಕ್ಷಣಗಳು, ಇವೆಲ್ಲವೂ ಇಂದು ಮನಸ್ಸಿನ ಪಟಲದ ಮೇಲೆ ಹಸಿರಾಗಿವೆ ಎಂದರು.

ಕಾಲೇಜಿನಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಅಂಥವರನ್ನು ಗುರುತಿಸಿ, ಅವರನ್ನು ಸನ್ಮಾನಿಸುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ, ದೇಶಕಟ್ಟುವ ಕೆಲಸ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ. ಸಹ್ಯಾದ್ರಿ ಕಾಲೇಜಿನ ಕೊಠಡಿಗಳಲ್ಲೇ ದೇಶ ಭಕ್ತಿಯ ಪಾಠ ದೊರೆಯುತ್ತಿತ್ತು. ಕಲ್ಲುಬಂಡೆಯಂತಹ ವಿದ್ಯಾರ್ಥಿಗಳನ್ನು ಶಿಲಾಮೂರ್ತಿಗಳನ್ನಾಗಿ ಮಾಡಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಸಹ್ಯಾದ್ರಿ ಕಾಲೇಜು ಜ್ಞಾನದ ದೇಗುಲ. ಹಾಗಾಗಿಯೇ ದೊಡ್ಡ ಕಾಲೇಜಿನಲ್ಲಿ ಓದಿಸುವ ಶಕ್ತಿ ಇದ್ದರೂ ಮಕ್ಕಳನ್ನು ಇದೇ ಕಾಲೇಜಿನಲ್ಲಿ ಓದಿಸುತ್ತಿರುವೆ. ಈ ಕಾಲೇಜು ನಮ್ಮಂತಹ ಸಾವಿರಾರು ಜನರಿಗೆ ಉದ್ಯೋಗ, ಹೆಸರು, ಜ್ಞಾನ ನೀಡಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಪ್ರಾಂಶುಪಾಲರು ಕಾಲೇಜು ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಲಹೆ ನೀಡಬೇಕು. ಜ್ಞಾನ, ಅನುಭವ ಬಳಕೆ ಮಾಡಿಕೊಳ್ಳಲು ವಿವಿ ಚಿಂತನೆ ನಡೆಸಿದೆ ಎಂದರು.

ಹಿರಿಯ ವಿದ್ಯಾರ್ಥಿಗಳಾದ ಪ್ರೊ.ಹೂವಯ್ಯಗೌಡ, ಪ್ರೊ.ಬಿ.ಎಂ.ರುದ್ರಪ್ಪ,ಪ್ರೊ.ಶಕುಂತಲಾ, ಪ್ರೊ.ಗಾಯತ್ರಿದೇವಿ ಸಜ್ಜನ್, ಲೀಲಾ ಬೆನ್ನೂರು, ಪ್ರೊ.ಸಿದ್ಧರಾಮಪ್ಪ, ಗೌಡರ ಶಿವಣ್ಣನವರ್, ಸಿ.ಎಂ.ನಾಗರಾಜ್, ವಿಶ್ವನಾಥಯ್ಯ, ಜಯದೇವಪ್ಪ, ರಾಜಪ್ಪ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕುಲಸಚಿವೆ ಜಿ.ಅನುರಾಧಾ, ಪ್ರಾಂಶುಪಾಲರಾದ ಪ್ರೊ.ಎಚ್.ಎಂ.ವಾಗ್ದೇವಿ, ಪ್ರೊ.ಕೆ.ಬಿ.ಧನಂಜಯ, ಪ್ರೊ.ಎಂ.ಕೆ.ವೀಣಾ, ಸಂಘದ ಪ್ರಮುಖರಾದ ಉಮೇಶ್ ಶಾಸ್ತ್ರಿ, ಪರಿಸರ ನಾಗರಾಜ, ಕೆ.ಎಲ್‌.ನಾಯ್ಕ್‌, ನಾಗರಾಜ್ ನೇರಿಗೆ, ಜೇಸುದಾಸ್, ರವಿಕುಮಾರ್, ರೂಪಾ, ಪ್ರೊ.ಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT