ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಹಿರಿಯ ಉಪನೋಂದಣಾಧಿಕಾರಿ ಕಚೇರಿಗಿಲ್ಲ ಸ್ವಂತ ಸೂರು

Published 15 ಫೆಬ್ರುವರಿ 2024, 5:51 IST
Last Updated 15 ಫೆಬ್ರುವರಿ 2024, 5:51 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ನೂರಾರು ಕೋಟಿ ಆದಾಯ ತಂದು ಸುರಿಯುವ ಇಲ್ಲಿನ ಹಿರಿಯ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್‌) ಕಚೇರಿಗೇ ಸ್ವಂತ ಕಟ್ಟಡವಿಲ್ಲ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ವಿನೋಬನಗರ ರಸ್ತೆಯ ಸೂಡ ಕಾಂಪ್ಲೆಕ್ಷ್‌ನ ಮೊದಲನೇ ಮಹಡಿಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಹಿರಿಯ ಉಪನೋಂದಣಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ತಿಂಗಳು ಕಟ್ಟಡಕ್ಕೆ ₹ 35,000 ಬಾಡಿಗೆ ಪಾವತಿಸಲಾಗುತ್ತಿದೆ.

ಉಪ ನೋಂದಣಾಧಿಕಾರಿ ಕಚೇರಿಗಳಿಂದ 2022–23ನೇ ಸಾಲಿನಲ್ಲಿ ಒಟ್ಟು ₹ 158 ಕೋಟಿ ಹಾಗೂ 2023ರ ಏಪ್ರಿಲ್ ತಿಂಗಳಿಂದ 2024ರ ಜನವರಿ ತಿಂಗಳವರೆಗೆ ₹ 136 ಕೋಟಿ ಆದಾಯ ಸರ್ಕಾರದ ಬೊಕ್ಕಸ ಸೇರಿದೆ. ಆದರೂ, ಹಿರಿಯ ಉಪ ನೋಂದಣಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿಲ್ಲ.

ಜಿಲ್ಲೆಯಲ್ಲಿ 6 ಉಪ ನೋಂದಣಿ ಕಚೇರಿಗಳು ಸೇವೆ ಒದಗಿಸುತ್ತಿವೆ. ಆದರೆ, ಶಿಕಾರಿಪುರದಲ್ಲಿ ಮಾತ್ರ ಸುಸಜ್ಜಿತ ಸರ್ಕಾರಿ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಉಳಿದೆಡೆ ಬಾಡಿಗೆ ಕಟ್ಟಡವೇ ಇದೆ. ವಾರ್ಷಿಕ ₹ 21 ಲಕ್ಷ ಬಾಡಿಗೆಯನ್ನು ಈ ಎಲ್ಲ ಕಟ್ಟಡಗಳಿಗೆ ಪಾವತಿಸಲಾಗುತ್ತಿದೆ.

ಸಾರ್ವಜನಿಕರಿಗೆ ಕಿರಿಕಿರಿ: ಹಿರಿಯ ಉಪನೋಂದಣಾಧೀಕಾರಿ ಕಚೇರಿಯಲ್ಲಿ ಆನ್‌ಲೈನ್ ಸೇವೆಯು ಸಾರ್ವಜನಿಕರಿಗೆ ಲಭ್ಯವಿದೆ. ಇಲ್ಲಿ ವಿವಾಹ ನೋಂದಣಿ, ಸಾಗುವಳಿ ಜಮೀನು ಒಪ್ಪಂದ ಪತ್ರ, ಕ್ರಯ ಪತ್ರ, ಸಾಲ ಅಡಮಾನ ಪತ್ರ, ಸಾಲ ತಿರುವಳಿ (ಖುಲಾಸೆ) ಪತ್ರ ಸೇರಿ ನಿತ್ಯ ಅನೇಕ ಅಗತ್ಯ ಸೇವೆ ಪಡೆಯಲು 800ರಿಂದ 1000 ಜನರು ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಮೂಲ ಸೌಕರ್ಯಗಳ ಕೊರತೆಇದೆ.

ಅಂಗವಿಕಲರು ಹಾಗೂ ವೃದ್ಧರಿಗೆ ಲಿಫ್ಟ್‌ ವ್ಯವಸ್ಥೆ ಇಲ್ಲ. ಮಟ್ಟಿಲು ಏರುವುದು ತ್ರಾಸದಾಯಕ. ಕಚೇರಿಯಲ್ಲಿ 30 ಜನರಿಗೆ ಮಾತ್ರ ಕೂರಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದವರು ನಿಂತುಕೊಂಡೇ ಸಿಬ್ಬಂದಿಯೊಂದಿಗೆ ವ್ಯವಹರಿಸಬೇಕು ಎಂಬುದು ಸಾರ್ವಜನಿಕರ ದೂರು.

ಉಪನೋಂದಣಿ ಕಚೇರಿಯಲ್ಲಿ ಆನ್‌ಲೈನ್ ಸೇವೆ ಲಭ್ಯವಿದ್ದರೂ ಅನೇಕ ವರ್ಷಗಳಿಂದ ಸಂಗ್ರಹಿಸಿಡಲಾದ ಕಡತಗಳು, ಬಹು ಮುಖ್ಯ ದಾಖಲೆಗಳು ಹಾಗೂ ಅರ್ಜಿಗಳ ನಿರ್ವಹಣೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ. ಇರುವ ಚಿಕ್ಕ ಕೊಠಡಿಯಲ್ಲೇ ದಾಖಲೆಗಳನ್ನು ಜೋಡಿಸಿಡಲಾಗಿದೆ. ಇಲ್ಲಿ ಇಲಿಗಳ ಉಪಟಳ ಕೂಡ ಹೆಚ್ಚಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಶೌಚಾಲಯ ಅವ್ಯವಸ್ಥೆ: ‘ಕಚೇರಿಯಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇಲ್ಲ. ಇರುವ ಒಂದೇ ಶೌಚಾಲಯವನ್ನು ಪುರುಷ ಹಾಗೂ ಮಹಿಳೆಯರು ಬಳಸಬೇಕು. ಅಗತ್ಯ ಸೇವೆಗಾಗಿ ಜನರು ಗಂಟೆಗಟ್ಟಲೆ ಕಾಯುವುದರ ಜೊತೆಗೆ ಶೌಚಾಲಯ ಬಳಸಲು ಕೂಡ ಕಾದು ನಿಲ್ಲಬೇಕು. ದಿನದಲ್ಲಿ ನೂರಾರು ಜನರು ಬಳಸುವ ಶೌಚಾಲಯದಲ್ಲಿ ಶುಚಿತ್ವ ಮರೀಚಿಕೆ ಆಗಿದೆ’ ಎಂದು ಸ್ಥಳೀಯರಾದ ಶಾಯಿನ್ ಹುಸೇನ್ ‘ಪ್ರಜಾವಾಣಿ’ ಎದುರು ದೂರಿದರು.

ಪಾರ್ಕಿಂಗ್ ಸಮಸ್ಯೆ: ವಿವಿಧ ಕೆಲಸಗಳಿಗೆ ನಿತ್ಯವೂ ನೂರಾರು ಮಂದಿ ಈ ಕಚೇರಿಗೆ ಭೇಟಿ ನೀಡುತ್ತಾರೆ. ದ್ವಿಚಕ್ರ ವಾಹನ ಹಾಗೂ ಕಾರುಗಳ ಮೂಲಕ ಕಚೇರಿಗೆ ತಲುಪುವವರು ಅವುಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಒದ್ದಾಡುತ್ತಿದ್ದಾರೆ. ಇಲ್ಲಿಗೆ ಬರುವವರು ನೂರಾರು ಮೀಟರ್ ದೂರದಲ್ಲಿ ವಾಹನ ನಿಲ್ಲಿಸಬೇಕಿದೆ. ಇದರಿಂದ ಅಂಗವಿಕಲರು ಹಾಗೂ ವೃದ್ಧರು ಸಮಸ್ಯೆ ಎದುರಿಸುತ್ತಿದ್ದಾರೆ.

ಶಿವಮೊಗ್ಗದ ವಿನೋಬನಗರದಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್‌) ಕಚೇರಿಯಲ್ಲಿ ಸೀಮಿತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಶಿವಮೊಗ್ಗದ ವಿನೋಬನಗರದಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್‌) ಕಚೇರಿಯಲ್ಲಿ ಸೀಮಿತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಸರ್ಕಾರಿ ನಿವೇಶನ ಗುರುತಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ.
ಗಿರೀಶ ಎನ್.ಬಿಸ್ಟನಗೌಡರ್ ಜಿಲ್ಲಾ ನೋಂದಣಾಧಿಕಾರಿ
ಕಚೇರಿಗೆ ಬರುವ ಜನರಿಗೆ ಸಮಸ್ಯೆ ಎದುರಾಗದಂತೆ ತ್ವರಿತಗತಿಯಲ್ಲಿ ಸೇವೆ ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರು ಹಾಗೂ ವೃದ್ಧರಿಗೆ ಅನುವಾಗಲು ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿ.ಧನಂಜಯ್ ಹಿರಿಯ ಉಪನೋಂದಣಾಧಿಕಾರಿ
ಕಚೇರಿ ಸ್ಥಳಾಂತರಕ್ಕೆ ಅಪಸ್ವರ
ನಗರದ ಹಿರಿಯ ಉಪನೋಂದಣಾಧಿಕಾರಿ ಬಳಿಯಲ್ಲಿ ಸೂಡ ಕಚೇರಿ ಹಾಗೂ 10ಕ್ಕೂ ಹೆಚ್ಚು ಪತ್ರ ಬರಹಗಾರರ ಮಳಿಗೆಗಳು ಮತ್ತು ಜೆರಾಕ್ಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಚೇರಿ ಸ್ಥಳಾಂತರಗೊಂಡರೆ ಇಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಮಸ್ಯೆ ಉಂಟಾಗಲಿದೆ. ಅವರಿಗೆ ಬದಲಿ ವ್ಯವಸ್ಥೆಗೆ ದಾರಿ ತೋಚದಂತಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಪ್ರಭಾವಿಗಳ ಅಧಿಕಾರ ಬಳಸಿ ಕಚೇರಿ ಸ್ಥಳಾಂತರ ಆಗದಂತೆ ತಡೆಯೊಡ್ಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT