ಬುಧವಾರ, ಮಾರ್ಚ್ 29, 2023
31 °C

ಶರಾವತಿ ಹಿನ್ನೀರಲ್ಲಿ ಹಲವು ಹೊಸ ಸೇತುವೆಗಳು: ಮುಳುಗಡೆ ಜನರ ಸಂಕಷ್ಟ ದೂರ

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಲಿಂಗನಮಕ್ಕಿ ಅಣೆಕಟ್ಟೆಯಿಂದ ಮುಳುಗಡೆಯಾದ ಶರಾವತಿ ಹಿನ್ನೀರಿನ ಪ್ರದೇಶಗಳಿಗೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಬಸವಳಿದಿದ್ದ ಕರೂರು–ಭಾರಂಗಿ ಹೋಬಳಿಯ ಜನರ ದಶಕಗಳ ಹೋರಾಟಕ್ಕೆ ಸಿಕ್ಕ ಫಲ ತುಮರಿ ಸೇತುವೆ.

ಸಾಗರ ನಗರದ ಶಿವಪ್ಪನಾಯಕ ವೃತ್ತದಿಂದ ಸಿಗಂದೂರು ಸಮೀಪದ ಮರಕುಟುಕದವರೆಗೆ 78 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಮಾರ್ಗ ಮಧ್ಯದಲ್ಲಿ ಬರುವ ಅಂಬಾರಗೋಡ್ಲು–ಕಳಸವಳ್ಳಿ ಮಧ್ಯೆ ₹ 423.15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಆರಂಭದಲ್ಲಿ ರಾಜ್ಯ ಸರ್ಕಾರ ಇಲ್ಲಿ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಈ ಯೋಜನೆ ಲಾಭದಾಯಕವಲ್ಲ ಎಂದು ಯೋಜನೆ ಕೈಬಿಟ್ಟಿತ್ತು. ನಂತರ ಕೇಂದ್ರ ಸರ್ಕಾರದ ಅನುದಾನದಲ್ಲಿ ಸೇತುವೆ ಕಾರ್ಯ ಭರದಿಂದ ಸಾಗಿದೆ.

2018ನೇ ಸಾಲಿನ ಫೆ.19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2019ರ ಡಿಸೆಂಬರ್‌ನಿಂದ ಕಾಮಗಾರಿ ಆರಂಭಗೊಂಡಿದೆ. 2.5 ಕಿ.ಮೀ. ಉದ್ದ, 16 ಮೀಟರ್‌ ಅಗಲದ 30ರಿಂದ 55 ಮೀಟರ್‌ ಎತ್ತರದ, 17 ಪಿಲ್ಲರ್‌ ಒಳಗೊಂಡ ಕೇಬಲ್ ತಂತ್ರಜ್ಞಾನ ಆಧಾರಿತ ಸೇತುವೆ ಕಾರ್ಯ ಶೇ 35ರಷ್ಟು ಪೂರ್ಣಗೊಂಡಿದೆ. 2023ರ ಮೇ ವೇಳೆಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನುತ್ತಾರೆ ಕಾಮಗಾರಿ ಕಂಪನಿಯ ಎಂಜಿನಿಯರ್‌ಗಳು.
ಪ್ರಸಿದ್ಧ ಧಾರ್ಮಿಕ ಸ್ಥಳ ಸಿಗಂದೂರು ಈ ಮಾರ್ಗದಲ್ಲಿ ಬರುತ್ತದೆ. ಸೇತುವೆ ಕಾಮಗಾರಿ ಮುಗಿದ ನಂತರ ಈ ಭಾಗದ ಪ್ರವಾಸೋದ್ಯಮದ ಚಿತ್ರಣ ಬದಲಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಸ್ವರೂಪ ಬದಲಾಗುವ ಭರವಸೆ ಮೂಡಿದೆ.

ಈ ಮಧ್ಯೆ ಸಾಗರ–ಹೊಸನಗರಕ್ಕೆ ಸಂಪರ್ಕ ಕಲ್ಪಿಸುವ ಪಟಗುಪ್ಪ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಸಮೀಪದಲ್ಲೇ ಹಸಿರುಮಕ್ಕಿಯಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಸೇತುವೆ ಸಂಚಾರಕ್ಕೆ ಮುಕ್ತವಾದರೆ ಶಿವಮೊಗ್ಗ, ತೀರ್ಥಹಳ್ಳಿ ಭಾಗದ ಜನರು ಸಿಗಂದೂರು ಕ್ಷೇತ್ರಕ್ಕೆ ಕಡಿಮೆ ಅವಧಿಯಲ್ಲಿ ತಲುಪಲು ಅವಕಾಶವಾಗುತ್ತದೆ.

ಇದುವರೆಗೂ ತಾಲ್ಲೂಕು ಕೇಂದ್ರಕ್ಕೆ ಬರಲು ಲಾಂಚ್ ಸೇವೆಯನ್ನೇ ನಂಬಿಕೊಂಡಿರುವ ಕರೂರು–ಭಾರಂಗಿ ಹೋಬಳಿಯ ಜನರು ಇನ್ನು ಮುಂದೆ ಸೇತುವೆ ಬಳಸಿಕೊಂಡು ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತದೆ. ಹೀಗೆ ಮೂರು ಸೇತುವೆಗಳು ಮಲೆನಾಡು–ಕರಾವಳಿ ಪ್ರದೇಶಕ್ಕೆ ಹತ್ತಿರದ ಸಂಪರ್ಕ ಕಲ್ಪಿಸುವ ಮೂಲಕ ಅಭ್ಯುದಯಕ್ಕೆ ಹೊಸ ಭಾಷ್ಯ ಬರೆಯುವ ಭರವಸೆ ಮೂಡಿಸಿವೆ.

ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ಮಧ್ಯೆ ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್‌ ಸೇತುವೆ ಕಾಮಗಾರಿಯ ವೇಗ ಮಳೆಗಾಲದಲ್ಲಿ ಹಿನ್ನೀರಿನ ಸತತ ಹೆಚ್ಚಳದ ಕಾರಣ ತಗ್ಗಿತ್ತು. 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ.

ಕೋಟ್ಸ್‌...

ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ತುಂಗಾನದಿ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೇರೆವೇರಿಸಿ ವರ್ಷ ಕಳೆದರೂ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಕೂಡಲೇ ಹೊಸ ಸೇತುವೆ ನಿರ್ಮಾಣ ಮಾಡಬೇಕು. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.

ಉಮೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹೊಳೆಹೊನ್ನೂರು

ಮುಳುಗಡೆ ಹಿನ್ನೀರು ತಾಲ್ಲೂಕಿನ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿದೆ. ಈ ಶಾಪ ನಿವಾರಣೆಗೆ ಸರ್ಕಾರ ಹೆಚ್ಚಿನ ಆಸಕ್ತಿ ತಾಳಬೇಕು. ಶಾಸಕ ಎಚ್. ಹಾಲಪ್ಪ ಹರತಾಳು ಅವರ ವಿಶೇಷ ಪ್ರಯತ್ನದ ಫಲವಾಗಿ ಪಟಗುಪ್ಪ ಸೇತುವೆ ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕಿನ ಮುಳುಗಡೆ ಹಿನ್ನೀರಿನಲ್ಲಿ ಇನ್ನೂ ಮೂರು–ನಾಲ್ಕು ಸೇತುವೆ ಅವಶ್ಯವಿದ್ದು, ಅವುಗಳನ್ನು ತುರ್ತಾಗಿ ನಿರ್ಮಿಸಬೇಕು.

ಎಂ.ಎನ್. ಸುಧಾಕರ್, ಹೊಸನಗರ

ತುಮರಿ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಕೆಲಸ ಮತ್ತಷ್ಟು ವೇಗ ಪಡೆಯಲು ಹಿನ್ನೀರಿನಲ್ಲಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿಕೊಡುವಂತೆ ಕಾಮಗಾರಿ ನಡೆಸುತ್ತಿರುವ ಕಂಪನಿ ವಿನಂತಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸೇತುವೆ ಮಲೆನಾಡಿನ ಜನಜೀವನದ ಚಿತ್ರಣವನ್ನೇ ಬದಲಿಸಲಿದೆ.

ಎಚ್. ಹಾಲಪ್ಪ ಹರತಾಳು, ಶಾಸಕ

---------

ಸಾಗರ– ಹೊಸನಗರ ಹತ್ತಿರವಾಗಿಸಿದ ಪಟಗುಪ್ಪ ಸೇತುವೆ

-ರವಿ ನಾಗರಕೊಡಿಗೆ‍

ಹೊಸನಗರ: ‘ನಮ್ಮೂರ ಹುಡುಗನಿಗೆ ಬುದ್ಧಿ ಬರೋದೂ ಒಂದೇ; ಪಟಗುಪ್ಪ ಸೇತುವೆ ಆಗೋದು ಒಂದೇ’ ಎಂಬ ಮಾತು ಈ ಭಾಗದ ಜನರಲ್ಲಿ ಪ್ರಚಲಿತದಲ್ಲಿತ್ತು. ಸೇತುವೆ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ.

ಸಾಗರ–ಹೊಸನಗರ ತಾಲ್ಲೂಕುಗಳ ಸಂಪರ್ಕ ಬೆಸೆಯುವ ಪಟಗುಪ್ಪ ಸೇತುವೆ ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಸಂಚಾರಕ್ಕೆ ತೆರೆದಿದೆ. ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮಿಶ್ರ ಸರ್ಕಾರವಿದ್ದ ಅವಧಿಯಲ್ಲಿ (2007) ಪಟಗುಪ್ಪ ಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಲಾಯಿತು. ರಾಮಚಂದ್ರಪುರ ಮಠಕ್ಕೆ ಬಂದಿದ್ದ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೃಹತ್ ಸಂಪರ್ಕ
ಸೇತುವೆಗೆ ಅಡಿಗಲ್ಲು ಹಾಕಿದ್ದರು. ₹ 8 ಕೋಟಿ ಅನುದಾನದಲ್ಲಿ ಆರಂಭವಾದ ಸೇತುವೆ ಕಾಮಗಾರಿ ಸತತ ನನೆಗುದಿಗೆ ಬಿದ್ದಿದ್ದು, ಸುಮಾರು ₹ 56 ಕೋಟಿ ವೆಚ್ಚದಲ್ಲಿ 13 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಿದೆ.

ಅಂದು ಹೊಸನಗರ ವಿಧಾನಸಭಾ ಕೇತ್ರದ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರ ಅವಧಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ನಂತರ ಬೇಳೂರು ಗೋಪಾಲಕೃಷ್ಣ ಮತ್ತು ಕಾಗೋಡು ತಿಮ್ಮಪ್ಪ ಶಾಸಕರಾದರು. ಇದೀಗ ಮತ್ತೆ ಹರತಾಳು ಹಾಲಪ್ಪ ಶಾಸಕರಾಗಿದ್ದ ವೇಳೆಯಲ್ಲೇ ಸೇತುವೆ ಉದ್ಘಾಟನೆಗೊಂಡಿದೆ.

ನಾಲ್ಕಾರು ಜಲಾಶಯಗಳ ನಿರ್ಮಾಣದಿಂದ ಹೊಸನಗರ ತಾಲ್ಲೂಕು ಮುಳುಗಡೆ ಪ್ರದೇಶವಾಗಿದೆ. ಎತ್ತ ನೋಡಿದರೂ ಮುಳುಗಡೆ ಹಿನ್ನೀರು. ಹತ್ತಿರ ಪ್ರದೇಶಕ್ಕೆ ಸಾಗಬೇಕಾದರೂ ಹತ್ತಾರು ಮೈಲು ಸುತ್ತಬೇಕಿದೆ. ಜನರು ಸಂಪರ್ಕ ಸೇತುವೆಗಳ ಕನಸು ಕಂಡು ನಿರಾಸೆ ಹೊಂದಿದ್ದರು.

ವಟಗುಪ್ಪ ಸೇತುವೆ ಕಾರಣ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬೇಗ ತಲುಪಬಹುದಾಗಿದೆ. ಹೊಸನಗರದಿಂದ ಸಾಗರ 8 ಕಿ.ಮೀ. ಹತ್ತಿರವಾಗಿದೆ.

ಮೋಜು ಮಸ್ತಿ ತಾಣ: ಬಾರಿ ಉದ್ದದ ಪಟಗುಪ್ಪ ಸೇತುವೆ ನೋಡಲು ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಪಟ್ಟಣದ ಜನರು ಸೇತುವೆ, ಸುತ್ತಮುತ್ತಲಿನ ಹಿನ್ನೀರ ಪ್ರದೇಶ ನೋಡಿ ಸಂಭ್ರಮ ಪಡುತ್ತಾರೆ. ವಾರಂತ್ಯದ ಪಿಕ್ನಿಕ್ ಸ್ಥಳವಾಗಿ ಪಟಗುಪ್ಪ ರೂಪುಗೊಂಡಿದೆ. ಸಂಜೆ ವೇಳೆ ಇಲ್ಲಿ ಮೋಜು ಮಸ್ತಿ ನಡೆಯುತ್ತವೆ. ಯುವಕರು ಸೇತುವೆ ಅಕ್ಕಪಕ್ಕ ಫೈರ್ ಕ್ಯಾಂಪ್ ನಡೆಸುತ್ತಾರೆ. ರಾತ್ರಿ ವೇಳೆ ಕುಡಿದು ಬಾಟಲಿ ಎಸೆಯುತ್ತಾರೆ.

ಹೊಸ ಸೇತುವೆಗಳಿಗೆ ಬೇಡಿಕೆ

ಹೊಸನಗರ: ಬೆಕ್ಕೋಡಿ, ಬಿಲ್ಲುಸಾಗರ ಮತ್ತು ಹಸಿರು ಮಕ್ಕಿ ಎಂಬಲ್ಲಿ ಮುಳುಗಡೆ ಪ್ರದೇಶದಲ್ಲಿ ಹಲವು ಸೇತುವೆಗಳ ನಿರ್ಮಾಣದ ಬೇಡಿಕೆ ಇದೆ. ಜಯನಗರದಿಂದ ಕೊಲ್ಲೂರು ಮಾರ್ಗವನ್ನು ಸಂಪರ್ಕಿಸುವ ಬೆಕ್ಕೋಡಿ ಸೇತುವೆ ನಿರ್ಮಾಣಕ್ಕೆ  ನುದಾನ ಬಿಡುಗಡೆಯಾಗಿದೆ. ಮಣ್ಣು ಪರೀಕ್ಷೆ ನಡೆದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಹಸಿರುಮಕ್ಕಿ ಮತ್ತು ಬಿಲ್ಲುಸಾಗರ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ. ಇಲ್ಲಿನ ಸುತ್ತಾ  ಸೇತುವೆ ಹೊಸದಾಗಿ ನಿರ್ಮಾಣವಾಗಲಿದೆ. ಅದಕ್ಕೆ ₹ 30 ಲಕ್ಷ ಮೀಸಲಿಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಹಲವು ಸೇತುವೆಗಳು ಹಾಳುಬಿದ್ದು ಹೋಗಿವೆ. ನಗರ ಸಮೀಪದ ಚಿಕ್ಕಪೇಟೆ ಬಳಿಯ ಸೇತುವೆ ಅಗಾಗ ಕುಸಿಯುತ್ತಿದೆ. ಕೆಲವಷ್ಟು ಕಿರಿದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 5 ಸೇತುವೆಗಳ ನಿರ್ಮಾಣ ಮಾಡುತ್ತಿದೆ. ₹ 19 ಕೋಟಿ ಅನುದಾನ ಬಿಡುಗಡೆ ಮಾಡಿದೆ.

----

ತುಂಗಾ ಸೇತುವೆ ಮೇಲೆ ನಿತ್ಯವೂ ದಟ್ಟಣೆ

-ಕುಮಾರ್ ಅಗಸನಹಳ್ಳಿ

ಹೊಳೆಹೊನ್ನೂರು: ಪಟ್ಟಣದಲ್ಲಿರುವ ಭದ್ರಾ ಸೇತುವೆಗೆ ಕಾಮಗಾರಿ ಮಂಜೂರಾಗಿ ದಶಕಗಳು ಕಳೆದರೂ ಕಾಮಗಾರಿ  ಪ್ರಾರಂಭವಾಗದೇ ಪ್ರಯಾಣಿಕರು ಹಳೇ ಸೇತುವೆ ಮೇಲೆ ಸಾಗಲು ನಿತ್ಯವೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ಹಾಗೂ ಚಿತ್ರದುರ್ಗ ಮಾರ್ಗದ ಎನ್‌.ಎಚ್‌. 13ರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಲವು ದಶಕಗಳ ಹಿಂದೆ ನಿರ್ಮಾಣವಾಗಿರುವ ಸೇತುವೆ ಕುಸಿಯುವ ಹಂತ ತಲುಪಿದ್ದು ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ.

ಈ ಸೇತುವೆ ಕಿರಿದಾಗಿದೆ. ಸೇತುವೆ ಒಂದು ಬದಿಯಲ್ಲೇ ಕುಡಿಯುವ ನೀರಿನ ಪೈಪ್‌ಲೈನ್‌ ತೆಗೆದುಕೊಂಡು ಹೋಗಲಾಗಿದೆ. ಇದರಿಂದ ಎರಡು ಬಸ್‌ ಅಥವಾ ಎರಡು ಲಾರಿ ಏಕ ಕಾಲಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ. ಅವಸರದಲ್ಲಿ ಎರಡೂ ಬದಿಯ ವಾಹನ ನುಗ್ಗುತ್ತವೆ. ಇದರಿಂದ ವಾಹನಗಳು ಸಿಲುಕಿಕೊಳ್ಳುತ್ತವೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ನಿತ್ಯವೂ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಕೆಲವು ಸಲ ಒಂದು ತಾಸಿನವರೆಗೂ ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಪಟ್ಟಣದಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಅಂದು ಈ ರಸ್ತೆಯಲ್ಲಿ ಪ್ರಯಾಣ ಮಾಡಲು ಸರ್ಕಸ್‌ ಮಾಡಬೇಕಾಗಿದೆ ಎ್ನುತ್ತಾರೆ ಪ್ರಯಾಣಿಕ ಪರಶುರಾಮ್.

ಹಬ್ಬದ ಸಂದರ್ಭಗಳಲ್ಲಿ ಸೇತುವೆ ಚಿಕ್ಕದಾಗಿರುವುದರಿಂದ ಸಾಮಾನ್ಯವಾಗಿ ಜನತೆ ಶಿವಮೊಗ್ಗ ನಗರಕ್ಕೆ ಹೆಚ್ಚಿನ ವಾಹನಗಳ ಸಂಚಾರವಿರುತ್ತದೆ. ಇಂತಹ ಸಮಯದಲ್ಲಿ ಸೇತುವೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ಎರಡೂ ಬದಿ ಪೊಲೀಸರು ನಿಂತು, ವಾಕಿಟಾಕಿ ಮೂಲಕ ಮಾತನಾಡುತ್ತಾ ಸಂಚಾರ ಸುಗಮಕ್ಕೆ ಸಾಹಸಪಡುತ್ತಾರೆ.

ಈಗಾಗಲೇ ಕಾಮಗಾರಿ ಚಾಲನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ, ಗುತ್ತಿಗೆದಾರರು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ಇದರಿಂದಾಗಿ ಪ್ರತಿದಿನ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು