ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ವಲಸೆ ಸಂತ್ರಸ್ತರಿಗಿಲ್ಲ ಶಾಲೆ, ರಸ್ತೆ ‘ಭಾಗ್ಯ’

ಸೌಲಭ್ಯ ವಂಚಿತ ಕಿರುಗುಣಸೆ, ದಡ್ಡಿಸರ, ಕೆಳಗಿನ ಕಿರುಗುಣಸೆ ಗ್ರಾಮಗಳು
Last Updated 20 ಏಪ್ರಿಲ್ 2022, 5:11 IST
ಅಕ್ಷರ ಗಾತ್ರ

ಸೊರಬ: ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಇಲ್ಲದೇ, ಕಾಡುಮೇಡುಗಳಲ್ಲಿ ಬದುಕು ಕಟ್ಟಿಕೊಂಡಿರುವ ತಾಲ್ಲೂಕಿನ ಕುಗ್ರಾಮಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಕೇಳುವ ಅಭಿವೃದ್ಧಿ ಮಾತುಗಳು ಮತ್ತೆ ನೆನಪಾಗುವುದೇ ಇಲ್ಲ ಎಂಬುದು ಬಹುತೇಕ ಕುಗ್ರಾಮಗಳ ಜನರ ಆರೋಪ.

‘ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಲೇ ನಮ್ಮೂರಿನಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಸಮೀಪದ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ನಮ್ಮ ಗ್ರಾಮದಲ್ಲಿ ಏಕೆ ಆಗಿಲ್ಲ ಎನ್ನುವ ಹತಾಶೆ, ಆನಾಥ ಪ್ರಜ್ಞೆ ನಮ್ಮನ್ನು ಸದಾ ಕಾಡುತ್ತದೆ’..

ಇದು ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಮೇಲಿನ ಕಿರುಗುಣಸೆ ಗ್ರಾಮದ ರೈತ ವೀರಭದ್ರಪ್ಪ ಅವರ ನೋವಿನ ಮಾತು.

ತಾಲ್ಲೂಕಿನ ಅಚ್ಚ ಮಲೆನಾಡಿನ ಪ್ರದೇಶವಾದ ಹೊಸಬಾಳೆ, ನಿಸರಾಣಿ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಮೇಲಿನ ಕಿರುಗುಣಸೆ, ದಡ್ಡಿಸರ ಹಾಗೂ ಕೆಳಗಿನ ಕಿರುಗುಣಸೆ ಗ್ರಾಮಕ್ಕೆ ಜನರು ವಲಸೆ ಬಂದು ಬರೋಬ್ಬರಿ 60 ವರ್ಷಗಳು ಗತಿಸಿವೆ. ಆರಂಭದಲ್ಲಿ ಒಂದೇ ಮನೆತನಕ್ಕೆ ಸೇರಿದ 10 ಕುಟುಂಬಗಳು ದಡ್ಡಿಸರ, ಮೇಲಿನ ಕಿರುಗುಣಸೆ ವಲಸೆ ಬಂದರೆ, ಕೆಳಗಿನ ಕಿರುಗುಣಸೆಯಲ್ಲಿ ನಿಸರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇರೆ ಬೇರೆ ಗ್ರಾಮಗಳಿಂದ ವಲಸೆ ಬಂದ ಜನರು ಇಲ್ಲಿ ವಾಸವಾಗಿದ್ದಾರೆ. ಎರಡು ದಶಕಗಳ ನಂತರ ವಿದ್ಯುತ್ ಸಂಪರ್ಕ ಕಂಡ ಗ್ರಾಮಗಳು ಇವು.

6 ದಶಕ ಕಳೆದರೂ ಗ್ರಾಮಗಳ ರಸ್ತೆ ಡಾಂಬರೀಕರಣ ಕಂಡಿಲ್ಲ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಹೊಲದಲ್ಲಿನ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ಈ ಭಾಗದ ರೈತರಿಗೆ ದೊಡ್ಡ ಸವಾಲಾಗಿದೆ.

ಕಿರುಗುಣಸೆ, ದಡ್ಡಿಸರ ಹಾಗೂ ಕೆಳಗಿನ ಕಿರುಗುಣಸೆ ಗ್ರಾಮದ ಜನರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಹಂದಿ, ಕಾಡುಕೋಣ ಹಾಗೂ ಮಂಗಳ ದಾಳಿಯಿಂದ ರಕ್ಷಣೆ ಮಾಡಿಕೊಳ್ಳಲು ಅನಿವಾರ್ಯವಾಗಿ ತಮ್ಮ ಜಮೀನಿನ ಅಚ್ಚುಕಟ್ಟು ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ.

500 ಮೀ. ಸುತ್ತಳತೆಯಲ್ಲಿರುವ ಈ ಗ್ರಾಮಗಳನ್ನು ತ್ರಿವಳಿ ಗ್ರಾಮಗಳು ಎಂದು ಕರೆಯಲಾಗುತ್ತದೆ. ಮೇಲಿನ ಕಿರುಗುಣಸೆಯಲ್ಲಿ 15, ದಡ್ಡಿಸರದಲ್ಲಿ 10 ಹಾಗೂ ಕೆಳಗಿನ ಕಿರುಗುಣಸೆಯಲ್ಲಿ 25 ಕುಟುಂಬಗಳು ವಾಸವಾಗಿವೆ. ಒಟ್ಟು 50 ಮನೆಗಳಿಂದ 200 ಜನಸಂಖ್ಯೆಯಿದೆ.

ಮಾರಿಜಾತ್ರೆ ಹಾಗೂ ಹಬ್ಬ, ಉತ್ಸವಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಒಗ್ಗಟ್ಟು ಹೊಂದಿರುವುದು ಈ ಗ್ರಾಮಗಳ ಹೆಗ್ಗಳಿಕೆ.

ಶಾಲೆಯಿಂದ ವಂಚಿತವಾದ ಗ್ರಾಮ: ಕಿರುಗುಣಸೆ, ದಡ್ಡಿಸರ ಗ್ರಾಮಗಳು ಶಾಲೆಗಳಿಂದ ವಂಚಿತವಾಗಿವೆ. ದಶಕಗಳ ನಂತರ ಮೂರು ಗ್ರಾಮಗಳ ಮಕ್ಕಳ ಕಲಿಕೆಗಾಗಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತಾದರೂ ಮಕ್ಕಳ ಸಂಖ್ಯೆ ಕ್ಷೀಣಿಸಿದ ಪರಿಣಾಮ ಶಿಕ್ಷಣ ಇಲಾಖೆ ಶಾಲೆ ಮುಚ್ಚಿಸಿ ಕೈತೊಳೆದುಕೊಂಡಿದೆ.

ಇದರಿಂದ ಗ್ರಾಮದ ಮಕ್ಕಳು ಪ್ರಾಥಮಿಕ ಶಾಲೆಗೆ ಜೇಡಗೇರಿ, ಚೀಲನೂರು ಗ್ರಾಮಕ್ಕೆ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪಡೆಯಲು ಹೊಸಬಾಳೆ ಹಾಗೂ ನಿಸರಾಣಿ ಗ್ರಾಮಕ್ಕೆ ಹೋಗಬೇಕು. ರಸ್ತೆ ಸರಿ ಇಲ್ಲದ ಕಾರಣ ಮಳೆಗಾಲದಲ್ಲಿ ಹರಸಾಹಸಪಟ್ಟು ಕೆಸರಿನಲ್ಲಿಯೇ ಹತ್ತಾರು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಬೇಕಾ ಗುತ್ತದೆ. ಮುಖ್ಯರಸ್ತೆಗೆ ಸಂಪರ್ಕವಿಲ್ಲದ ಕಾರಣ ಕಾಡು, ಮೇಡುಗಳಲ್ಲಿ ಸೈಕಲ್ ಹೊಡೆದುಕೊಂಡು ಹೋಗುವ ಅನಿವಾರ್ಯ ಇಲ್ಲಿನ ಮಕ್ಕಳದ್ದು.

ಗುಂಪಿನಲ್ಲಿ ಹೋಗುವ ಮಕ್ಕಳು ಗೆಳೆಯರಲ್ಲಿ ಒಬ್ಬ ಶಾಲೆ ತಪ್ಪಿಸಿದರೆ ಇಡೀ ಗ್ರಾಮದ ಮಕ್ಕಳೆ ಶಾಲೆಗೆ ಹೋಗದ ಪರಿಸ್ಥಿತಿ ಇದೆ.

‘ಹೊರ ಜಗತ್ತಿನಲ್ಲಿ ಅಭಿವೃದ್ಧಿ ಮಾತು ಕೇಳುತ್ತಿದ್ದರೂ ನಮ್ಮ ಮಕ್ಕಳ ಶೈಕ್ಷಣಿಕ ಕಲಿಕೆಗೆ ಪೂರಕ ವಾತಾವರಣವಿಲ್ಲ ಎನ್ನುವ ನೋವು ಸಹಿಸಲು ಆಗದು. ಯಾರ ಹತ್ತಿರ ಹೇಳಿಕೊಂಡರೂ ಬಗೆಹರಿಯಲಾಗದ ಸಮಸ್ಯೆ. ಇಲ್ಲಿಯವರೆಗೂ ತಾಲ್ಲೂಕಿನ ನಕಾಶೆಯಲ್ಲಿರುವ ಇಂತಹದ್ದೊಂದು ಗ್ರಾಮಕ್ಕೆ ಶಾಲೆಯ ಅವಶ್ಯಕತೆ ಇದೆ ಎನ್ನುವುದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರೆತುಬಿಟ್ಟಿದ್ದಾರೆ’ ಎಂದು ದೂರುತ್ತಾರೆ ಗ್ರಾಮದ ಉಮೇಶ್.

ಅಂಗನವಾಡಿ, ಸಮುದಾಯ ಭವನ ಭಾಗ್ಯವೂ ಇಲ್ಲ: ಗ್ರಾಮ ದೇವತೆಗಳ ಆಚರಣೆ ಹಾಗೂ ಹಬ್ಬಗಳನ್ನು ಒಟ್ಟಾಗಿ ಆಚರಿಸುವುದರಿಂದ ಗ್ರಾಮಗಳಲ್ಲಿನ ಅನನ್ಯತೆ ಗುರುತಿಸಬಹುದು.

ಅಂಗನವಾಡಿ, ಸಮುದಾಯ ಭವನ ಹಾಗೂ ರಂಗಮಂದಿರ, ಶಾಲೆ ಸೇರಿ ಯಾವ ಸೌಲಭ್ಯಗಳು ಇಲ್ಲದ ಕಾರಣ ಈ ಗ್ರಾಮಗಳು ಹೊರಜಗತ್ತಿಗೆ ತೆಗೆದುಕೊಳ್ಳಲು ಪರದಾಡುತ್ತಿವೆ.

ಅಪರೂಪಕ್ಕೆ ಅಜ್ಜ, ಅಜ್ಜಿಯರನ್ನು ಹೊಂದಿರುವ ಮನೆಗಳೇ ಈ ಗ್ರಾಮಗಳ ಮಕ್ಕಳಿಗೆ ಅಂಗನವಾಡಿಗಳು. ಅವರು ಹೇಳಿಕೊಡುವ ಕತೆಗಳು ಈ ಮಕ್ಕಳಿಗೆ ಪಾಠ. ರಸ್ತೆ, ಅಂಗನವಾಡಿ ಸಮುದಾಯ ಭವನದ ಮೂಲಕ ಯುವ ಪೀಳಿಗೆಯ ಹಿತವನ್ನು ಕಾಯುವ ಇಚ್ಛಾಶಕ್ತಿಯನ್ನು ಸಂಬಂಧಪಟ್ಟವರು ತೋರಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT