ಬುಧವಾರ, ಆಗಸ್ಟ್ 10, 2022
25 °C
ಕಚೇರಿಯಲ್ಲಿ ಕುಸಿದುಬಿದ್ದ ವೃದ್ಧೆ

ಶಿವಮೊಗ್ಗ: ಪಿಂಚಣಿಗೆ ಅರ್ಜಿ ಸಲ್ಲಿಸಲು 7 ಕಿ.ಮೀ. ನಡೆದು ಬಂದಿದ್ದ ವೃದ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವೃದ್ಧಾಪ್ಯ ವೇತನಕ್ಕೆ (ಪಿಂಚಣಿ) ಅರ್ಜಿ ಸಲ್ಲಿಸಲು ಹೊಸನಗರ ತಾಲ್ಲೂಕಿನ ನಿಟ್ಟೂರಿನ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಇತ್ತೀಚೆಗೆ ಬಂದಿದ್ದ ವೃದ್ಧೆಯೊಬ್ಬರು ಕಾದು ಕಾದು ಸುಸ್ತಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಹೆಬ್ಬಿಗೆ ಗ್ರಾಮದ ಸಾಧಮ್ಮ ಅವರೇ ಅಸ್ವಸ್ಥಗೊಂಡಿದ್ದ ವೃದ್ಧೆ. ಕೂಡಲೇ ಅವರನ್ನು ಸ್ಥಳದಲ್ಲಿದ್ದವರು ಉಪಚರಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಮ್ಮ ಗ್ರಾಮದಿಂದ ನಿಟ್ಟೂರಿನ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಏಳು ಕಿ.ಮೀ.ವರೆಗೆ ಅವರು ನಡೆದು ಬಂದಿದ್ದರಿಂದ ಸುಸ್ತಾಗಿದ್ದರು ಎಂದು ತಿಳಿದುಬಂದಿದೆ.

ಇರುವ ಒಬ್ಬ ಪುತ್ರ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದು, ಈ ವೃದ್ಧೆ ಜೊತೆ ಮನೆಯಲ್ಲಿ ಯಾರೂ ಇಲ್ಲ ಎನ್ನಲಾಗಿದೆ.

‘ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬೆಳಿಗ್ಗೆ 9.30ಕ್ಕೆ ಅವರು ಬಂದಿದ್ದಾರೆ. ಆಗ ಗ್ರಾಮ ಲೆಕ್ಕಾಧಿಕಾರಿ ಇರಲಿಲ್ಲ. ಕಾದು ಕುಳಿತಿದ್ದ ಸಾಧಮ್ಮ ತಲೆ ತಿರುಗಿಬಿದ್ದಿದ್ದಾರೆ. ಪಂಚಾಯಿತಿ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಬಿಟ್ಟು ಬಂದಿದ್ದಾರೆ’ ಎಂದು ತಹಶೀಲ್ದಾರ್ ವಿ.ಎಸ್.ರಾಜೀವ್ ‘ಪ್ರಜಾವಾಣಿ’ಗೆ ತಿಳಿಸಿದರು.

ವೃದ್ಧೆಯ ಮನೆಗೆ ತೆರಳಿ ಅರ್ಜಿ ಪಡೆದು ವೃದ್ಧಾಪ್ಯ ವೇತನ ಮಂಜೂರು ಮಾಡುವಂತೆ ಮಂಗಳವಾರ ಕಂದಾಯ ನಿರೀಕ್ಷಕರನ್ನು ಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

‘ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆ ಇದೆ. ಒಬ್ಬರನ್ನೇ ವಿವಿಧೆಡೆ ನಿಯೋಜಿಸಿದ್ದರಿಂದ ಈ ತೊಂದರೆ ಆಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿ ಮಂಜಪ್ಪ ಅವರನ್ನು ಮತ್ತಿಕೈಗೆ ವರ್ಗಾವಣೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು