ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಸಂದೇಶ ಜೈನ ಧರ್ಮದ ತಿರುಳು

Last Updated 23 ಮೇ 2022, 4:15 IST
ಅಕ್ಷರ ಗಾತ್ರ

ಸಾಗರ: ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರುವುದು ಜೈನ ಧರ್ಮದ ತಿರುಳು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿರುವ ಆದಿನಾಥಸ್ವಾಮಿ ಜೈನ ಬಸದಿಯಲ್ಲಿ ಭಾನುವಾರ ನಡೆದ ಆದಿನಾಥ ತೀರ್ಥಂಕರರ ಹಾಗೂ ಮಾನಸ್ಥಂಭೋಪರಿ ಚತುರ್ಮುಖಿ ಜಿನಬಿಂಬ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಅಹಿಂಸೆಯ ತತ್ವವನ್ನು ಪ್ರಧಾನವಾಗಿ ಇಟ್ಟುಕೊಂಡಿರುವ ಜೈನ ಧರ್ಮಕ್ಕೆ ಇತರ ಧರ್ಮಗಳನ್ನು ಕೂಡ ಗೌರವದಿಂದ ಕಾಣುವ ಗುಣವಿದೆ. ಈ ಭೂಮಿಯ ಮೇಲಿನ ಪ್ರತಿಯೊಬ್ಬರ ಬದುಕು ಹಸನಾಗಬೇಕು ಎಂಬ ಆಶಯವನ್ನು ಈ ಧರ್ಮ ಹೊಂದಿದೆ. ಧರ್ಮದ ತಿರುಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಹೇಳಿದರು.

ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಜೈನ ಧರ್ಮೀಯರು ಸ್ವಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುವ ದೊಡ್ಡ ಪರಂಪರೆ ಇದೆ. ಈ ಕಾರಣಕ್ಕಾಗಿಯೇ ಜೈನ ಧರ್ಮವನ್ನು ಎಲ್ಲರೂ ಗೌರವಿಸುತ್ತಾರೆ. ದೇಶದಲ್ಲಿ ಹೆಚ್ಚಿನ ಪಾಲು ತೆರಿಗೆ ನೀಡುತ್ತಿರುವವರು ಜೈನ ಧರ್ಮಿಯರಾಗಿದ್ದಾರೆ’ ಎಂದರು.

ಹೊಂಬುಜ ಜೈನ ಮಠಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಜೈನ ಸಮುದಾಯದ ಕೊಡುಗೆ ಅಪಾರ. ಈ ಕಾರಣಕ್ಕೆ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಹೊಂಬುಜ ಪದ್ಮಾವತಿ ಎಂದು ನಾಮಕರಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್. ಜಯಂತ, ‘ಅಪರಿಗ್ರಹ ಜೈನ ಧರ್ಮದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾಗಿದೆ. ಇದನ್ನು ಅಕ್ಷರಶಃ ಪಾಲಿಸಿದರೆ ದೇಶದಲ್ಲಿ ಭ್ರಷ್ಟಾಚಾರವೆಂಬುದೇ ಇಲ್ಲವಾಗುತ್ತದೆ. ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ’ ಎಂದರು.

ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಎಸ್.ಆರ್. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಕೆ.ಆರ್. ಗಣೇಶ್ ಪ್ರಸಾದ್, ತುಕಾರಾಮ್, ಸಂತೋಷ್ ಆರ್. ಶೇಟ್, ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್, ಪ್ರಮುಖರಾದ ರಾಜಕುಮಾರ್ ಜೈನ್, ಹೊಯ್ಸಳ, ದೀಪಕ್ ಮರೂರು, ಪ್ರಸನ್ನ ಕೆರೆಕೈ, ಪದ್ಮರಾಜ್ ಇದ್ದರು.

ಉನ್ನತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿ.ಟಿ. ಸ್ವಾಮಿ ಸ್ವಾಗತಿಸಿದರು. ಬಬಿತಾ ವಂದಿಸಿದರು. ಯಶೋಧರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT