ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಶಿವಮೊಗ್ಗ: ವಾಹನ ತಪಾಸಣೆ, ಆರ್‌ಎಎಫ್ ಪಥಸಂಚಲನ

ಹಿಂಬದಿ ಸವಾರರ ಇಳಿಸಿ ಕಳಿಸಿದ ಪೊಲೀಸರು
Last Updated 17 ಆಗಸ್ಟ್ 2022, 4:29 IST
ಅಕ್ಷರ ಗಾತ್ರ

ಶಿವಮೊಗ್ಗ: ಫ್ಲೆಕ್ಸ್ ವಿವಾದದ ಕಾರಣಕ್ಕೆ ಸೋಮವಾರ ಉದ್ವಿಗ್ಗಗೊಂಡಿದ್ದ ಶಿವಮೊಗ್ಗ ನಗರ ಮಂಗಳವಾರ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಶಿವಮೊಗ್ಗಹಳೆಯ ನಗರ ಭಾಗದಲ್ಲಿ ಆತಂಕ ಮನೆ ಮಾಡಿತ್ತು.

ನಿಷೇಧಾಜ್ಞೆಯ ಕಾರಣಕ್ಕೆ ಜನ ಸಂಚಾರ ಅಷ್ಟಾಗಿ ಇರಲಿಲ್ಲ. ಗಾಂಧಿ ಬಜಾರ್, ಸೀಗೆಹಟ್ಟಿ, ಸಿನಿಮಾ ರಸ್ತೆ, ಉಪ್ಪಾರ ಕೇರಿ ಭಾಗದಲ್ಲಿ ಪ್ರತಿ ಒಳ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾವಲಿಗೆ ನಿಂತಿದ್ದರು. ಅಂಗಡಿಗಳು ಬಾಗಿಲು ಹಾಕಿದ್ದವು. ಊರಿನ ಪ್ರಮುಖ ವ್ಯಾಪಾರ ಸ್ಥಳವಾದ ಗಾಂಧಿ ಬಜಾರ್ ಬಿಕೋ ಅನ್ನುತ್ತಿತ್ತು.

ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಹಳೆ ಶಿವಮೊಗ್ಗದ ಪ್ರತಿ ಓಣಿಯಲ್ಲೂ ಪಥ ಸಂಚಲನ ನಡೆಸಿದರು. ಈ ವೇಳೆ ವಜ್ರ ಪ್ರಹಾರ ವಾಹನ ಗಾಂಭೀರ್ಯದಲ್ಲಿ ಸಾಗಿದ್ದು ಕಂಡುಬಂದಿತು. ಈ ಪಥ ಸಂಚಲನದ ನೇತೃತ್ವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್, ಪೂರ್ವವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ವಹಿಸಿದ್ದರು.

ದೇವರ ದರ್ಶನ: ಪಥ ಸಂಚಲನದ ಬಳಿಕ ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಅಲೋಕ್‌ಕುಮಾರ ನಂತರ ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಮುಂದೆ ಗಣಪತಿ ಹಬ್ಬ ಇದ್ದು, ಶಾಂತಿ–ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಕೈಜೋಡಿಸುವಂತೆ ಹೇಳಿದರು.

ವಾಹನ ತಪಾಸಣೆ: ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ಪ್ರಯಾಣಕ್ಕೆ ನಿಷೇಧ ಇರುವುದರಿಂದ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ತಪಾಸಣೆಗೆ ನಿಂತಿದ್ದ ಪೊಲೀಸರು ಹಿಂಬದಿ ಸವಾರರನ್ನು ಇಳಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದರು.

15 ಮಂದಿ ವಿರುದ್ಧ ಎಫ್‌ಐಆರ್: ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಭರ್ಮಪ್ಪ ನಗರದ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿಂದೂ ಸಂಘಟನೆಗಳ 15 ಮಂದಿ ಕಾರ್ಯಕರ್ತರ ವಿರುದ್ಧ ಜಾಕೀರ್ ಹುಸೇನ್ ಎಂಬುವವರು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿಷೇಧಾಜ್ಞೆ: ನಿಯಮಗಳ ಪಾಲನೆಗೆ ಸೂಚನೆ

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಆಗಸ್ಟ್ 18ರ ರಾತ್ರಿ 10 ಗಂಟೆಯವರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ, ವಿಜಯೋತ್ಸವ, ಸಾರ್ವಜನಿಕ ಸಮಾವೇಶ ನಿಷೇಧಿಸಲಾಗಿದೆ.

ಆಯುಧ, ಮಾರಕಾಸ್ತ್ರ, ಸ್ಫೋಟಕಗಳ್ನು ಕೊಂಡೊಯ್ಯುವಂತಿಲ್ಲ. ಪ್ರತಿಕೃತಿ ದಹನ, ಪ್ರಚೋದನಕಾರಿ ಘೋಷಣೆ, ಭಿತ್ತಿಪತ್ರ ಪ್ರದರ್ಶನ ಮಾಡುವಂತಿಲ್ಲ.

––

ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಇದ್ದರೂ ಶಾಲೆ–ಕಾಲೇಜುಗಳು ಬುಧವಾರದಿಂದ ಎಂದಿನಂತೆಯೇ ಕಾರ್ಯಾರಂಭ ಮಾಡಲಿವೆ.
-ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT