ಹಾಂಗ್‌ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಪುರುಷರ ಫುಟ್‌ಬಾಲ್ ವಿಭಾಗದಲ್ಲಿ ಬಾಂಗ್ಲಾದೇಶ ವಿರುದ್ಧ 1-0 ಗೋಲು ಅಂತರದ ಗೆಲುವು ದಾಖಲಿಸಿದ ಭಾರತ, ನಾಕೌಟ್ ಹಂತದ ಪ್ರವೇಶ ಜೀವಂತವಾಗಿರಿಸಿದೆ.
85ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲು ಆಗಿ ಪರಿವರ್ತಿಸಿದ ನಾಯಕ ಸುನಿಲ್ ಚೆಟ್ರಿ, ಗೆಲುವಿನ ರೂವಾರಿ ಎನಿಸಿದರು. ಈ ಮೂಲಕ ಭಾರತ ತಂಡ ಮೂರು ಅಂಕಗಳನ್ನು ಕಲೆ ಹಾಕಿದೆ.
'ಎ' ಗುಂಪಿನ ಈ ಪಂದ್ಯದಲ್ಲಿ ಆರಂಭದಿಂದಲೂ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಎರಡನೇ ಅವಧಿಯಲ್ಲೂ ನಿಖರ ಪೈಪೋಟಿ ಕಂಡುಬಂತು. ಕೊನೆಯಲ್ಲಿ ಬಾಂಗ್ಲಾ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಭಾರತ ಯಶಸ್ವಿಯಾಯಿತು.
ಮೊದಲ ಪಂದ್ಯದಲ್ಲಿ ಅತಿಥೇಯ ಚೀನಾ ವಿರುದ್ಧ ಭಾರತ 1-5 ಗೋಲುಗಳ ಅಂತರದ ಹೀನಾಯ ಸೋಲು ಕಂಡಿತ್ತು.
ನಾಕೌಟ್ ಪ್ರವೇಶಿಸಲು ಮ್ಯಾನ್ಮಾರ್ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲೂ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ 39 ವರ್ಷದ ಸುನಿಲ್ ಚೆಟ್ರಿ, ಐದು ದಿನಗಳ ಅಂತರದಲ್ಲಿ ಮೂರು ಪಂದ್ಯಗಳನ್ನು ಆಡುವುದು ಅಷ್ಟು ಸುಲಭವಲ್ಲ. ಆದಷ್ಟು ಬೇಗ ಹೋಗಿ ಚೇತರಿಸಿಕೊಂಡು ಮುಂದಿನ ಪಂದ್ಯಕ್ಕೆ ಸಿದ್ಧರಾಗಬೇಕಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.