ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಕ್ಕಳ ಬೆಳವಣಿಗೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ
Last Updated 6 ಸೆಪ್ಟೆಂಬರ್ 2021, 9:09 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀತಿಯನ್ನು ಎಲ್ಲರೂ ತಿಳಿದು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಕರೆ ನೀಡಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ವಿಚಾರಗಳು, ನಮ್ಮ ನಾಡಿನ ಸಂಸ್ಕೃತಿ ಜತೆಗೆ ತಾಂತ್ರಿಕತೆಗೆ ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದೆ. ಪರ ವಿರೋಧ ಎಲ್ಲೆಡೆ ಇರುತ್ತದೆ. ಆದರೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬೇಕು’ ಎಂದರು.

‘ಶಿಕ್ಷಣ ವ್ಯವಸ್ಥೆಯಲ್ಲಿರುವ ಅನೇಕ ಸಮಸ್ಯೆಗಳನ್ನು ವಿಧಾನ ಪರಿಷತ್ ಶಾಸಕರು ಗಮನಕ್ಕೆ ತಂದಿದ್ದಾರೆ. ಮುಂದಿನ ಅಧಿವೇಶನದೊಳಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು, ವಿಧಾನ ಪರಿಷತ್ ಶಾಸಕರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನೊಳಗೊಂಡು ಶಿಕ್ಷಣ ಸಚಿವರ ಸಹಯೋಗದಲ್ಲಿ ಸಭೆ ಕರೆದು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟಿಲ್ ಮಾತನಾಡಿ, ‘ಮನುಷ್ಯನನ್ನು ಒಂದು ವ್ಯಕ್ತಿ ಮತ್ತು ಶಕ್ತಿಯನ್ನಾಗಿ ರೂಪಿಸುವ ಸಾಮರ್ಥ್ಯ ಕೇವಲ ಶಿಕ್ಷಕರಿಗಿದ್ದು, ನಮ್ಮ ಸಂಸ್ಕೃತಿಯಲ್ಲಿ ತಾಯಿ–ತಂದೆ ನಂತರದ ಸ್ಥಾನ ಶಿಕ್ಷಕರು ತುಂಬುತ್ತಾರೆ. ಕೋವಿಡ್ ಸಂಕಷ್ಟದಲ್ಲಿ ಅನೇಕ ಶಿಕ್ಷಕರು ಯೋಧರಂತೆ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಕೋವಿಡ್‍ನಿಂದ ಮೃತ ಹೊಂದಿದ ಶಿಕ್ಷಕರ ಪರವಾಗಿ ಸರ್ಕಾರ ಇದೆ’ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಕೋವಿಡ್ ಕಾರಣ ಸರ್ಕಾರಿ ಮತ್ತು ವಿಶೇಷವಾಗಿ ಖಾಸಗಿ ಶಿಕ್ಷಕರ ಸೇವೆ ಮತ್ತು ಅವರ ತ್ಯಾಗ ಅವಿಸ್ಮರಣೀಯ. ಸ್ಮರ್ಧಾತ್ಮಕಜಗತ್ತಿನಲ್ಲಿ ನಾವು ಅಪ್‍ಡೇಟ್ ಆಗಬೇಕಿದ್ದು, ಹೊಸ ಶಿಕ್ಷಣ ನೀತಿಯನ್ನು ಸವಾಲಾಗಿ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿದರು.

ಡಿಡಿ‍ಪಿಐ ಎನ್‌.ಎಂ.ರಮೇಶ್‌, ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಸಾವಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷ ಆನಂದ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಬಿ.ಆರ್‌.ಬಸವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT