ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡವಿ | ವಾರದಿಂದ ಬಾನಾಡಿಗಳ ಸರಣಿ ಸಾವು

Published : 25 ಅಕ್ಟೋಬರ್ 2023, 5:31 IST
Last Updated : 25 ಅಕ್ಟೋಬರ್ 2023, 5:31 IST
ಫಾಲೋ ಮಾಡಿ
Comments

ಶಿವಮೊಗ್ಗ: ಮಲೆನಾಡಿನ ಬಾನಾಡಿಗಳ ನೆಲೆ ಸೊರಬ ತಾಲ್ಲೂಕಿನ ಗುಡವಿಯಲ್ಲಿ ಕಳೆದೊಂದು ವಾರದಿಂದ ಪಕ್ಷಿಗಳು ಸರಣಿಯಾಗಿ ಸಾಯುತ್ತಿವೆ. ಇದು ಪಕ್ಷಿ ಪ್ರಿಯರನ್ನು ಕಂಗೆಡಿಸಿದೆ. ಮಾಹಿತಿ ತಿಳಿದ ಶಿವಮೊಗ್ಗ ಅರಣ್ಯ ಸಂಚಾರಿ ಪೊಲೀಸ್ ದಳದ (ಸಿಐಡಿ) ಅಧಿಕಾರಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಗುಡವಿ ಪಕ್ಷಿ ಧಾಮದ ಕೆರೆಯ ಪರಿಸರದಲ್ಲಿ ಯುರೇಶಿಯನ್ ಸ್ಪೂನ್‌ಬಿಲ್, ಬ್ಲ್ಯಾಕ್‌ ಐಬಿಸ್ ಹಾಗೂ ಬ್ಲ್ಯಾಕ್‌ ಕ್ರೌನ್ಡ್ ನೈಟ್ ಹೆರಾನ್ ಪಕ್ಷಿಗಳು ಹೆಚ್ಚಾಗಿ ಸಾವಿಗೀಡಾಗಿವೆ. 50ಕ್ಕೂ ಹೆಚ್ಚು ಪಕ್ಷಿಗಳ ಕಳೇಬರ ಕಂಡುಬಂದಿದ್ದು, ದುರ್ವಾಸನೆ ಹರಡಿದೆ.

ಕಲುಷಿತ ನೀರು?

’ಗುಡವಿ ಕೆರೆಯ ನೀರು ಕೀಟನಾಶಕ, ಕಳೆನಾಶಕದಂತಹ ಕೃಷಿ ತ್ಯಾಜ್ಯ ಹರಿದುಬಂದು ಕಲುಷಿತಗೊಂಡಿರಬಹುದು. ಈ ವಿಷಪೂರಿತ ನೀರು ಸೇವಿಸಿ ಪಕ್ಷಿಗಳು ಸಾವನ್ನಪ್ಪಿರಬಹುದು. ಇಲ್ಲವೇ ಯಾವುದಾದರೂ ಸಾಂಕ್ರಾಮಿಕ ರೋಗವೂ ಪಕ್ಷಿಗಳನ್ನು ಬಾಧಿಸಿರಬಹುದು ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಶಂಕಿಸಿದ್ದೇವೆ. ಪರೀಕ್ಷೆಯಿಂದ ವಾಸ್ತವ ಸಂಗತಿ ತಿಳಿಯಲಿದೆ. ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದ್ದೆವೆ‘ ಎಂದು ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ’ಪ್ರಜಾವಾಣಿ‘ಗೆ ತಿಳಿಸಿದರು.

ಗುಡವಿಯಲ್ಲಿ ಪಕ್ಷಿಗಳ ಸಾವಿನ ನಿಖರ ಕಾರಣ ಗೊತ್ತಾಗಿಲ್ಲ. ವನ್ಯಜೀವಿ ವಿಭಾಗದ ವೈದ್ಯರಿಗೆ ಮಾಹಿತಿ ನೀಡಿದ್ದೇವೆ. ಪರೀಕ್ಷೆ ಮಾಡಿ ನಿಖರ ಕಾರಣ ತಿಳಿದು ಸಮಸ್ಯೆ ಪರಿಹರಿಸಲು ಕೋರಿದ್ದೇವೆ.
ವಿನಾಯಕ್‌, ಪಿಎಸ್‌ಐ, ಅರಣ್ಯ ಸಂಚಾರಿ ಪೊಲೀಸ್ ದಳ

’ನಮ್ಮ ಪರಿಸರದಲ್ಲಿ ಇವೆಲ್ಲವೂ ಸರಪಣಿ. ಒಂದಕ್ಕೆ ಹಾನಿಯಾದರೂ ಇಡೀ ಸರಪಣಿಗೆ ಧಕ್ಕೆಯಾಗಲಿದೆ‘ ಎಂದು ಅವರು ವಿವರಿಸಿದರು.

ಮಂದಗದ್ದೆ ಪಕ್ಷಿ ಧಾಮದಲ್ಲಿ ಬಾನಾಡಿಗಳು ತುಂಗೆಯ ಆರ್ಭಟದಿಂದ ನೆಲೆ ಕಳೆದುಕೊಂಡಿರುವ ಕಾರಣ ಗುಡವಿ ಮಾತ್ರ ನಿಸರ್ಗದತ್ತವಾಗಿ ಪಕ್ಷಿಗಳಿಗೆ ಈಗ ಸುರಕ್ಷಿತ ತಾಣವಾಗಿದೆ. 0.74 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಗುಡವಿ ಮಲೆನಾಡಿನ ಪ್ರಮುಖ ಪ್ರವಾಸಿ ತಾಣವೂ ಹೌದು.

‘ಅಪರೂಪದ ಪ್ರಭೇದಗಳು ದೇಶ–ವಿದೇಶದ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಸೆಪ್ಟೆಂಬರ್‌ನಿಂದ ಜನವರಿವರೆಗೆ ಗುಡವಿಗೆ ವಲಸೆ ಬರುತ್ತವೆ. ಪಕ್ಷಿ ವೀಕ್ಷಕರಿಗೆ ಕಣ್ಣಿಗೆ ಹಬ್ಬ ತರುವ ಈ ಹೊತ್ತಿನಲ್ಲಿ ಸರಣಿ ಸಾವಿನ ವಾಸ್ತವ ಸ್ಥಿತಿ ಅರಿಯಬೇಕಿದೆ. ಪಕ್ಷಿಧಾಮವು ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಸಾವಗೀಡಾದ ಪಕ್ಷಿಗಳ ಕಳೇಬರದ ಪೋಸ್ಟ್‌ಮಾರ್ಟಂ ಮಾಡಿದಲ್ಲಿ, ಇಲ್ಲವೇ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಲಿ. ಆ ನಿಟ್ಟಿನಲ್ಲಿ ಮುಂದಾಗಲಿ‘ ಎಂದು ಶಿವಮೊಗ್ಗದ ಪಕ್ಷಿ ವೀಕ್ಷಕ ಎನ್‌.ಎಂ. ಹೃಷಿಕೇಶ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT