ಗುರುವಾರ , ಮಾರ್ಚ್ 30, 2023
32 °C

ಎಲೆಚುಕ್ಕಿ ರೋಗ ತಹಬಂದಿಗೆ ವಿಜ್ಞಾನಿಗಳಿಂದ ಪರಿಹಾರೋಪಾಯ: ಎಚ್.ಹಾಲಪ್ಪ ಹರತಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅಡಿಕೆ ತೋಟಕ್ಕೆ ಬಂದಿರುವ ಎಲೆಚುಕ್ಕಿ ರೋಗವನ್ನು ತಹಬಂದಿಗೆ ತರುವ ಸಂಬಂಧ ವಿಜ್ಞಾನಿಗಳು ಸೂಕ್ತ ಪರಿಹಾರೋಪಾಯ ಸೂಚಿಸಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಮಂಗಳವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.

ಐಸಿಎಆರ್ ಹಾಗೂ ಕಾಸರಗೋಡಿನ ಸಿಪಿಸಿಆರ್‌ಐ ತಂಡದ ವಿಜ್ಞಾನಿಗಳು ಎಲೆಚುಕ್ಕಿ ರೋಗಕ್ಕೆ ಕಾರಣವನ್ನು ಕಂಡುಹಿಡಿಯುವ ಜೊತೆಗೆ ರೋಗ ನಿಯಂತ್ರಣಕ್ಕೆ ಪರಿಹಾರದ ದಾರಿಯನ್ನು ಕೂಡ ತೋರಿಸಿದ್ದಾರೆ ಎಂದರು.

ಎಲೆಚುಕ್ಕಿ ರೋಗದಿಂದ ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲು ಸಾಗರ ತಾಲ್ಲೂಕಿಗೆ ₹ 5.25 ಲಕ್ಷ, ಹೊಸನಗರ ತಾಲ್ಲೂಕಿಗೆ ₹. 25 ಲಕ್ಷ ಬಿಡುಗಡೆಯಾಗಿದೆ. ನಷ್ಟ ಅನುಭವಿಸಿರುವ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆ ಆಗಲಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಿರಣ್ ಕುಮಾರ್, ‘ಸಾಗರ ತಾಲ್ಲೂಕಿನ ಸುಮಾರು 800 ಹೆಕ್ಟೇರ್ ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಶಿವಮೊಗ್ಗ ಕೃಷಿ ವಿವಿ, ಕಾಸರಗೋಡಿನ ವಿಜ್ಞಾನಿಗಳ ತಂಡ ಇಲ್ಲಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ’ ಎಂದರು.

ಎರಡು ಬಾರಿ ತೋಟಕ್ಕೆ ಔಷಧ ಸಿಂಪಡಿಸಿದರೆ ಎಲೆಚುಕ್ಕಿ ರೋಗ ಹತೋಟಿಗೆ ಬರುತ್ತದೆ. ಔಷಧ ಸಿಂಪಡಣೆಗೆ ತೋಟಗಾರಿಕೆ ಇಲಾಖೆಯಿಂದ ಹೆಕ್ಟೇರ್‌ಗೆ ₹ 4,800 ನೀಡಲಾಗುತ್ತಿದೆ. ಬೆಳೆಗಾರರು ತಮ್ಮ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ಪ್ರಮುಖರಾದ ಟಿ.ಡಿ. ಮೇಘರಾಜ್, ಮಧುರಾ ಶಿವಾನಂದ್, ರವೀಂದ್ರ ಬಿ.ಟಿ., ತೋಟಗಾರಿಕೆ ಇಲಾಖೆ ಅಧಿಕಾರಿ ಉಲ್ಲಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು