ಮಂಗಳವಾರ, ಜನವರಿ 31, 2023
19 °C
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅಭಿಮತ

ಮತ್ತೊಬ್ಬರ ಸುಖ ಬಯಸುವುದೇ ಸಮಾಜವಾದ: ಡಾ.ಸ.ಚಿ.ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಮಾಜವಾದದ ಮುಖ್ಯ ಸಾರವೇ ಮನುಷ್ಯ ಸಂಬಂಧ. ಇದು ಮಾನವ ಕಲ್ಯಾಣಕ್ಕಾಗಿಯೇ ತುಡಿಯುತ್ತಿರುತ್ತದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ
ಹೇಳಿದರು.

ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗ, ಕನ್ನಡ ವಿ.ವಿ. ಚರಿತ್ರೆ ವಿಭಾಗದಿಂದ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಜನ್ಮಶತಾಬ್ದಿ ವರ್ಷದ ಅಂಗವಾಗಿ ಆಯೋಜಿಸಿದ್ದ ‘ಸಮಾಜವಾದ ಮತ್ತು ಆಧುನಿಕ ಕರ್ನಾಟಕ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಮತ್ತೊಬ್ಬರ ಸುಖ ಬಯಸುವುದೇ ಸಮಾಜವಾದದ ಮುಖ್ಯ ಉದ್ದೇಶ. ಶಾಂತವೇರಿ ಗೋಪಾಲಗೌಡರು ಈ ಆದರ್ಶ ಹೊಂದಿದವರು. ಅವರ ಬದುಕೇ ಒಂದು ಸಮಾಜವಾದ. ಅವರು ನಮ್ಮ ನಡುವೆ ಇದ್ದರು ಎಂಬುದೇ ಒಂದು ರೋಮಾಂಚನ. ಆ ಕಾಲಘಟ್ಟವೇ ಬೇರೆಯಾಗಿ ಕಂಡರೂ ವರ್ತಮಾನದ ಕಾಲಘಟ್ಟದಲ್ಲಿ ಅವರ ಆದರ್ಶಗಳು ಅಗತ್ಯವಾಗುತ್ತವೆ. ಇಂದಿನ ಜನಪ್ರತಿನಿಧಿಗಳ, ಕೆಲವು ರಾಜಕಾರಣಿಗಳು ಅರಮನೆಯಂತಹ ಬಂಗಲೆಗಳಲ್ಲಿ ಅರಸರಂತೆ ಬದುಕುತ್ತಿದ್ದಾರೆ. ಇಲ್ಲಿ ಸಮಾಜವಾದ ಹೇಗೆ ಉಸಿರಾಡಲು ಹೇಗೆ ಸಾಧ್ಯ’ ಎಂದರು.

‘ಧರ್ಮ, ಜಾತಿಗಳ ನಡುವೆ ಮನುಷ್ಯ ಪ್ರೀತಿ ಮರೆಯಾಗುತ್ತಿದೆ. ಸಂಪತ್ತು ಕ್ರೋಡೀಕರಣವಾಗುತ್ತಿದೆ. ಎಲ್ಲ ವಾದಗಳೂ ಸಮಾಜವಾದದ ಸುತ್ತವೇ ತಿರುಗುತ್ತವೆ. ಇವೆಲ್ಲವೂ ಮನುಷ್ಯ ಸಂಬಂಧಗಳನ್ನು ಬೆಸೆಯುವಂತೆ ಇರಬೇಕು. ಈ ಭೂಮಿ, ಗಾಳಿ, ನೀರು, ಬೆಳಕು ಇವೆಲ್ಲವನ್ನೂ ಸ್ವತಂತ್ರವಾಗಿ ಪಡೆಯುವ ಹಾಗಿರಬೇಕು. ಜೊತೆಗೆ ಮುಂದಿನ ಪೀಳಿಗೆಗೂ ಉಳಿಸುವಂತಿರಬೇಕು. ಆದರೆ, ಅದಾಗುತ್ತಿಲ್ಲ. ಇವುಗಳ ನಡುವೆಯೇ ನಮಗೆ ಮತ್ತೆ ಮತ್ತೆ ಗೋಪಾಲಗೌಡರು ಆದರ್ಶವಾಗಿ ನಿಲ್ಲುತ್ತಾರೆ. ವಿದ್ಯಾರ್ಥಿಗಳು ಅವರನ್ನು ಕುರಿತು ಓದಬೇಕು’ ಎಂದು ಹೇಳಿದರು.

ವಿಚಾರ ಸಂಕಿರಣದ ಸಂಚಾಲಕ ಹಾಗೂ ಕುವೆಂಪು ವಿಶ್ವವಿದ್ಯಾಲಯ ಇತಿಹಾಸ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬಂಡವಾಳಶಾಹಿಗಳಿಗೆ ಪ್ರತ್ಯುತ್ತರವಾಗಿ ಸಮಾಜವಾದ ನಿಲ್ಲುತ್ತದೆ. ನಾಗರಿಕತೆ ಸಂಸ್ಕೃತಿ, ಆರ್ಥಿಕತೆಗಳ ನಡುವೆ ತನ್ನದೇ ಆದ ಲೋಕದೃಷ್ಟಿ ಬೀರಿರುವ ಸಮಾಜವಾದ ಸೈದ್ಧಾಂತಿಕ ಸ್ವರೂಪ ಪಡೆದಿದ್ದು, ನಿಜವಾದರೂ ಅದು ಸೋಲು ಕಾಣುತ್ತಲೇ ಬಂದಿದೆ. ಪ್ರಸ್ತುತ ಸಮಾಜವಾದ ಪ್ರತ್ಯೇಕತೆ ಪಡೆದು ರಾಜಕಾರಣಕ್ಕೆ ಸಿಲುಕಿದೆ. ಹಾಗಾಗಿ ಮರು ಪರಿಶೀಲನೆಗೆ ಅದು ಒಳಪಡುವ ಅಗತ್ಯವಿದೆ’ ಎಂದರು.

ಆಶಯ ನುಡಿಗಳನ್ನಾಡಿದ ಹಂಪಿ ವಿ.ವಿ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಪೂಣಚ್ಚ ‘ಉಳ್ಳವರೇ ಮೀಸಲಾತಿಗಳನ್ನು ಕೇಳುತ್ತಿರುವಾಗ ಸಮಾಜವಾದ ಅರಳುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಸಾಮಾಜಿಕವಾಗಿ ಮೇಲುಸ್ತರ ದಲ್ಲಿರುವ ಮೇಲುಜಾತಿಗಳೇ ಮೀಸಲಾತಿಗಾಗಿ ಬಡಿದಾಡುತ್ತಿವೆ. ಕೆಳಜಾತಿಯವರು ಕೇಳಲು ಕೂಡ ಧ್ವನಿ ಕಳೆದುಕೊಂಡಿದ್ದಾರೆ. ಆಳುವ ಸರ್ಕಾರಗಳು ವಿಶಿಷ್ಟವಾದ ಹೊಸ ಸಮಾಜವಾದವನ್ನು ಸೃಷ್ಟಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿಯೂ ಇತಿಹಾಸ, ಸಮಾಜ ವಿಜ್ಞಾನದಂತಹ ಪಠ್ಯಗಳೇ ಮರೆಯಾಗುತ್ತಿವೆ. ಆಹಾರ, ತೊಡುವ ಬಟ್ಟೆಗಳು ಕೂಡ ನಿಯಂತ್ರಣಕ್ಕೆ ಒಳಪಟ್ಟಿವೆ. ಇವುಗಳ ನಡುವೆ ಸಮಾಜವಾದದ ಸಿದ್ಧಾಂತಗಳೇ ಮರುಚಿಂತನೆಗಳಿಗೆ ಒಳಗಾಗಬೇಕಾಗಿದೆ’ ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಕೆ.ಬಿ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಶಫಿವುಲ್ಲಾ ಕೆ., ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್. ನಾಗರಾಜ್ ಇದ್ದರು. ಡಾ. ಎಚ್.ಎಂ. ಶಂಭುಲಿಂಗಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.