ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗರ್ತಿ: ಕುಶಲಕರ್ಮಿಗಳ ಸ್ವಾವಲಂಬಿ ಬದುಕು

ನೆರವಿನ ನಿರೀಕ್ಷೆಯಲ್ಲಿ ಸಾಗರ ತಾಲ್ಲೂಕಿನ ತ್ಯಾಗರ್ತಿಯ 30 ಕುಟುಂಬಗಳು
Last Updated 13 ಜುಲೈ 2021, 6:48 IST
ಅಕ್ಷರ ಗಾತ್ರ

ತ್ಯಾಗರ್ತಿ: ಲಾಕ್‍ಡೌನ್ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಂಡ ತ್ಯಾಗರ್ತಿಯ 30 ಕುಟುಂಬಗಳು ಬಿದಿರಿನ ವಸ್ತುಗಳನ್ನು ತಯಾರಿಸಿ ಆದಾಯ ಗಳಿಸಿ ಉಳಿದವರಿಗೆ ಮಾದರಿಯಾಗಿವೆ.

ಸಾಗರ ತಾಲ್ಲೂಕಿನ ತ್ಯಾಗರ್ತಿಯ 30 ಕುಟುಂಬಗಳು ಬಿದಿರಿನ ಕೆಲಸ ನಿರ್ವಹಿಸುತ್ತಿದ್ದು, ಈ ಮುಂಚೆ ಅರಣ್ಯಗಳಿಂದ ಬಿದಿರು ತರುತ್ತಿದ್ದರು. ಆದರೆ, ಇಂದು ಅರಣ್ಯಗಳಲ್ಲಿ ಬಿದಿರು ನಾಶವಾಗಿದ್ದು, ಹಳ್ಳಿಗಳಲ್ಲಿ ಬೆಳೆದಿರುವ ಪನ್ನಂಗಿ ಹಾಗೂ ಶಮೆ ಬಿದಿರಿಗೆ
₹ 140ರಿಂದ ₹ 150 ಕೊಟ್ಟು ಖರೀದಿಸುತ್ತಿದ್ದಾರೆ.

ಹಸಿ ಬಿದಿರನ್ನು ತಂದು ಹದಗೊಳಿಸಿ ಸೀಳಿ ತಮಗೆ ಬೇಕಾದ ರೀತಿಯಲ್ಲಿ ಪಟ್ಟಿ ಮತ್ತು ಕಡ್ಡಿಗಳನ್ನು ಸಿದ್ಧಪಡಿಸಿಕೊಂಡು ಮೊರ, ಬುಟ್ಟಿ, ತೊಟ್ಟಿಲು, ಏಡಿಕುಣಿ, ಮೀನು ಹಿಡಿಯುವ ಖೂಣಿ, ಖಣಜ, ಹೂಬುಟ್ಟಿ, ತರಕಾರಿ ಬುಟ್ಟಿ, ಕೋಳಿಬುಟ್ಟಿ, ಬೀಸಣಿಕೆ, ಭೂಮಿಹುಣ್ಣಿಮೆ ಬುಟ್ಟಿ, ಜಾನುವಾರುಗಳಿಗೆ ಹಾಕುವ ಬಾಯೊಡಲು, ಮದುವೆ ಕಾರ್ಯಗಳಿಗೆ ಉಪಯೋಗಿಸುವ ಮೆಟ್ಟಿಗೆ ಚಿಬ್ಬಲು, ಅಡಿಕೆ ಒಣಗಿಸುವ ತಟ್ಟಿಗಳನ್ನು ತಯಾರಿಸುತ್ತಾರೆ. ಅದರಿಂದಬಂದ ಆದಾಯವೇ ಜೀವನಕ್ಕೆಆಧಾರ.

ಜಮೀನು, ತೋಟ ಇತ್ಯಾದಿ ಯಾವುದೇ ಆದಾಯ ಮೂಲ ಹೊಂದಿಲ್ಲದ ಇವರು ಪೂರ್ವಜರಿಂದ ಅತಿ ವಿಶಿಷ್ಟವಾದ ಬಿದಿರಿನಿಂದ ಕಸೂತಿ ವಸ್ತುಗಳನ್ನು ಸಿದ್ಧಪಡಿಸುವ ಕಲೆ ಕಲಿತಿದ್ದು, ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ಶ್ರಮ ಪಟ್ಟು ಕಸೂತಿ ಕೆಲಸ ಮಾಡಿ ಎರಡು ಕೂಣಿ ಸಿದ್ಧಪಡಿಸಿ ಚಿಕ್ಕ ಮತ್ತು ದೊಡ್ಡ ಗಾತ್ರದ ಆಧಾರದ ಮೇಲೆ ಒಂದು ಕೂಣಿಗೆ ₹ 600ರಿಂದ₹ 800ರವರೆಗೂ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ.

‘ಸರ್ಕಾರದಿಂದ ನಮ್ಮ ಕೆಲಸಕ್ಕೆ ಸಮರ್ಪಕ ಸಹಕಾರ ದೊರೆಯದಿದ್ದರೂ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದೇವೆ. ನಮ್ಮ ಕುಟುಂಬದ ಎಲ್ಲರೂ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ತಯಾರಿಸಿದ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬೇಡಿಕೆ ಕಡಿಮೆಯಾದಾಗ ಹಳ್ಳಿಗಳಿಗೆ ಹೋಗಿ ಮಾರುತ್ತೇವೆ’ ಎನ್ನುವರು ಕರಕುಶಲಕರ್ಮಿ ಪರಶುರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT