ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಪದೇ ಪದೇ ಫ್ಲೈಟ್ ಡಿಲೇ, ಕ್ಯಾನ್ಸಲ್; ಪ್ರಯಾಣಿಕರ ಬೇಸರ

Published 19 ನವೆಂಬರ್ 2023, 6:29 IST
Last Updated 19 ನವೆಂಬರ್ 2023, 6:29 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಂತ್ರಿಕ ಕಾರಣ, ಹವಾಮಾನ ವೈಪರೀತ್ಯದಿಂದ ಶಿವಮೊಗ್ಗ–ಬೆಂಗಳೂರು ನಡುವೆ ಸಂಚರಿಸುವ ವಿಮಾನದ ಹಾರಾಟ ಈ ವಾರ ಎರಡು ಬಾರಿ ರದ್ದುಗೊಂಡಿದೆ. ಪದೇ ಪದೇ ವಿಳಂಬವಾಗುತ್ತಿದೆ. ಇದು ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.

ನವೆಂಬರ್‌ ತಿಂಗಳಲ್ಲಿ ಹಲವು ಬಾರಿ ವಿಮಾನ ವಿಳಂಬವಾಗಿದೆ. ಕೆಲವೊಮ್ಮೆ ಮಧ್ಯಾಹ್ನದ ನಂತರ ಶಿವಮೊಗ್ಗಕ್ಕೆ ಬಂದಿದೆ. ನವೆಂಬರ್‌ 17ರಂದು ಶಿವಮೊಗ್ಗಕ್ಕೆ ಬಂದರೂ ಬಹಳ ಹೊತ್ತು ಆಕಾಶದಲ್ಲಿ ಹಾರಾಟ ನಡೆಸಿ ಇಳಿಸಲು ಸಾಧ್ಯವಾಗದೇ ವಾಪಸ್ ಬೆಂಗಳೂರಿಗೆ ತೆರಳಿದೆ ಎಂದು ತಿಳಿದುಬಂದಿದೆ.

ವಿಮಾನ ರದ್ದುಗೊಂಡಿದ್ದರಿಂದ ಇಂಡಿಗೊ ಸಂಸ್ಥೆಯವರು ಪ್ರಯಾಣಿಕರನ್ನು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿದರು. ಕೆಲವರಿಗೆ ಟಿಕೆಟ್ ಮೊತ್ತ ಹಿಂತಿರುಗಿಸಲಾಯಿತು. ಇನ್ನಷ್ಟು ಮಂದಿಗೆ ಟಿಕೆಟ್ ರೀಶೆಡ್ಯೂಲ್ ಮಾಡಲಾಯಿತು.

‘ವಿಮಾನದ ವಿಳಂಬ ಹಾರಾಟದಿಂದ ಬೆಂಗಳೂರಿನಿಂದ ಚೆನ್ನೈ, ಮುಂಬೈ, ದೆಹಲಿ, ತಿರುಪತಿ, ಗೋವಾ ಮೊದಲಾದ ಕಡೆ ತೆರಳಲು ಸಂಪರ್ಕ ವಿಮಾನಗಳ (ಕನೆಕ್ಟಿಂಗ್ ಫ್ಲೈಟ್) ಹಿಡಿಯಲು ಕಷ್ಟವಾಗುತ್ತಿದೆ’ ಎಂಬುದು ಪ್ರಯಾಣಿಕರ ಅಳಲು.

‘ಹಾರಾಟ ಸ್ಥಗಿತಗೊಂಡರೆ ಇಲ್ಲವೇ ವಿಳಂಬ ಆಗುವುದಾದರೆ ಮೊದಲೇ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ವಯಸ್ಸಾದವರು ಇರುತ್ತಾರೆ. ಅವರಿಗೆ ಸಮಸ್ಯೆ ಆಗುತ್ತಿದೆ. ಬದಲಿಗೆ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಇಲ್ಲವೇ ಹೊರಟು ನಿಂತಾಗ ಮಾಹಿತಿ ನೀಡಲಾಗುತ್ತಿದೆ. ಮೊದಲೇ ಮಾಹಿತಿ ಕೊಟ್ಟರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಶುಕ್ರವಾರ ಚೆನ್ನೈಗೆ ಹೊರಟಿದ್ದ ಗೋಪಾಳದ ನಿವಾಸಿ ನವ್ಯಾ ವಿನೋದ್ ಬೇಸರ ವ್ಯಕ್ತಪಡಿಸಿದರು.

‘ಗೆಳೆಯರು ಈಗಾಗಲೇ ಗೋವಾಗೆ ಹೋಗಿದ್ದಾರೆ. ಫೈಟ್‌ನಲ್ಲಿ ನಾನು ಬೆಂಗಳೂರಿಗೆ ತೆರಳಿ ಪಣಜಿಗೆ ಸಂಪರ್ಕ ವಿಮಾನ ಹಿಡಿದು ಅವರನ್ನು ಸೇರಿಕೊಳ್ಳಬೇಕಿತ್ತು. ಅಲ್ಲಿ ಹೋಟೆಲ್ ಕೊಠಡಿ ಕೂಡ ಬುಕ್ ಆಗಿದೆ. ಇಲ್ಲಿ ನೋಡಿದರೆ ವಿಮಾನ ರದ್ದುಗೊಂಡಿದೆ’ ಎಂದು ಶಿವಮೊಗ್ಗದ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಈಗ ಚಳಿಗಾಲ ಆರಂಭವಾಗಿದೆ. ಶಿವಮೊಗ್ಗ ನಗರ ಪಶ್ಚಿಮಘಟ್ಟ ಸಾಲಿನಲ್ಲಿ ಬರುವುದರಿಂದ ಇಲ್ಲಿ ಮುಂಜಾನೆ ಮಂಜು ಜಾಸ್ತಿ. ಗಾಳಿಯ ವೇಗವೂ ಹೆಚ್ಚು. ಇದು ವಿಮಾನ ಇಳಿಯಲು, ಏರಲು ಅನುಕೂಲವಾಗಿಲ್ಲ. ಹೀಗಾಗಿ ವಿಮಾನ ರದ್ದುಗೊಳ್ಳುತ್ತಿದೆ. ಇಲ್ಲವೇ ವಿಳಂಬವಾಗುತ್ತಿದೆ’ ಎಂದು  ವಿಮಾನ ನಿಲ್ದಾಣದ ಮೂಲಗಳು ಹೇಳುತ್ತವೆ.

ಸಮಸ್ಯೆ ನಿವಾರಣೆಗೆ ಎರಡು ಪರಿಹಾರ

ಸಮಸ್ಯೆ ಪರಿಹಾರಕ್ಕೆ ಎರಡು ಅವಕಾಶಗಳಿವೆ. ಮೊದಲನೆಯದು ಏರ್‌ಲೈನ್‌ ಸಂಸ್ಥೆಯವರು ತಮ್ಮ ವಿಮಾನದಲ್ಲಿ ವಿಶೇಷ ವಿಎಫ್‌ಆರ್ ವ್ಯವಸ್ಥೆ (visual Flight Rules) ಅಳವಡಿಸಿಕೊಳ್ಳಬೇಕು. ಇದರಿಂದ ಕನಿಷ್ಟ 5 ಕಿ.ಮೀ ದೂರದ ವೀಕ್ಷಣೆಗೆ ಅವಕಾಶವಾಗಲಿದೆ. ಮೋಡ ಕವಿದ ವಾತಾವರಣದಲ್ಲಿ ವಿಮಾನ 10 ಸಾವಿರ ಅಡಿಗಿಂತ ಮೇಲಿರಬೇಕು. ಇದಕ್ಕೆ ಅನುಭವಿ ಪೈಲಟ್‌ ಬೇಕು ಎಂದು ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಗಳು ಹೇಳುತ್ತವೆ. ‘ವಿಮಾನ ನಿಲ್ದಾಣದಲ್ಲಿ ನ್ಯಾವಿಗೇಶನ್ ಉಪಕರಣ ರನ್‌ ವೇ ಲೈಟ್ ಅಳವಡಿಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಉಪಕರಣಗಳನ್ನು ವಿದೇಶದಿಂದ ತರಿಸಲು ಟೆಂಡರ್ ಕರೆದು ಇ–ಪ್ರಕ್ಯೂರ್‌ಮೆಂಟ್ ಮೂಲಕ ಈ ವ್ಯವಸ್ಥೆ ಅಳವಡಿಸಬೇಕಿದೆ. ಅದಕ್ಕೂ ಮುನ್ನ ಸುತ್ತಲಿನ ಪ್ರದೇಶ ಹಾಗೂ ವಿಮಾನ ನಿಲ್ದಾಣದ ಸಮೀಕ್ಷೆ ಆಗಬೇಕಿದೆ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಇನ್ನೂ ಒಂದು ವರ್ಷ ಹಿಡಿಯುತ್ತದೆ’ ಎಂದು ತಂತ್ರಜ್ಞರೊಬ್ಬರು ತಿಳಿಸಿದರು. ‘ಇದು ಕ್ವಾಲಿಫೈಡ್ ಏರೋಡ್ರಮ್‌. ಇಲ್ಲಿ ಎಟಿಸಿ ಮೆಟ್ರೋಲಾಜಿಕಲ್‌ ಹಾಗೂ ಫೈರ್‌ ಸರ್ವಿಸ್ ಇದೆ. ಹೀಗಾಗಿ ಸ್ಪೆಶಲ್ ವಿಎಫ್‌ಆರ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಡಿಜಿಸಿಎ ಅನುಮತಿ ಕೊಡಲಿದೆ. ಈಗ ಅದೇ ತಕ್ಷಣದ ಪರಿಹಾರ’ ಎನ್ನುತ್ತಾರೆ.

ಕುಲು–ಮನಾಲಿಯಂತಹ ಬೆಟ್ಟ ಪ್ರದೇಶದಲ್ಲಿ ಚಳಿಗಾಲದಲ್ಲೂ ಸುಲಭವಾಗಿ ವಿಮಾನ ಇಳಿಸುತ್ತಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲೂ ಅಗತ್ಯ ತಾಂತ್ರಿಕತೆ ಅಳವಡಿಸಲಿ.
ನವ್ಯಾ ವಿನೋದ್, ಗೋಪಾಳ ನಿವಾಸಿ, ಶಿವಮೊಗ್ಗ
ವಿಮಾನ ಹಾರಾಟ ವಿಳಂಬ ತಡೆಯಲು ಸ್ಪೆಶಲ್ ವಿಎಫ್‌ಆರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಏರ್‌ಲೈನ್‌ ಸಂಸ್ಥೆಯವರಿಗೆ ಹೇಳಿದ್ದೇವೆ. ಆ ಪ್ರಕ್ರಿಯೆ ನಡೆಸಿದ್ದಾರೆ. ವಾರದೊಳಗೆ ಈ ಸಮಸ್ಯೆ ನಿವಾರಣೆ ಆಗಲಿದೆ.
ಶಮಂತ್, ಶಿವಮೊಗ್ಗ ವಿಮಾನ ನಿಲ್ದಾಣದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT