ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಮತಾಂತರ ದೇಶಕ್ಕೇ ಗಂಡಾಂತರ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿಯಲ್ಲಿ ಆರಗ
Last Updated 6 ಜನವರಿ 2022, 4:39 IST
ಅಕ್ಷರ ಗಾತ್ರ

ಶಿವಮೊಗ್ಗ: ದಲಿತರು, ಹಿಂದುಳಿದ ವರ್ಗಗಳ ಮತಾಂತರ ತಡೆಯದೇ ಹೋದರೆ ದೇಶಕ್ಕೆ ದೊಡ್ಡ ಗಂಡಾಂತರ ಎದುರಾಗಲಿದೆ. ಮತಾಂತರಿಗಳಿಗೆ ಖಚಿತ ಶಿಕ್ಷೆ ನೀಡುವುದಕ್ಕಾಗಿಯೇ ಮಸೂದೆ ಮಂಡಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಜಾರಿ ಖಚಿತ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶುಭಮಂಗಳ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮತಾಂತರ ಹಿಂದೂ ಸಮಾಜಕ್ಕೆ ದೊಡ್ಡ ಪಿಡುಗು. ಧರ್ಮದ ಆಧಾರದ ಮೇಲೆ ಒಮ್ಮೆ ದೇಶವೇ ವಿಭಜನೆಯಾಗಿದೆ. ಮದುವೆಗಳನ್ನು ಮತಾಂತರದ ಅಸ್ತ್ರವಾಗಿ ಹಲವು ಕಡೆ ಬಳಸಿಕೊಳ್ಳಲಾಗುತ್ತಿದೆ. ಮತಾಂತರ ಪಿಡುಗು ದಲಿತರನ್ನಷ್ಟೇ ಸುತ್ತಿಕೊಂಡಿಲ್ಲ. ಹಿಂದುಳಿದ ವರ್ಗಗಳ ಬಳಿಯೂ ಬಂದು ನಿಂತಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇವೆ. ಮತಾಂತರವಾಗಿಯೂ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಇದುವರೆಗೆ ಮೂಲ ಜಾತಿಯ ಸೌಲಭ್ಯ ಪಡೆಯಲು ಅವಕಾಶವಿತ್ತು. ಆಮಿಷವೊಡ್ಡಿ ಮತಾಂತರ ಮಾಡಿದವರಿಗೆ ಶಿಕ್ಷೆ ಇರಲಿಲ್ಲ. ಈಗ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಶಿಕ್ಷೆ ಅಳವಡಿಸಲಾಗಿದೆ’ ಎಂದು ವಿವರ ನೀಡಿದರು.

‘ಕಾಂಗ್ರೆಸ್ ಎಂದೂ ಹಿಂದುಳಿದ ವರ್ಗಗಳ ಏಳಿಗೆ ಬಯಸಲಿಲ್ಲ. ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ಆರು ದಶಕಗಳು ದೇಶವನ್ನು ಆಳಿದರೂ ಕೆಳ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಲಿಲ್ಲ. ತಾವು ಸಿಂಹಾಸನದಲ್ಲಿ ಕೂತರು. ಮತ್ತಷ್ಟು ಶೋಷಿತರನ್ನಾಗಿ ಮಾಡಿದರು’ ಎಂದು ದೂರಿದರು.

‘ಬಿಜೆಪಿ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಮೋದಿ ಅವರೂ ಹಿಂದುಳಿದವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ತಲುಪಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುತ್ತಿದೆ. ಒಬಿಸಿ ಸಮುದಾಯ ತಲುಪುವಲ್ಲಿ ಬಿಜೆಪಿ ಯಶಸ್ವಿಯಾಗಿದೆ’ ಎಂದರು.

‘ಬಿಜೆಪಿಯದು ದೇಶ ಕಟ್ಟುವ ಸಿದ್ಧಾಂತ. ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೂ ಧರ್ಮ ಕೇವಲ ಜಾತಿಯಲ್ಲ. ಅದೊಂದು ಸಂಸ್ಕೃತಿ. ಎಲ್ಲಾ ಜಾತಿಗಳ ರಕ್ಷಣೆ ಇಲ್ಲಿ ಆಗುತ್ತದೆ. ರಾಜ್ಯದಲ್ಲಿ 17 ಶಾಸಕರು ಹಿಂದುಳಿದ ವರ್ಗಗಳಿಗೆ ಸೇರಿದವರಿದ್ದಾರೆ. ಸಂಸದರು, ವಿಧಾನಪರಿಷತ್, ಪಂಚಾಯಿತಿ, ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಹಿಂದುಳಿದ ವರ್ಗದವರು ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು, ‘ಹಿಂದುಳಿದ ವರ್ಗಗಳ ರಕ್ಷಣೆಗಾಗಿಯೇ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಸ್ತಿತ್ವಕ್ಕೆ ಬಂದಿದೆ. ಇದು ಪ್ರತಿ ಗ್ರಾಮ ಪಂಚಾಯಿತಿ, ಶಕ್ತಿ ಕೇಂದ್ರಗಳು, ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಯೋಜನೆಗಳು ಕಟ್ಟಕಡೆಯ ಪ್ರಜೆಗೂ ತಲುಪಬೇಕು’ ಎಂದರು.

ವಿಧಾನಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಸದಸ್ಯಎಂ.ಬಿ. ಭಾನುಪ್ರಕಾಶ್, ಮುಖಂಡರಾದ ಅಶ್ವತ್ಥನಾರಾಯಣ್, ಯಶ್ ಪಾಲ್ ಸುವರ್ಣ, ಅರುಣ್ ಜೀ, ಆರ್.ಕೆ. ಸಿದ್ಧರಾಮಣ್ಣ, ಟಿ.ಡಿ. ಮೇಘರಾಜ್, ದತ್ತಾತ್ರಿ, ಸುನೀತಾ ಅಣ್ಣಪ್ಪ, ಎಸ್‌.ಎನ್‌. ಚನ್ನಬಸಪ್ಪ, ಎಸ್‌.ಎಸ್‌.ಜ್ಯೋತಿ ಪ್ರಕಾಶ್, ಗುರುಮೂರ್ತಿ, ವಿವೇಕಾನಂದ, ಮಾಲತೇಶ್, ಅಶೋಕ್ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT