ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂದರೇಶ್‌ಗೆ ಸುಡಾ, ಪಲ್ಲವಿಗೆ ಸಾಂಬಾರು ಮಂಡಳಿ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ: ಮಂಜುನಾಥಗೌಡಗೆ ಅವಕಾಶ
Published 29 ಫೆಬ್ರುವರಿ 2024, 12:56 IST
Last Updated 29 ಫೆಬ್ರುವರಿ 2024, 12:56 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಗಮ–ಮಂಡಳಿಗಳಿಗೆ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ನೇಮಕ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. ಶಿವಮೊಗ್ಗ ಜಿಲ್ಲೆಯ ಮೂವರಿಗೆ ಅವಕಾಶ ದೊರೆತಿದೆ.

ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸುಡಾ) ಅಧ್ಯಕ್ಷರಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಎಚ್.ಎಸ್.ಸುಂದರೇಶ್‌ ಅವಕಾಶ ಪಡೆದಿದ್ದಾರೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಆರ್.ಎಂ.ಮಂಜುನಾಥಗೌಡ ನೇಮಕಗೊಂಡಿದ್ದಾರೆ. ಇನ್ನು ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಶಿವಮೊಗ್ಗದ ಜಿ.ಪಲ್ಲವಿ ನೇಮಕಗೊಂಡಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಅವರ ಅಧಿಕಾರ ಇರಲಿದೆ.

ಸುಂದರೇಶ್ ಹಾಗೂ ಆರ್.ಎಂ.ಮಂಜುನಾಥಗೌಡ ಇಬ್ಬರೂ ಒಕ್ಕಲಿಗ ಸಮುದಾಯದವರು. ಜಿ.ಪಲ್ಲವಿ ಪರಿಶಿಷ್ಟ ಜಾತಿಯ ಕೊರವ ಸಮಾಜದವರು. ಈ ನೇಮಕದಿಂದ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ನೆರವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ತಾವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಎಚ್.ಎಸ್.ಸುಂದರೇಶ್‌ ಹೇಳಿಕೊಂಡಿದ್ದರು. ಸುಡಾ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಸಮಾಧಾನಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಜಿ.‍ಪಲ್ಲವಿ ಪಕ್ಷದ ಸೂಚನೆ ಮೇರೆಗೆ ಕೊನೆಯ ಕ್ಷಣದಲ್ಲಿ ತ್ಯಾಗ ಮಾಡಿದ್ದರು. ಅದನ್ನು ಪಕ್ಷ ಗುರುತಿಸಿದ್ದು, ಅವರಿಗೆ ಈಗ ಸಾಂಬಾರು ಮಂಡಳಿಯ ಅವಕಾಶ ಒದಗಿಬಂದಿದೆ ಎನ್ನಲಾಗಿದೆ.

13 ಜಿಲ್ಲೆಗಳ 74 ತಾಲ್ಲೂಕುಗಳ ವಿಶಾಲ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಮಹತ್ವದ ಜವಾಬ್ದಾರಿ ಮಂಜುನಾಥ ಗೌಡ ಅವರಿಗೆ ವಹಿಸಲಾಗಿದೆ. ಇಲ್ಲಿಯವರೆಗೆ ಯೋಜನೆ, ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿದ್ದರು.

ಎಚ್.ಎಸ್.ಸುಂದರೇಶ
ಎಚ್.ಎಸ್.ಸುಂದರೇಶ
ಜಿ.ಪಲ್ಲವಿ
ಜಿ.ಪಲ್ಲವಿ

35 ವರ್ಷಗಳಿಂದ ‍ಸಲ್ಲಿಸಿದ ಸೇವೆ ಗುರುತಿಸಿ ಪಕ್ಷ ಅವಕಾಶ ಈ ನೀಡಿದೆ. ಅತ್ಯಂತ ಚಿಕ್ಕ ಸಮುದಾಯ ಗುರುತಿಸಿ ಅಧಿಕಾರದ ಶಕ್ತಿ ಕೊಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದು ಸಾಬೀತಾಗಿದೆ.

-ಜಿ.ಪಲ್ಲವಿ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ

ಈ ಸ್ಥಾನದ ನಿರೀಕ್ಷೆ ಇರಲಿಲ್ಲ. ಮಂಡಳಿಯ ಅಧಿಕಾರ ವ್ಯಾಪ್ತಿ ದೊಡ್ಡದು. ಪಕ್ಷದ ನಾಯಕರು ನಂಬಿಕೆ ಇಟ್ಟು ಈ ಅವಕಾಶ ನೀಡಿದ್ದಾರೆ. ಅದನ್ನು ಜನರ ಹಿತಕ್ಕಾಗಿ ಬಳಕೆ ಮಾಡುವೆ.

-ಆರ್.ಎಂ.ಮಂಜುನಾಥಗೌಡ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿಯ ಬೇಸಿಗೆ ನಿಭಾಯಿಸುವ ದೊಡ್ಡ ಸವಾಲು ನನಗೆ ಎದುರಾಗಿದೆ. ಸಚಿವ ಮಧು ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ಅದನ್ನು ಯಶಸ್ವಿಯಾಗಿ ನಿಭಾಯಿಸುವೆ. -ಡಾ.ಅಂಶುಮಂತ್ ಭದ್ರಾ ಕಾಡಾ ನೂತನ ಅಧ್ಯಕ್ಷ

ಭದ್ರಾ ಕಾಡಾ; ಡಾ.ಅಂಶುಮಂತ್ ಅಧ್ಯಕ್ಷ

ಶಿವಮೊಗ್ಗ: ಇಲ್ಲಿನ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ (ಕಾಡಾ) ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಡಾ.ಅಂಶುಮಂತ್ ನೇಮಕಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯವರನ್ನು ನೇಮಕ ಮಾಡುವ ಪ್ರಸ್ತಾವಕ್ಕೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳು ಅಪಸ್ವರ ಎತ್ತಿದ್ದರು. ತಮ್ಮ ಜಿಲ್ಲೆಗಳಿಗೆ ಅವಕಾಶ ಕೊಡಿ ಎಂಬ ಅವರ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಅಂಶುಮಂತ್ ಚಿಕ್ಕಮಗಳೂರು– ಉಡುಪಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ. ಅವರನ್ನು ಸಮಾಧಾನಪಡಿಸಲು ಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ‘ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದನ್ನು ಚೆನ್ನಾಗಿ ನಿಭಾಯಿಸುವೆ. ಈಗಲೂ ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ. ಗಂಭೀರವಾಗಿ ಟಿಕೆಟ್‌ಗೆ ಪ್ರಯತ್ನಿಸುತ್ತಿರುವೆ’ ಎಂದು ಡಾ.ಅಂಶುಮಂತ್ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ಮಧು ಬಂಗಾರಪ್ಪ ಇರಲಿ: ಡಾ.ಅಂಶುಮತ್‌ ನೇಮಕಕ್ಕೆ ಭದ್ರಾ ನೀರಾವರಿ ಸಲಹಾ ಸಮಿತಿಯ ರೈತ ಪ್ರತಿನಿಧಿ ತೇಜಸ್ವಿ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭದ್ರಾ ಅಚ್ಚುಕಟ್ಟಿನಲ್ಲಿ ದಾವಣಗೆರೆ ಜಿಲ್ಲೆಯದೇ ಹೆಚ್ಚಿನ ಭಾಗ ಇದೆ. ಹೀಗಾಗಿ ಭದ್ರಾ ಕಾಡಾಕ್ಕೆ ದಾವಣಗೆರೆ ಭಾಗದವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸೂಕ್ತ. ಸೀಮಿತ ಅವಧಿ ಆದರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭದ್ರಾ ನೀರಿನ ವಿಷಯದಲ್ಲಿ ಒಂದಿಷ್ಟು ಮಾಹಿತಿ ಗ್ರಹಿಸಿದ್ದಾರೆ. ಹೀಗಾಗಿ ಬೇಸಿಗೆ ಹಂಗಾಮು ಪೂರ್ಣಗೊಳ್ಳುವವರೆಗೂ ಅವರನ್ನೇ ಕಾಡಾ ಅಧ್ಯಕ್ಷರನ್ನಾಗಿ ಮುಂದುವರಿಸಲಿ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT