ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ನಿಜ ಸ್ವಾತಂತ್ರ್ಯ ಕೊಟ್ಟ ಕಾಗೋಡು ಚಳವಳಿ

ಮಾಜಿ ಸಚಿವ ಕಾಗೋಡು ತಿಮ್ಮಪ್ಪ
Last Updated 18 ಏಪ್ರಿಲ್ 2021, 4:20 IST
ಅಕ್ಷರ ಗಾತ್ರ

ಸಾಗರ: ಭೂ ಸುಧಾರಣಾ ಕಾಯ್ದೆ ಜಾರಿಗೆ ಬರಲು ಕಾರಣವಾದ ಕಾಗೋಡು ಸತ್ಯಾಗ್ರಹ ಆರಂಭವಾಗಿ ಇಂದಿಗೆ 70 ವರ್ಷಗಳು ತುಂಬಿದೆ. 1974ರಲ್ಲಿ ಕಾಯ್ದೆ ಜಾರಿಗೆ ಬರಲು ಕಾರಣರಾದವರ ಪೈಕಿ ಅಂದು ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಕೂಡ ಒಬ್ಬರು. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ಕಾಗೋಡು ಸತ್ಯಾಗ್ರಹ ಆರಂಭವಾದಾಗ ನೀವು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಿರಿ. ಅಂದಿನ ಸಾಮಾಜಿಕ ಸನ್ನಿವೇಶ ಹೇಗಿತ್ತು?

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಜಮೀನುದಾರರ ಭೂಮಿಯಲ್ಲಿ ಗೇಣಿದಾರರಾಗಿದ್ದ ರೈತರಿಗೆ ಸ್ವಾತಂತ್ರ್ಯದ ಅನುಭವವೇ ದಕ್ಕಿರಲಿಲ್ಲ. ಏಕೆಂದರೆ ಅಂತಹ ಗುಲಾಮಗಿರಿ ವ್ಯವಸ್ಥೆ ಸ್ವಾತಂತ್ರ್ಯ ದೊರಕಿದ ನಂತರವೂ ಜಾರಿಯಲ್ಲಿತ್ತು. ಕಾಗೋಡು ಚಳವಳಿ ಪರಿಣಾಮದಿಂದಲೇ ಗೇಣಿ ರೈತರಲ್ಲಿ ಹೊಸ ಪರಿಜ್ಞಾನ ಮೂಡಿ ಸ್ವಾತಂತ್ರ್ಯದ ಅನುಭವವಾಗಲು ದಾರಿ ಮಾಡಿಕೊಟ್ಟಿತು.

*ಕಾಗೋಡಿನಂತಹ ಒಂದು ಚಿಕ್ಕ ಗ್ರಾಮದಲ್ಲಿ ಕೆಲವೇ ರೈತರಿಂದ ಆರಂಭವಾದ ಸತ್ಯಾಗ್ರಹ ವ್ಯಾಪಕಗೊಳ್ಳಲು ಕಾರಣವಾದ ಸಂಗತಿ ಏನು?

ಭೂ ಮಾಲೀಕರ ಶೋಷಣೆ ಮಿತಿ ಮೀರಿದ್ದೇ ಇದಕ್ಕೆ ಕಾರಣ. ಗೇಣಿ ರೈತರು ಇಂತಿಷ್ಟು ಕಾಲ ಎಂದು ವರ್ಷದಲ್ಲಿ ಜಮೀನುದಾರರ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ಭೂ ಮಾಲೀಕರ ಎದುರು ಕುರ್ಚಿಯಲ್ಲಿ ಅವರು ಕೂರುವಂತಿರಲಿಲ್ಲ. ಮೊಣಕಾಲಿನ ಮೇಲೆ ಪಂಚೆಯನ್ನು ಎತ್ತಿ ಕಟ್ಟುವಂತಿರಲಿಲ್ಲ. ಬಹುಕಾಲದಿಂದ ಗೇಣಿ ರೈತರ ಅಂತರಂಗದಲ್ಲಿ ಕುದಿಯುತ್ತಿದ್ದ ಅಸಮಾಧಾನ ಚಳವಳಿ ರೂಪದಲ್ಲಿ ಸ್ಫೋಟಗೊಂಡಿತ್ತು.

*ಕಾಗೋಡು ಸತ್ಯಾಗ್ರಹ ಯಾವತ್ತಿಗೂ ಹಿಂಸೆಯ ರೂಪ ತಾಳದೆ ಅಹಿಂಸಾತ್ಮಕ ಮಾರ್ಗದಲ್ಲಿಯೇ ನಡೆದಿದ್ದಕ್ಕೆ ಕಾರಣವೇನು?

ಎಚ್.ಗಣಪತಿಯಪ್ಪ ಹಾಗೂ ಹಲವು ಪ್ರಮುಖರ ಸಮರ್ಥ ನಾಯಕತ್ವ ಚಳವಳಿಗೆ ದೊರಕಿತ್ತು. ಲೋಹಿಯಾ ಅವರು ಚಳವಳಿಯನ್ನು ಬೆಂಬಲಿಸಿ ಸಾಗರಕ್ಕೆ ಬಂದಾಗ ‘ಹಿಂಸಾ ಮತ್ ಕರೋ’ ಎಂಬ ಸಂದೇಶ ನೀಡುವ ಮೂಲಕ ಎಂತಹ ಸಂದರ್ಭ ಬಂದರೂ ಹಿಂಸೆಗೆ ಇಳಿಯಬಾರದು ಎಂದು ಸತ್ಯಾಗ್ರಹಿಗಳಿಂದ ಮಾತು ಪಡೆದಿದ್ದರು. ಅದನ್ನು ಸತ್ಯಾಗ್ರಹಿಗಳು ಕೊನೆಯವರೆಗೂ ಪಾಲಿಸಿದರು.

*ಭೂ ಸುಧಾರಣೆ ಕಾಯ್ದೆ ಜಾರಿಗೆ ಬರುವಾಗ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ನೇಮಿಸಿದ ಜಾಯಿಂಟ್ ಸೆಲೆಕ್ಟ್ ಕಮಿಟಿಯ ಸದಸ್ಯರಲ್ಲಿ ನೀವೂ ಒಬ್ಬರು. ಕಾಯ್ದೆ ಜಾರಿಗೊಳಿಸುವಲ್ಲಿ ಆದ ತೊಡಕುಗಳೇನು?

ಕಾಯ್ದೆ ಜಾರಿಗೊಳಿಸುವಾಗ ಸಹಜವಾಗಿ ಹಲವರಿಂದ ವಿರೋಧ ಬಂತು. ಅನೇಕ ಗೇಣಿ ರೈತರ ಬಳಿ ಅವರು ಗೇಣಿ ಮಾಡುತ್ತಿರುವ ಬಗ್ಗೆ ದಾಖಲೆಗಳೇ ಇರಲಿಲ್ಲ. ಗೇಣಿ ಭೂಮಿಯ ಸ್ವಾಧೀನವನ್ನು ಆಧರಿಸಿ ಪಹಣಿಯಲ್ಲಿ ಗೇಣಿ ರೈತರ ಹೆಸರು ಇಲ್ಲದೆ ಇದ್ದರೂ ಹಕ್ಕುಪತ್ರ ನೀಡಬೇಕು ಎಂದು ತೀರ್ಮಾನಿಸಿದ್ದು, ಹೆಚ್ಚಿನ ರೈತರಿಗೆ ಅನುಕೂಲವಾಯಿತು.

*ಮಲೆನಾಡು ಭಾಗದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಯಾದಷ್ಟು ಪರಿಣಾಮಕಾರಿಯಾಗಿ ರಾಜ್ಯದ ಇತರ ಭಾಗಗಳಲ್ಲಿ ಆಗದೆ ಇರಲು ಕಾರಣಗಳೇನು?

ಅಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ. ಇಲ್ಲಿ ಚಳವಳಿ ನಡೆದ ಪ್ರದೇಶ ಎನ್ನುವ ಕಾರಣಕ್ಕೆ ಕಾಯ್ದೆ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯಿತು. ಉಳಿದೆಡೆ ಅದರ ಮಹತ್ವ ಅಲ್ಲಿನ ಜನ
ಪ್ರತಿನಿಧಿಗಳಿಗೆ ಅರ್ಥವಾಗಲಿಲ್ಲ.

*ಕಾಗೋಡು ಸತ್ಯಾಗ್ರಹದ ಹೊರತಾಗಿಯೂ ಪರಿಶಿಷ್ಟ ಸಮುದಾಯದವರಿಗೆ ಭೂಮಿಯ ಹಕ್ಕು ದೊರಕದೆ ಇರುವುದು ಚಳವಳಿಯ ಮಿತಿಯಲ್ಲವೆ?

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಗೇಣಿದಾರರಾಗಿರಲಿಲ್ಲ. ಅವರೆಲ್ಲ ಆಗ ಜೀತದಾಳುಗಳಾಗಿದ್ದರು. ಹೀಗಾಗಿ
ಅವರಿಗೆ ಭೂಮಿಯ ಹಕ್ಕು ದೊರಕಲಿಲ್ಲ. ಆದರೆ, ನಂತರದ ವರ್ಷಗಳಲ್ಲಿ ಹಲವು ಯೋಜನೆಗಳ ಮೂಲಕ ಅವರಿಗೆ ಭೂಮಿಯ ಹಕ್ಕು ದೊರಕಿಸಿ ಕೊಟ್ಟಿದ್ದನ್ನು ಮರೆಯುವಂತಿಲ್ಲ.

*ಇಂದಿನ ಯುವ ತಲೆಮಾರಿಗೆ ಕಾಗೋಡು ಚಳವಳಿಯ ಮಹತ್ವ ಅರ್ಥವಾಗಿದೆಯೇ?

ಚಳವಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಮರೆವು ಬಹಳ ಬೇಗ ಬರುತ್ತದೆ. ಅದಕ್ಕೆ ಕಾಗೋಡು ಚಳವಳಿ ಕೂಡ ಹೊರತಾಗಿಲ್ಲ. ಚಳವಳಿಯ ಫಲಾನುಭವಿಗಳು ಯುವ ತಲೆಮಾರಿಗೆ ಆ ಬಗ್ಗೆ ತಿಳಿಸಿದರೆ ಮಾತ್ರ ಅವರಿಗೆ ಅದರ ಮಹತ್ವ ಅರ್ಥವಾಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT